ಕೋವಿಡ್, ನಿಯಂತ್ರಣ ಸಂಜೆ ಮಾರ್ಗ ಸೂಚಿ ಪ್ರಕಟ

ಬೆಂಗಳೂರು, ಏ. ೧೯- ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ತೀವ್ರಗತಿಯಲ್ಲಿ ಹರಡುತ್ತಿರುವುದನ್ನು ನಿಯಂತ್ರಿಸಲು ಇನ್ನಷ್ಟು ಕಠಿಣ ನಿರ್ಬಂಧಗಳನ್ನು ಒಳಗೊಂಡಿರುವ ಹೊಸ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ಇಂದು ಸಂಜೆ ಪ್ರಕಟಿಸಲಿದೆ.
ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆಯನ್ನು ಪರಿಣಾಮಕಾರಿಯಾಗಿ ತಡೆಯಲು ಹತ್ತು ದಿನಗಳ ಲಾಕ್‌ಡೌನ್ ಅವಶ್ಯ ಎಂಬುದನ್ನು ಸಚಿವರುಗಳು, ತಜ್ಞರು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟಿರುವರಾದರೂ ಲಾಕ್‌ಡೌನ್‌ಗೆ ಮುಖ್ಯಮಂತ್ರಿ ಒಲವು ತೋರಿಲ್ಲ.
ಲಾಕ್‌ಡೌನ್‌ನಿಂದ ಜನರು ಜೀವನ ಸಾಗಿಸಲು ದುರ್ಲಬವಾಗಿ ಸಂಕಷ್ಟಕ್ಕೆ ಒಳಗಾಗುತ್ತಾರೆ. ಹಾಗಾಗಿ ಲಾಕ್‌ಡೌನ್ ಹೊರತುಪಡಿಸಿ ಉಳಿದಂತೆ ಇನ್ನಷ್ಟು ಕಠಿಣ ಕ್ರಮಗಳನ್ನು ಜಾರಿಗೊಳಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಒಲವು ತೋರಿದ್ದಾರೆ. ಹಾಗೆಯೇ ಈಗಿರುವ ಕೊರೊನಾ ರಾತ್ರಿ ಕರ್ಫ್ಯೂವನ್ನು ಮತ್ತಷ್ಟು ವಿಸ್ತರಿಸುವ ಜತೆಗೆ ವಾರಾಂತ್ಯದ ಲಾಕ್‌ಡೌನ್ ಜಾರಿ ಮಾಡುವ ಬಗ್ಗೆಯೂ ಸಂಜೆ ತೀರ್ಮಾನವಾಗಲಿದೆ.
ಜನ ಹೆಚ್ಚಾಗಿ ಸೇರುವ ಪ್ರದೇಶಗಳಲ್ಲಿ ಜನರ ಗುಂಪುಗೂಡುವಿಕೆಗೆ ಕಡಿವಾಣ ಹಾಕುವ ಕಠಿಣ ಮಾರ್ಗಸೂಚಿಗಳು ಇಂದು ಸಂಜೆಯಿಂದ ಜಾರಿಯಾಗಲಿದೆ.
ಹೋಟೆಲ್, ಬಾರ್, ಪಬ್, ಸಿನಿಮಾ ಮಂದಿರಗಳು, ಪ್ರವಾಸಿ ತಾಣಗಳು, ಪಾರ್ಕ್‌ಗಳಲ್ಲಿ ಜನರ ಓಡಾಟಕ್ಕೆ ನಿರ್ಬಂಧ ಹೇರುವ ನಿಯಮಗಳನ್ನು ಸರ್ಕಾರ ಸಂಜೆ ಅಂತಿಮಗೊಳಿಸಲಿದೆ.
