ಕೋವಿಡ್ ನಿಯಂತ್ರಿಸುವಲ್ಲಿ ಕೇಂದ್ರ, ರಾಜ್ಯ ವಿಫಲ:ಖಂಡನೆ

ಬಳ್ಳಾರಿ, ಜೂ.02: ಕೋವಿಡ್ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಲಕ್ಷ್ಯವಾಗಿ ನಡೆದುಕೊಂಡು ವಿಫಲವಾಗಿರುವುದನ್ನು ಖಂಡಿಸಿ ಎಸ್.ಯು.ಸಿ.ಐ (ಸಿ), ಸಿಪಿಐ (ಎಂ), ಸಿಪಿಐ, ಆರ್.ಪಿ.ಐ ಹಾಗೂ ಇನ್ನಿತರ, ಎಡ-ಪ್ರಜಾಸತ್ತಾತ್ಮಕ ಪಕ್ಷಗಳ ಒಕ್ಕೂಟದ ವತಿಯಿಂದ ಮನೆ ಮನೆಯಿಂದ ರಾಜ್ಯ ಮಟ್ಟದ ಆನ್ ಲೈನ್ ಪ್ರತಿಭಟನೆ ನಡೆಸಲಾಯಿತು.
ಎರಡನೇ ಅಲೆಯ ಮುನ್ಸೂಚನೆ ಇದ್ದರೂ ಸಹ, ಕೇಂದ್ರ-ರಾಜ್ಯ ಸರ್ಕಾಗಳು ಅದನ್ನು ಗಂಭೀರ ವಿಷಯವಾಗಿ ಪರಿಗಣಿಸಲಿಲ್ಲ. ಲಸಿಕೆ, ವೆಂಟಿಲೇಟರ್, ಆಕ್ಸಿಜನ್ ಗಳನ್ನು ಬೇಕಾದಷ್ಟು ಒದಗಿಸಲು ಸರ್ಕಾರಗಳು ಬೇಜಾವಾಬ್ದಾರಿಯನ್ನು ತೋರಿದ್ದು ಅತ್ಯಂತ ಖಂಡನೀಯ. ಕೋವಿಡ್ ಮೊದಲ ಅಲೆಯನ್ನು ಬಳಸಿಕೊಂಡು ರೈತ ವಿರೋಧಿ ಮೂರು ಕೃಷಿ ಕಾನೂನುಗಳನ್ನು ತಂದು ರೈತ ಸಂಕುಲದ ಮೇಲೆ ಕೇಂದ್ರ ಸರ್ಕಾರ ಗದಾಪ್ರಹಾರ ಮಾಡಿದೆ. ಕೇಂದ್ರ-ರಾಜ್ಯ ಸರ್ಕಾರಗಳು ಕೇವಲ ಪ್ಯಾಕೇಜ್‍ಗಳನ್ನು ಘೋಷಣೆ ಮಾಡುತ್ತದೆಯೇ ಹೊರತು, ಕೊರಾನ ಪರಿಸ್ಥಿತಿಯಿಂದ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಯಾವ ರೀತಿಯ ಸೂಕ್ತ ಪರಿಹಾರ ನೀಡಿಲ್ಲ ಎಂದಿದ್ದಾರೆ.
ಸರ್ವರಿಗೂ ಶೀಘ್ರದಲ್ಲಿ ಉಚಿತ ಲಸಿಕೆ, ಔಷಧಿ, ಚಿಕಿತ್ಸೆ ಒದಗಿಸಿ, ನೇರ ನಗದು ಹಾಗೂ ಉಚಿತ ಪಡಿತರ ನೀಡಿರಿ, ರೈತ-ಕಾರ್ಮಿಕ ವಿರೋಧಿ ಕಾನೂನುಗಳನ್ನು ರದ್ದುಪಡಿಸಿ, ಉದ್ಯೋಗ ಖಾತ್ರಿ ಯೋಜನೆ 200ದಿನಕ್ಕೆ ಹೆಚ್ಚಿಸಿ ಹಾಗೂ ನಗರಗಳಿಗೂ ವಿಸ್ತರಿಸಿ, ಕೋವಿಡ್ ವಾರಿಯರ್ಸ್‍ಗೆ ಸುರಕ್ಷತೆ ಒದಗಿಸಬೇಕು ಸೇರಿದಂತೆ ಇತರೆ ಬೇಡಿಕೆಗಳ ಈ‌ಡೇರಿಸಬೇಕು ಎಂದು ಪ್ರತಿಭಟನೆಯಲ್ಲಿ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಸ್.ಯು.ಸಿ.ಐ ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಉಪಾದ್ಯ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಆರ್.ಎಸ್ ಬಸವರಾಜ, ಸಿಪಿಐ ಜಿಲ್ಲಾ ಕಾರ್ಯದರ್ಶಿ ನಾಗಭೂಷಣ್ ರಾವ್ ಮತ್ತು ಆರ್.ಪಿ.ಐ ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಮತ್ತಿತರರು ಭಾಗವಹಿಸಿದ್ದರು.