ಕೋವಿಡ್ ನಿಯಂತ್ರಿಸಲು ಅಧಿಕಾರಿಗಳಿಗೆ ಶಾಸಕ ಚಾಟಿ

ದೇವದುರ್ಗ.ಏ.೨೭-ತಾಲೂಕಿನಲ್ಲಿ ದಿನೇದಿನೆ ಕರೊನಾ ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿದ್ದು, ಇದರ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕು. ಸರ್ಕಾರದ ನಿಯಮಗಳು ಹಾಗೂ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕ ಕೆ.ಶಿವನಗೌಡ ನಾಯಕ ಸೂಚಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೊನಾ ಹಿನ್ನೆಲೆ ನಡೆದ ಅಧಿಕಾರಿಗಳ ಸಭೆಯಲ್ಲಿ ಮಂಗಳವಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೊಪ್ಪರ, ಇರಬಗೇರಾ, ಅರಕೇರಾ ಹೋಬಳಿಯಲ್ಲಿ ಪಾಸಿಟಿವ್ ಸಂಖ್ಯೆಗಳು ದಿನೇ ದಿನೆ ಹೆಚ್ಚುತ್ತಿವೆ. ಪಾಸಿಟಿವ್ ಬಂದವರು ಹೋಂ ಕ್ವಾರಂಟೈನ್‌ಗೆ ಒಳಗಾಗದೇ ಹೊರಗಡೆ ಓಡಾಡುತ್ತಿದ್ದಾರೆ ಎಂದು ಜನರು ನನಗೆ ಫೋನ್ ಮಾಡಿ ಹೇಳುತ್ತಿದ್ದಾರೆ. ನೀವು ಏನು ಮಾಡುತ್ತಿದ್ದೀರಿ?. ಅಂಥವರನ್ನು ಮನೆಯಲ್ಲೇ ಕ್ವಾರಂಟೈನ್ ಮಾಡಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದರು.
ಕರೊನಾ ವೈರಸ್ ಹರಡುವುದನ್ನು ತಡೆಯಲು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪ್ರತಿಯೊಬ್ಬರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಬೇಕು. ಈ ಬಗ್ಗೆ ಗ್ರಾಪಂ ವ್ಯಾಪ್ತಿಯಲ್ಲಿ ಡಂಗೂರ ಸಾರಿ ಜನರಿಗೆ ಅರಿವು ಮೂಡಿಸಬೇಕು. ಪಟ್ಟಣದಲ್ಲಿ ಪುರಸಭೆ ವಾಹನದಲ್ಲಿ ಜಾಗೃತಿ ಮೂಡಿಸಿ. ಪ್ರತಿಯೊಬ್ಬರೂ ವ್ಯಾಕ್ಸಿನ್ ಪಡೆಯಲು ತಿಳಿಸಿ. ಪಿಡಿಒಗಳು, ಗ್ರಾಪಂ ಮಟ್ಟದ ಅಧಿಕಾರಿಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಇಂತಿಷ್ಟು ಟಾರ್ಗೇಟ್ ನೀಡಿ ಎಂದು ತಿಳಿಸಿದರು.
ಟಿಎಚ್‌ಒ ಡಾ.ಬನದೇಶ್ವರ ಮಾತನಾಡಿ, ಕರೊನಾ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ೪೫ವರ್ಷ ಮೇಲ್ಪಟ್ಟ ಜನರಿಗೆ ವಾಕ್ಸಿನ್ ಹಾಕಲಾಗುತ್ತಿದೆ. ಆಶಾ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗೆ ಟಾರ್ಗೇಟ್ ನೀಡಲಾಗಿದೆ. ಪಾಸಿಟಿವ್ ಬಂದವರನ್ನು ಮನೆಯಲ್ಲೇ ಕ್ವಾರಂಟೈನ್ ಮಾಡಲಾಗುತ್ತಿದೆ ಎಂದರು.