ಕೋವಿಡ್ ಸೋಂಕಿನಿಂದ ಮುಖ್ಯಮಂತ್ರಿ ಯಡಿಯೂರಪ್ಪನವರು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ನಿರ್ದೇಶನದಂತೆ ಕಂದಾಯ ಸಚಿವ ಆರ್. ಅಶೋಕ್, ಕೊರೊನಾ ತಡೆಗೆ ಕಠಿಣ ನಿರ್ಬಂಧಗಳನ್ನು ಅಂತಿಮಗೊಳಿಸುವ ಸಂಬಂಧ ಚರ್ಚಿಸಲು ಬೆಂಗಳೂರು ನಗರದ ಸಚಿವರು, ಶಾಸಕರ ಸಭೆಯನ್ನು ಇಂದು ಸಂಜೆ ವಿಧಾನಸೌಧದಲ್ಲಿ ನಡೆಸಲಿದ್ದಾರೆ. ಈ ಸಭೆಯಲ್ಲಿ ಕೆಲ ಮಹತ್ವದ ನಿರ್ಧಾರ ಕೈಗೊಳಲಾಗುವುದು.
ಬೆಂಗಳೂರಿಗೆ ಪ್ರತ್ಯೇಕ ಮಾರ್ಗಸೂಚಿ
ರಾಜಧಾನಿ ಬೆಂಗಳೂರಿನಲ್ಲೇ ಸೋಂಕು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಪ್ರತ್ಯೇಕವಾಗಿ ಕಠಿಣ ಮಾರ್ಗಸೂಚಿಗಳು ಜಾರಿಗೆ ಬರುವುದು ನಿಶ್ಚಿತವಾಗಿದ್ದು, ಶಾಪಿಂಗ್ ಮಾಲ್‌ಗಳು, ಹೋಟೆಲ್, ಪಬ್, ಬಾರ್, ಬೀದಿ ಬದಿ ವ್ಯಾಪಾರ, ಸಭೆ-ಸಮಾರಂಭಗಳು, ಮದುವೆ ಮತ್ತಿತರ ಕಾರ್ಯಕ್ರಮಗಳಲ್ಲಿ ಜನರ ಗುಂಪುಗೂಡುವಿಕೆಗೆ ಕಡಿವಾಣ ಹಾಕುವ ಕಠಿಣ ತೀರ್ಮಾನಗಳನ್ನು ಈ ಸಭೆಯಲ್ಲಿ ಅಂತಿಮಗೊಳಿಸಲಾಗುತ್ತದೆ.
ಜನ ಹೆಚ್ಚಾಗಿ ಸೇರುವ ಪ್ರವಾಸಿ ತಾಣಗಳು, ದೇವಸ್ಥಾನ, ಚಿತ್ರಮಂದಿರಗಳು, ಮಸೀದಿ, ಚರ್ಚ್‌ಗಳಲ್ಲೂ ಸಂಬಂಧಪಟ್ಟಂತೆ ಕಠಿಣ ನಿಯಮಗಳು ಜಾರಿಯಾಗಲಿವೆ ಎಂದು ಸರ್ಕಾರದ ಉನ್ನತ ಮೂಲಗಳು ಹೇಳಿವೆ.
ಈ ಎಲ್ಲದರ ಜತೆಗೆ ವಾರಾಂತ್ಯ ಲಾಕ್‌ಡೌನ್ ಬಗ್ಗೆಯೂ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ.
ಬೆಂಗಳೂರಿನಲ್ಲಿ ಜನರ ಅನಗತ್ಯ ಓಡಾಟಕ್ಕೆ ನಿರ್ಬಂಧ ಹೇರಲು ಸೆಕ್ಷನ್ ೧೪೪ ಜಾರಿ ಮಾಡುವ ಬಗ್ಗೆಯೂ ತೀರ್ಮಾನ ಆಗಲಿದೆ.
ಖಾಸಗಿ ಕಂಪನಿಗಳಿಗೂ ಅನ್ವಯಯವಾಗುವಂತೆ ಆದಷ್ಟು ಮನೆಯಿಂದಲೇ ಕೆಲಸ ಮಾಡುವಂತಹ ನಿಯಮವೂ ಜಾರಿಯಾಗುವ ಸಾಧ್ಯತೆಗಳಿವೆ.
