ಕೋವಿಡ್ ನಿಯಂತ್ರಣ: ಸಾರ್ವಜನಿಕರು ಕಟ್ಟುನಿಟ್ಟಾಗಿ ಮಾರ್ಗಸೂಚಿ ಪಾಲಿಸಲು ಸೂಚನೆ

ದಾವಣಗೆರೆ, ಏ.18; ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್-19 ಪ್ರಕರಣಗಳು ವರದಿಯಾಗುತ್ತಿದೆ. ಕೋವಿಡ್ 2ನೇ ಅಲೆಯ ಅಪಾಯ ಕಂಡುಬರುತ್ತಿದ್ದು, ಇದನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರವು ಈ ಹಿಂದಿನ ಸಡಿಲಿಕೆಯ ಮಾರ್ಗಸೂಚಿಗಳಲ್ಲಿ ಕೆಲವು ಬದಲಾವಣೆ ಮಾಡಿ ಮರು ಆದೇಶ ಹೊರಡಿಸಿದೆ. ಸಾರ್ವಜನಿಕರು ಈ ಕೆಳಕಂಡ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ. ಸಾಮಾಜಿಕ ಆಚರಣೆಗಳು/ ಸಮಾರಂಭಗಳಲ್ಲಿ ಭಾರತ ಸರ್ಕಾರದ ಮಾರ್ಗಸೂಚಿಯಂತೆ 3.25 ಚ.ಮಿ ಪ್ರತಿ ವ್ಯಕ್ತಿಗೆ ಮಾನದಂಡವನ್ನು ಪಾಲಿಸುವುದು. ಕಡ್ಡಾಯವಾಗಿರುತ್ತದೆ. ಮದುವೆಗಳಿಗೆ ತೆರೆದ ಪ್ರದೇಶಗಳಲ್ಲಿ 200 ಜನ ಮೀರದಂತೆ ಮದುವೆ ನೆರವೇರಿಸಬಹುದು. ಕಲ್ಯಾಣ ಮಂಟಪ, ಸಭಾಂಗಣಗಳು, ಹಾಲ್ ಗಳು ಇತ್ಯಾದಿ ಮುಚ್ಚಿದ ಪ್ರದೇಶಗಳಲ್ಲಿ 100 ಜನ ಮೀರದಂತೆ ಜನ ಸೇರಿಸಿ ಮದುವೆ ಕಾರ್ಯ ನಡೆಸಬಹುದು. ಜನ್ಮದಿನ ಹಾಗೂ ಇತರ ಆಚರಣೆಗಳನ್ನು ತೆರೆದ ಪ್ರದೇಶಗಳಲ್ಲಿ 50 ಜನ ಮೀರದಂತೆ. ಸಭಾಂಗಣಗಳು/ಹಾಲ್‌ಗಳು ಇತ್ಯಾದಿ ಮುಚ್ಚಿದ ಪ್ರದೇಶಗಳಲ್ಲಿ 25 ಜನ ಮೀರದಂತೆ ನಡೆಸುವುದು. ಅಂತ್ಯಕ್ರಿಯೆಯಲ್ಲಿ 25 ಜನ ಮೀರದಂತೆ ಪಾಲ್ಗೊಳ್ಳುವುದು. ಇತರೆ ಸಮಾರಂಭಗಳಿಗೆ 50 ಜನ ಮೀರದಂತೆ ಹಾಲ್‌ನ ವಿಸ್ತೀರ್ಣಕ್ಕೆ ಅನುಗುಣವಾಗಿ ನಡೆಸುವುದು. ಧಾರ್ಮಿಕ ಆಚರಣೆಗಳು ಅಥವಾ ಸಮಾರಂಭಗಳನ್ನು ನಿಷೇಧಿಸಲಾಗಿದೆ. ರಾಜಕೀಯ ಆಚರಣೆಗಳು,ಸಮಾರಂಭಗಳನ್ನು ತೆರೆದ ಪ್ರದೇಶಗಳಲ್ಲಿ 200 ಜನ ಮೀರದಂತೆ ನಡೆಸುವುದು. ಜನರು ಕಡ್ಡಾಯವಾಗಿ ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಂಬಂಧಪಟ್ಟ ಇಲಾಖೆಗಳು ಹೊರಡಿಸಿರುವ ಪ್ರಮಾಣಿತ ಕಾರ್ಯವಿಧಾನವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಭಾಂಗಣ, ಕಲ್ಯಾಣಮಂಟಪ, ಸಿನಿಮಾ ಮಂದಿರ, ಹಾಲ್‌ಗಳು ಮತ್ತು ಆಚರಣೆಗಾಗಿ ಜನ ಸೇರುವ ಇತ್ಯಾದಿ ಪ್ರದೇಶಗಳ ಉಸ್ತುವಾರಿ ಹಒಂದಿದವರು ಕಡ್ಡಾಯವಾಗಹಿ ಸ್ಯಾನಿಟೈಸ್ ಕ್ರಮಗಳನ್ನು ತಪ್ಪದೆ ಅನುಸರಿಸಬೇಕು. ಸಾಮಾಜಿಕ ಅಂತರ ಪಾಲನೆ ಮಾಡದ, ಮುಖಗವಸು (ಮಾಸ್ಕ್) ಧರಿಸದೇ ಇರುವ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದಕ್ಕೆ ಈ ಹಿಂದಿನಂತೆ ದಂಡವನ್ನು ವಿಧಿಸಲಾಗುವುದು. ಮತ್ತು ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ದ ವಿಪತ್ತು ನಿರ್ವಹಣಾ ಕಾಯ್ದ್ಟೆ-2005 ರ ಅಡಿ ಹಾಗೂ ಕನಾಟಕ ಸಾಂಕ್ರಾಮಿಕ ಕಾಯ್ದೆ ಅನ್ವಯ ಕಾನೂನು ಕ್ರಮ ತೆಗೆದುಕೊಳ್ಳಲು ಸರ್ಕಾರದ ನಿಯಮಾವಳಿಗಳಲ್ಲಿ ಅವಕಾಶವಿರುತ್ತದೆ. ಹೀಗಾಗಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಕೋವಿಡ್-19 ರೋಗವನ್ನು ನಿಯಂತ್ರಿಸಲು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.