ಡಿಎಚ್‌ಒ ರಾಮಕೃಷ್ಣ ಮಾತನಾಡಿ, ವ್ಯಾಕ್ಸಿನ್ ಪಡೆಯಲು ಜನರು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸಿ, ಮನೆಮನೆಗೆ ತೆರಳಿ ಜನರ ಮನವೊಲಿಸುತ್ತಿದ್ದೇವೆ. ಎಲ್ಲ ತಾಲೂಕಿನಲ್ಲೂ ವ್ಯಾಕ್ಸಿನ್ ಕಡ್ಡಾಯವಾಗಿ ಹಾಕಿಸಲು ಹಿರಿಯ ನಾಗರಿಕರಿಗೆ ಸೂಚಿಸಲಾಗಿದೆ. ಜತೆಗೆ ಆರೋಗ್ಯ ಇಲಾಖೆ ಸಿಬ್ಬಂದಿಗೂ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಶಾಸಕ ಕೆ.ಶಿವನಗೌಡ ನಾಯಕ ಮಾತನಾಡಿ, ಪಿಡಿಒಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಕಡ್ಡಾಯವಾಗಿ ಇರಬೇಕು. ಅಲ್ಲಿನ ಜನರ ಸಮಸ್ಯೆ ಆಲಿಸುವ ಜತೆಗೆ ಸಾರ್ವಜನಿಕರು ಫೋನ್ ಮಾಡಿದಾಗ ಸಮಸ್ಯೆ ಆಲಿಸಿ, ಪರಿಹರಿಸಲು ಮುಂದಾಗಬೇಕು. ಗ್ರಾಮೀಣ ಭಾಗದಲ್ಲಿ ಎಲ್ಲಿಯೂ ಕುಡಿವ ನೀರಿನ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.
ಎಲ್ಲೆಡೆ ಕುಡಿವ ನೀರಿನ ಅಗತ್ಯವಿದ್ದು, ನೀರು ಸಂಗ್ರಹ ಹಾಗೂ ಪೂರೈಕೆಗೆ ವಿದ್ಯುತ್ ಅವಶ್ಯವಿದೆ. ಅನಗತ್ಯವಾಗಿ ವಿದ್ಯುತ್ ಕಡಿತ ಮಾಡಬಾರದು ಎಂದು ಜೆಸ್ಕಾಂ ಇಂಜಿನಿಯರ್ ವೆಂಕಟೇಶಗೆ ತಿಳಿಸಿದರು. ಸ್ಥಳೀಯವಾಗಿ ಜನರು ಮನೆಯಿಂದ ಹೊರಬರದಂತೆ ಜಾಗೃತಿ ಮೂಡಿಸಬೇಕು ಎಂದು ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು. ದಿನದಲ್ಲಿ ಎರಡ್ಮೂರು ಸಲ ರೌಂಡ್ಸ್ ಹಾಕಬೇಕು. ಗ್ರಾಮೀಣ ಭಾಗಕ್ಕೂ ಹೋಗಿ, ಪರಿಸ್ಥಿತಿ ಅವಲೋಕ ಮಾಡಬೇಕು. ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಎಲ್ಲ ರೀತಿಯ ಸಹಕಾರ ನೀಡಬೇಕು ಎಂದು ಪೊಲೀಸ್ ಇಲಾಖೆಯ ಸಿಪಿಐ ಆರ್.ಎಂ.ನದಾಫ್, ಪಿಐ ಹನುಮಂತಪ್ಪ ಸಣ್ಣಮನಿಗೆ ಶಾಸಕರು ಸೂಚಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಮಧುರಾಜ್ ಯಾಳಗಿ, ಗ್ರೇಡ್-೨ ತಹಸೀಲ್ದಾರ್ ಶ್ರೀನಿವಾಸ್ ಚಾಪಲ್, ಬಿಇಒ ಡಾ.ಆರ್.ಇಂದಿರಾ, ಕೃಷಿ ಇಲಾಖೆ ತಾಲೂಕು ಸಹಾಯಕ ನಿರ್ದೇಶಕಿ ಎಸ್.ಪ್ರಿಯಾಂಕ, ತಾಪಂ ಇಒ ಪಂಪಾಪತಿ ಹಿರೇಮಠ, ಬಸಣ್ಣ ನಾಯಕ ಹಾಗೂ ವಿವಿಧ ಗ್ರಾಪಂ ಪಿಡಿಒಗಳು ಇದ್ದರು.