ಕೋವಿಡ್ ನಿಯಂತ್ರಣ ಮಾಡುವಲ್ಲಿ ಸರ್ಕಾರವಿಫಲ; ರಾಷ್ಟ್ರಪತಿ ಆಳ್ವಿಕೆಗೆ ಮನವಿ

ದಾವಣಗೆರೆ. ಮೇ.೫;  ರಾಜ್ಯದಲ್ಲಿ ಈ ವರ್ಷ ಕೋವಿಡ್-19 ನಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾವು-ನೋವು ಸಂಭವಿಸುತ್ತಿದ್ದು, ಸರ್ಕಾರವು ಇದನ್ನು ನಿಯಂತ್ರಣ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಇಂತಹ ವಿಷಮಸ್ಥಿತಿಯನ್ನು ನಿಯಂತ್ರಿಸಲು ಸರ್ಕಾರಕ್ಕೆ ಆಗುತ್ತಿಲ್ಲ. ಹಾಗಾಗಿ ಸರ್ಕಾರವನ್ನು ರದ್ದುಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕೆಂದು ವಕೀಲ ಅನೀಸ್ ಪಾಷ ಹೇಳಿದರು. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ರಾಷ್ಟ್ರಪತಿ ಆಳ್ವಿಕೆಗೆ ರಾಜ್ಯಪಾಲರಿಗೆ ಈ- ಮೇಲ್ ಮೂಲಕ ಮನವಿ ಮಾಡಿದ್ದಾರೆ.ಆಮ್ಲಜನಕ ಕೊರತೆಯಿಂದ ಮೊನ್ನೆ ಚಾಮರಾಜನಗರದಲ್ಲಿ 24 ಮತ್ತು ಕಲ್ಬುರ್ಗಿಯಲ್ಲಿ 2 ನಿನ್ನೆ ರಾಜ್ಯದಲ್ಲಿ 9 ಜನ ಕೋವಿಡ್-19 ರೋಗಿಗಳು ಸತ್ತಿದ್ದು, ಅವರ ಸಾವಿಗೆ ರಾಜ್ಯ ಸರ್ಕಾರವು ನೇರಹೊಣೆಯಾಗಿದೆ. ರಾಜ್ಯದ ಜನತೆಯ ಹಿತವನ್ನು ಕಾಪಾಡಬೇಕಾಗಿದ್ದ ರಾಜ್ಯ ಸರ್ಕಾರವು ಚಿಕಿತ್ಸೆಗೆ ಬಂದಿದ್ದ ಕೋವಿಡ್-19 ರೋಗಿಗಳಿಗೆ ಆಮ್ಲಜನಕವನ್ನು ಒದಗಿಸದೆ ಕತ್ತುಹಿಸುಕಿ ಉಸಿರುಗಟ್ಟಿಸಿ ಸಾಯಿಸಿದಂತಾಗಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರವು ಜನತೆಯ ಆರೋಗ್ಯದ ಕಡೆಗೆ ಹೆಚ್ಚು ಒತ್ತು ನೀಡಿ ಸಾವು-ನೋವು ಸಂಭವಿಸದಂತೆ ಎಚ್ಚರವಹಿಸಬೇಕಾಗಿತ್ತು. ಈ ರೀತಿ ಸಾವು-ನೋವು ಸಂಭವಿಸಿರುವುದನ್ನು ಗಮನಿಸಿದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋವಿಡ್-19 ಅನ್ನು ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಹಾಗಾಗಿ ಮುಖ್ಯ ಮಂತ್ರಿಗಳು ನೈತಿಕ ಹೊಣೆ ಹೊತ್ತು ತಕ್ಷಣ ರಾಜಿನಾಮೆಯನ್ನು ನೀಡಬೇಕು.ಸರ್ಕಾರ ಸಂವಿಧಾನ ಬದ್ಧವಾಗಿ ಕಾರ್ಯನಿರ್ವಹಿಸುವಲ್ಲಿ ವಿಫಲವಾಗಿದೆ. ರಾಜ್ಯ ಸರ್ಕಾರದ ನಿರ್ಲಕ್ಷತನದಿಂದ ಸಾವು ಸಂಭವಿಸಿದ್ದು, ತನ್ನ ತಪ್ಪಿಗೆ ರಾಜ್ಯ ಸರ್ಕಾರವು ಪರಿಹಾರವನ್ನು ನೀಡಲು ಬಾದ್ಯಸ್ತವಾಗಿದೆ. ಹಾಗಾಗಿ ಪ್ರತಿಯೊಬ್ಬ ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ದಾವಣಗೆರೆಯ ಸಂಸದರಾದ ಜಿ.ಎಂ ಸಿದ್ದೇಶ್ವರ್ ಅವರು  ಸೊಂಕು ಹೆಚ್ಚಾಗಲು ಜನರೇ ಕಾರಣ ಎಂದು ತಮ್ಮ ತಪ್ಪುಗಳನ್ನು ಸಾಮಾನ್ಯ ಜನರ ಮೇಲೆ ಹೊತ್ತುಹಾಕುವ ಪ್ರಯತ್ನವನ್ನು ಮಾಡಿದ್ದಾರೆ. ಚುನಾವಣೆ ನಡೆಸಿ ಚನಾವಣಾ ಪ್ರಚಾರದಲ್ಲಿ ಭಾಗಿಯಾದ ಬಿ.ಜೆ.ಪಿ, ಕಾಂಗ್ರೆಸ್, ಜೆ.ಡಿ.ಎ.ಸ್ ಪಕ್ಷಗಳ ನಾಯಕರೇ ಕೋವಿಡ್-19 ಸೊಂಕು ಹರಡಿದ್ದಾರೆ. ಅವರಿಂದಲೇ ಜನ ಸಾಮಾನ್ಯರಿಗೆ ಬಂದಿದೆ.ರಾಷ್ಟ್ರಪತಿ ಆಳ್ವಿಕೆಯನ್ನು ಹೇರಿ ರಾಜ್ಯದ ಜನತೆಯ ಜೀವಗಳನ್ನು ಕಾಪಾಡಲು ಸಹಕಾರಿಯಾಗಬೇಕೆಂದು ರಾಜ್ಯಪಾಲರಿಗೆ ಮನವಿ ಮಾಡಿಕೊಂಡಿದ್ದಾರೆ.