ಜನ ಹೆಚ್ಚು ಸೇರುತ್ತಿರುವ ಮಾರುಕಟ್ಟೆಗಳಿಗೆ ನಿರ್ಬಂಧ ಹೇರಲು ಮಾರುಕಟ್ಟೆಗಳನ್ನು ಮೈದಾನಗಳಿಗೆ ಸ್ಥಳಾಂತರಿಸುವ ಬಗ್ಗೆಯೂ ಇಂದಿನ ಸಭೆಯಲ್ಲಿ ತೀರ್ಮಾನ ಆಗಲಿದೆ.
ಸಿನಿಮಾ ಮಂದಿರಗಳು, ಜಿಮ್‌ಗಳಿಗೂ ಕಠಿಣ ನಿರ್ಬಂಧಗಳು ಜಾರಿಯಾಗಲಿದ್ದು, ಸಿನಿಮಾ ಮಂದಿರ, ಬಾರ್, ಪಬ್, ಜಿಮ್, ಹೋಟೆಲ್‌ಗಳು ಬಂದ್ ಆಗುವ ಸಾಧ್ಯತೆಗಳು ಹೆಚ್ಚಿವೆ.
ಹೋಟೆಲ್‌ಗಳಲ್ಲಿ ಪಾರ್ಸಲ್‌ಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು, ಹೋಟೆಲ್‌ನಲ್ಲೇ ಕುಳಿತು ತಿಂಡಿ, ತಿನಿಸು ಸೇವಿಸುವುದಕ್ಕೆ ಕಡಿವಾಣ ಬೀಳಲಿದೆ.
ಜನರು ವಾಯುವಿಹಾರಕ್ಕೆ ಹೆಚ್ಚು ಸೇರುವ ಪಾರ್ಕ್‌ಗಳಿಗೂ ಬೀಗ ಬೀಳುವ ಸಾಧ್ಯತೆ ಇದೆ.
ಇಂದು ನಡೆಯುವ ಸಭೆಯಲ್ಲಿ ಕಂದಾಯ ಸಚಿವ ಆರ್. ಅಶೋಕ್ ಜತೆಗೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಗೃಹ ಸಚಿವ ಬಸವರಾಜಬೊಮ್ಮಾಯಿ ಸೇರಿದಂತೆ ಬೆಂಗಳೂರಿನ ಎಲ್ಲ ಸಚಿವರುಗಳು, ಶಾಸಕರುಗಳು, ಸಂಸದರುಗಳು ಪಾಲ್ಗೊಳ್ಳುವರು.

  • ಲಾಕ್‌ಡೌನ್ ಜಾರಿಯಾಗದಿದ್ದರೆ ವಾರಾಂತ್ಯ ಲಾಕ್‌ಡೌನ್ ನಿಶ್ಚಿತ
  • ರಾತ್ರಿ ಕೊರೊನಾ ಕರ್ಫ್ಯೂ ವಿಸ್ತರಣೆ
  • ನೈಟ್ ಕರ್ಫ್ಯೂ ಸಮಯ ಬದಲಾವಣೆ
  • ರಾತ್ರಿ ೮ ರಿಂದಲೇ ನೈಟ್ ಕರ್ಫ್ಯೂ ಜಾರಿ
    *ಹೋಟೆಲ್, ಬಾರ್, ಪಬ್‌ಗಳಿಗೂ ನಿರ್ಬಂಧ
  • ಜನರ ಅಗತ್ಯ ಓಡಾಟಕ್ಕೆ ಕಠಿಣಾವ ಹಾಕಲು ಸೆಕ್ಷನ್ ೧೪೪ ನಿಷೇಧಾಜ್ಞೆ ಜಾರಿಗೂ ಚಿಂತನೆ
  • ಮಾರುಕಟ್ಟೆಗಳಲ್ಲಿ ಜನ ಜಂಗುಳಿ ತಪ್ಪಿಸಲು ಮಾರುಕಟ್ಟೆಗಳನ್ನು ಮೈದಾನಗಳಿಗೆ ಸ್ಥಳಾಂತರಿಸುವ ಚಿಂತನೆ
  • ಪಾರ್ಕ್‌ಗಳಿಗೂ ನಿರ್ಬಂಧ