ಕೋವಿಡ್ ನಿಯಂತ್ರಿಸಲು ಉದ್ಯಮ ಮಾಲೀಕರು ಸಹಕರಿಸಬೇಕು

ಚಾಮರಾಜನಗರ, ಮಾ.31- ಕೋವಿಡ್-19 2ನೇ ಅಲೆಯನ್ನು ತಡೆಯುವ ಮುಂಜಾಗ್ರತಾ ಕ್ರಮವಾಗಿ ಕೈಗೊಳ್ಳಬೇಕಿರುವ ಕ್ರಮಗಳನ್ನು ಪಾಲಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿರುವ ಎಲ್ಲಾ ಉದ್ಯಮಗಳ ಮಾಲೀಕರು ಸಹಕರಿಸಬೇಕೆಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ನಡೆದ ಲಾರಿ ಮಾಲೀಕರು, ಹೋಟೆಲ್ ಮಾಲೀಕರು, ವರ್ತಕರು, ಹಾಗೂ ಚಲನಚಿತ್ರ ಮಂದಿರ ಮಾಲೀಕರ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್ ತಡೆಯುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿರುವ ಎಲ್ಲಾ ಉದ್ಯಮಿಗಳು ಸಹಕರಿಸಬೇಕಿದೆ. ರೋಗ ಹರಡದಂತೆ ತಡೆಯುವ ನಿಟ್ಟಿನಲ್ಲಿ ವರ್ತಕರು, ಹೋಟೆಲ್, ವಾಹನ, ಚಲನಚಿತ್ರ ಮಂದಿರ ಸೇರಿದಂತೆ ಎಲ್ಲಾ ಅಂಗಡಿ ಮುಂಗಟ್ಟು ಉದ್ಯಮಗಳಲ್ಲಿ ಕೋವಿಡ್ ತಡೆಗಾಗಿ ವಹಿಸಬೇಕಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಿದೆ ಎಂದರು.
ಗ್ರಾಹಕರು, ಉದ್ಯಮ ನಡೆಸುತ್ತಿರುವವರು ಉದೋಗ ಸ್ಥಳದಲ್ಲಿ ಕಡ್ಡಾಯವಾಗಿ ನೌಕರರು ಮಾಸ್ಕ್ ಧರಿಸಲು ಸೂಚಿಸಬೇಕು. ಸ್ಯಾನಿಟೈಜರ್ ಬಳಕೆ ಮಾಡಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಕೋವಿಡ್ ನಿಯಮಗಳನ್ನು ಪಾಲನೆ ಮಾಡದೇ ಇರುವವರ ವಿರುದ್ದ ದಂಡ ವಿಧಿಸಲಾಗುತ್ತದೆ. ಈ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಹೆಚ್ಚುವರಿ ಜಿಲ್ಲಾಧಿಕಾರಿ ತಿಳಿಸಿದರು.
ಕೇರಳ ರಾಜ್ಯಗಳಿಂದ ಬರುವ ಸರಕು ಸಾಗಾಣಿಕೆ ವಾಹನಗಳ ಚಾಲಕರು ಮತ್ತು ಸಹಾಯಕರು ಹಾಗೂ ಹೋಟೆಲ್ ಕಾರ್ಮಿಕರುಗಳಿಗೆ ಕಡ್ಡಾಯವಾಗಿ ಸೂಚಿಸಲಾಗಿರುವ ಅವಧಿಗೆ ಆರ್.ಟಿ.ಪಿ.ಸಿ.ಆರ್ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ಸೂಚಿಸಿದರು.
ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷರು ಜಯಸಿಂಹ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ಪಾಪಣ್ಣ, ಕಾರ್ಯದರ್ಶಿ ಪ್ರತಾಪ್, ವರ್ತಕರ ಸಂಘದ ಅಧ್ಯಕ್ಷರಾದ ರವಿಶಂಕರ್, ಲಾರಿ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷರಾದ ಮುರುಳಿ, ಖಜಾಂಚಿ ಸುರೇಶ್ ಇತರೆ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು.