ಕೋವಿಡ್ ನಿಯಂತ್ರಣ ಸಮಸ್ಯೆ ಇತ್ಯರ್ಥಕ್ಕೆ ಒತ್ತಾಯ

ಕಲಬುರಗಿ :ಏ.26:ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ವ್ಯಾಪಿಸುತ್ತಿದ್ದು, ಸಮರ್ಪಕ ಚಿಕಿತ್ಸೆ ದೊರೆಯಲು ಇರುವಲ್ಲಿ ಸಮಸ್ಯೆಗಳನ್ನು ನಿವಾರಿಸಬೇಕು ಎಂದು ನಯಾ ಸವೇರಾ ಸಂಘಟನೆ ಜಿಲ್ಲಾಧ್ಯಕ್ಷ ಮೋದಿನ್ ಪಟೇಲ್ ಅಣಬಿ ಅವರು ಒತ್ತಾಯಿಸಿದರು.
ಸೋಮವಾರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ ಅವರು, ಕೊರೋನಾ ಎಂಬ ಮಹಾಮಾರಿ ಇಡೀ ಜಗತ್ತನ್ನು ಆವರಿಸಿದೆ. ಇದರಿಂದ ಜನರ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ರೋಗದಿಂದ ಜನರಿಗೆ ತೊಂದರೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ದಿನನಿತ್ಯ ಸಾವಿರಾರು ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಆಸ್ಪತ್ರೆಗಳಲ್ಲಿ ಸರಿಯಾಗಿ ಆಮ್ಲಜನಕ ಸಿಗುತ್ತಿಲ್ಲ. ಬೆಡ್‍ಗಳ ಕೊರತೆ ಆಗಿದೆ. ವೆಂಟಿಲೇಟರ್ ಸಿಗುತ್ತಿಲ್ಲ. ಔಷಧಿಗಳು ಲಭ್ಯವಿಲ್ಲ. ಔಷಧಿಗಳು ಕಾಳ ಸಂತೆಯಲ್ಲಿ ಮಾರಾಟವಾಗಿವೆ. ಇಷ್ಟಾದರೂ ಜಿಲ್ಲಾಡಳಿತವು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸರಿಯಾಗಿ ಔಷಧಿಗಳು ಆಮ್ಲಜನಕ, ವೆಂಟಿಲೇಟರ್, ಬೆಡ್‍ಗಳ ಕೊರತೆ ನೀಗಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಶೇಖ್ ಯೂನುಸ್ ಅಲಿ, ಸಲೀಂ ಅಹ್ಮದ್ ಚಿತ್ತಾಪುರಿ, ಹೈದರ್‍ಅಲಿ ಇನಾಂದಾರ್, ಖಾಜಾ ಪಟೇಲ್ ಸರಡಗಿ, ಮೊಹ್ಮದ್ ಖಾಲಿಕ್ ಮುಂತಾದವರು ಉಪಸ್ಥಿತರಿದ್ದರು.