ಕೋವಿಡ್ ನಿಯಮಾನುಸಾರ ಜಯಂತಿ ಆಚರಣೆಗೆ ನಿರ್ಧಾರ

ಧಾರವಾಡ, ಮಾ.26: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಏಪ್ರಿಲ್ 5 ರಂದು ಡಾ.ಬಾಬು ಜಗಜೀವನರಾಂ ಹಾಗೂ ಏಪ್ರಿಲ್ 14 ರಂದು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಗಳನ್ನು ಸರ್ಕಾರದ ನಿಯಮಗಳಿಗೆ ಅನುಸಾರವಾಗಿ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು,

ಸರ್ಕಾರವು ಕೋವಿಡ್ ಪರಿಸ್ಥಿತಿ ಆಧರಿಸಿ ನೀಡುವ ನಿರ್ದೇಶನಗಳಿಗೆ ಬದ್ಧವಾಗಿ ಈ ಕಾರ್ಯಕ್ರಮಗಳನ್ನು ಆಚರಿಸಲಾಗುವುದು. ಡಾ.ಬಾಬು ಜಗಜೀವನರಾಮ್ ಜಯಂತಿಗೆ ಪೂರ್ವಭಾವಿಯಾಗಿ ಏಪ್ರೀಲ್ 04 ರಂದು ಸಂಜೆ ಸೈದಾಪುರದ ವಿದ್ಯಾರ್ಥಿನಿಲಯದಲ್ಲಿ ವಿಚಾರ ಸಂಕಿರಣ, ಏಪ್ರಿಲ್ 5 ರಂದು ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಜಯಂತಿ ಸಮಾರಂಭ ಏರ್ಪಡಿಸಲಾಗುವುದು. ಡಾ.ಅಂಬೇಡ್ಕರ್ ಜಯಂತಿಗೆ ಪೂರ್ವಭಾವಿಯಾಗಿ ಏಪ್ರಿಲ್ 13 ರಂದು ಸಂಜೆ ಸಪ್ತಾಪುರ ವಿದ್ಯಾರ್ಥಿನಿಲಯದಲ್ಲಿ ವಿಚಾರ ಸಂಕಿರಣ, ಏಪ್ರೀಲ್ 14 ರಂದು ಅಂಬೇಡ್ಕರ್ ಭವನದಲ್ಲಿ ಜಯಂತಿ ಕಾರ್ಯಕ್ರಮ ಏರ್ಪಡಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಈ ಸಂದರ್ಭದಲ್ಲಿ ಕರಡಿ ಮಜಲು, ಕಹಳೆ ಜನಪದ ಕಲೆಗಳ ಪ್ರದರ್ಶನ, ಜಗಜೀವನರಾಮ್ ಹಾಗೂ ಅಂಬೇಡ್ಕರ್ ಕುರಿತ ಹಾಡುಗಳ ಕಾರ್ಯಕ್ರಮ,ಪ್ರತಿಭಾವಂತರು ಹಾಗೂ ಸಾಧಕರಿಗೆ ಸನ್ಮಾನ ಹಮ್ಮಿಕೊಳ್ಳಲಾಗುವುದು.

ಧಾರವಾಡ ಕೃಷಿ ವಿ.ವಿ.ಗೆ ಡಾ.ಬಾಬು ಜಗಜೀವನರಾಮ್ ಅವರ ನಾಮಕರಣ,ಪ.ಜಾತಿ ಹಾಗೂ ಪ.ಪಂಗಡಗಳ ಕುಂದುಕೊರತೆ ಸಭೆ ನಿರಂತರವಾಗಿ ನಡೆಯಬೇಕು ಸಭೆಯಲ್ಲಿ ಹಾಜರಿದ್ದ ಮುಖಂಡರು ಒತ್ತಾಯಿಸಿದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎನ್.ಆರ್.ಪುರುμÉೂೀತ್ತಮ, ಸಹಾಯಕ ನಿರ್ದೇಶಕಿ ಎಂ.ಬಿ.ಸಣ್ಣೇರ, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.