ಕೋವಿಡ್ ನಿಯಮಾನುಸಾರ ಸಿದ್ದೇಶ್ವರ ಜಾತ್ರೆ ಆಚರಿಸಿ : ಸಿಪಿಐ ರವೀಂದ್ರ ನಾಯ್ಕೋಡಿ

ಕಾಗವಾಡ : ಜ.9:ತಾಲೂಕಿನ ಐನಾಪೂರ ಪಟ್ಟಣದಲ್ಲಿ ಮಕರ ಸಂಕ್ರಮಣ ದಿನದಿಂದ ಸತತ ಐದು ದಿನಗಳವರೆಗೆ ಜರುಗಲಿರುವ ಸಿದ್ದೇಶ್ವರ ಜಾತ್ರಾ ಮಹೋತ್ಸವವನ್ನು ಕೋವಿಡ್ ಮಾರ್ಗಸೂಚಿಯಂತೆ ನಡೆಸಲು ಎಲ್ಲ ಸಿದ್ಧತೆಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಸಿಪಿಐ ರವೀಂದ್ರ ನಾಯ್ಕಡಿ ಅವರು ಸೂಚನೆ ನೀಡಿದರು.

ಅವರು ತಾಲೂಕಿನ ಐನಾಪೂರ ಪಟ್ಟಣದ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಜಾತ್ರಾ ಮಹೋತ್ಸವದ ಸಿದ್ಧತೆ ಕುರಿತು ಜರುಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಾ ಕಾನೂನು ಸುವ್ಯವಸ್ಥೆ ಹಾಗೂ ಪೆÇಲೀಸ್ ಬಂದೋಬಸ್ತ್ ನಿರ್ವಹಣೆಗಾಗಿ ಅಗತ್ಯವಿರುವ ಕಡೆ ಬ್ಯಾರಿಕೆಡ್‍ಗಳ ವ್ಯವಸ್ಥೆ, ವಾಹನ ಸಂಚಾರ, ಹಾಗೂ ನಿಲುಗಡೆ, ಸಾರ್ವಜನಿಕರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ರೋಗ ಬಾರದಂತೆ ಔಷದೋಪದಾರ, ಚುಚ್ಚುಮದ್ದುಗಳನ್ನು ಹಾಕಿಸುವ ಕ್ರಮ ಜರುಗಿಸುವಂತೆ ಜಾತ್ರಾ ಕಮೀಟಿಗೆ ತಿಳಿಸಿದರು.

ಅನಂತರ ತಹಸೀಲ್ದಾರ ರಾಜೇಶ ಬುರ್ಲಿ ಮಾತನಾಡಿ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಲಿರುವ ಹಿನ್ನೆಲೆಯಲ್ಲಿ ರೋಗಗಳು ಹರಡದಂತೆ ಮುಂಜಾಗ್ರತಾ ವಹಿಸಬೇಕು, ಸರ್ಕಾರದ ಇತ್ತೀಚಿನ ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವ ಕ್ರಮಗಳಿಗೆ ಮುಂದಾಗಬೇಕು ಎಂದರು.

ಈ ವೇಳೆ ಪಿಎಸ್‍ಐ ಹಣಮಂತ ನರಳೆ, ಮುಖ್ಯಾಧಿಕಾರಿ ಅನೀಲಕುಮಾರ ಕುಲಕರ್ಣಿ, ಪ್ರಕಾಶ ಪುಠಾಣಿ, ಸುಭಾಷ ಪಾಟೀಲ, ರಾಜುಗೌಡ ಪಾಟೀಲ, ಅರುಣ ಗಾಣಿಗೇರ, ಸಂಜಯ ಬಿರಡಿ, ಸುರೇಶ ಗಾಣಿಗೇರ, ಗುರುರಾಜ ಮಡಿವಾಳರ, ಅಮಗೌಡ ವಡೆಯರ ಸೇರಿದಂತೆ ಅನೇಕರು ಇದ್ದರು.