ಕೋವಿಡ್ ನಿಯಂತ್ರಣ : ಪೂರ್ವಸಿದ್ಧತಾ ಸಭೆ

ಗದಗ,ಡಿ 27: ರಾಜ್ಯದಲ್ಲಿ ಕೋವಿಡ್ -19 ಉಪತಳಿ ಜೆ ಎನ್ 1 ಪ್ರಕರಣಗಳು ವರದಿಯಾಗುತ್ತಿದ್ದು ಜಿಲ್ಲೆಯಲ್ಲಿ ಸರ್ಕಾರ ಹೊರಡಿಸಿರುವ ಕೋವಿಡ್ ಮಾರ್ಗಸೂಚಿಗಳ ಪಾಲನೆಯೊಂದಿಗೆ ಕೋವಿಡ್ ಪರೀಕ್ಷೆ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಜಿಲ್ಲಾಡಳಿತ ಭವನದ ಕೋರ್ಟ ಸಭಾಂಗಣದಲ್ಲಿ ಏರ್ಪಡಿಸಿದ್ದ ಕೋವಿಡ್ ನಿಯಮತ್ರಣ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರ ನೀಡಿರುವ ಮಾರ್ಗಸೂಚಿ ಜಿಲ್ಲೆಯಲ್ಲಿ ಪಾಲನೆಯಾಗಬೇಕು. ಆಸ್ಪತ್ರೆಗೆ ಬರುವ ರೋಗಿಗಳಲ್ಲಿ ಕೆಮ್ಮು, ನೆಗಡಿ, ಶೀತ ಪ್ರಕರಣಗಳ ಲಕ್ಷಣ ಕಂಡುಬಂದಲ್ಲಿ ನಿಯಮಾನುಸಾರ ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು ಎಂದು ಸೂಚಿಸಿದರು.

ಗದಗ ಜಿಲ್ಲೆಗೆ ಪ್ರತಿದಿನ ನೂರು ಕೋವಿಡ್ ಪರೀಕ್ಷೆ ಕೈಗೊಳ್ಳಲು ತಿಳಿಸಲಾಗಿದ್ದು ಇದರಲ್ಲಿ 70 ಆರ್ಟಿಪಿಸಿಆರ್, 30 ರ್ಯಾಟ್ ಪರೀಕ್ಷೆ ಕೈಗೊಳ್ಳಬೇಕು. ಕೋವಿಡ್ ಹೊಸ ತಳಿ ಪತ್ತೆಯಾದಲ್ಲಿ ತಕ್ಷಣ ಮೇಲಾಧಿಕಾರಿಗಳಿಗೆ ವರದಿ ಮಾಡಬೇಕು. ಜೊತೆಗೆ ಕೋವಿಡ್ ಸೋಂಕಿತ ವ್ಯಕ್ತಿಗಳನ್ನು ಸರ್ಕಾರದ ಮಾರ್ಗಸೂಚಿಯಂತೆ ಚಿಕಿತ್ಸೆ ಒದಗಿಸಬೇಕು ಎಂದರು.

50 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು , ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಹೊರಾಂಗಣ ಪ್ರದೇಶಗಳಿಗೆ ತೆರಳಿದಾಗ ಮಾಸ್ಕ್ ಧರಿಸಬೇಕು. ಅಗತ್ಯ ಗಾಳಿ, ಬೆಳಕಿನ ವ್ಯವಸ್ಥೆಯಿಲ್ಲದ ಮತ್ತು ಹೆಚ್ಚು ಜನ ಸಂದಣಿ ಇರುವ ಪ್ರದೇಶಗಳಿಗೆ ತೆರಳದಿರುವುದು ಸೂಕ್ತ .ಜ್ವರ ಕೆಮ್ಮು ನೆಗಡಿ ಇತ್ಯಾದಿ ಉಸಿರಾಟದ ಸೋಂಕಿದ ಲಕ್ಷಣಗಳು ಹೊಂದಿದವರು ತಕ್ಷಣವೇ ಅಗತ್ಯ ವೈದ್ಯಕೀಯ ಸೌಲಭ್ಯ ಪಡೆಯಬೇಕು ಹಾಗೂ ಮೂಗು ಬಾಯಿ ಮುಚ್ಚುವಂತೆ ಮಾಸ್ಕ್ ಧರಿಸಲು ಸೂಚಿಸಬೇಕು.ಉತ್ತಮ ವೈಯಕ್ತಿಕ ಸ್ವಚ್ಛತೆ , ಆಗಾಗ್ಗೆ ಕೈಗಳನ್ನು ನೀರು ಹಾಗೂ ಸೋಪಿನಿಂದ ತೊಳೆದುಕೊಳ್ಳುವುದನ್ನು ಮಾಡಬೇಕು.

ಅಂತರಾಷ್ಟ್ರೀಯ ಹಾಗೂ ಅಂತರರಾಜ್ಯ ಪ್ರಯಾಣ ಮಾಡಿದವರು ಕೋವಿಡ್ -19 ಲಕ್ಷಣಗಳಿದ್ದಲ್ಲಿ ತಕ್ಷಣವೇ ಹತ್ತಿರದ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಬೇಕು ಎಂದು ಹೇಳಿದರು.

ಆಸ್ಪ[ತ್ರೆಗಳಲ್ಲಿ ಸಮರ್ಪಕ ಬೆಡ್ ಮೂಲಭೂತ ಸೌಕರ್ಯಗಳು, ಆಕ್ಸಿಜನೆಂಟೆಡ್ ಬೆಡ್, ಐಸಿಯುಗಳು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಸೋಂಕಿತರ ಚಿಕಿತ್ಸೆಗಾಗಿ ಸೂಕ್ತ ಆಕ್ಸಿಜನ್ ವ್ಯವಸ್ಥೆ ಕುರಿತು ಒಪ್ಪಂದ ಮಾಡಿಕೊಳ್ಳಬೇಕು. ಒಟ್ಟಾರೆ ಕೋವಿಡ್ ಸೋಂಕು ಅಧಿಕವಾದಲ್ಲಿ ಸೂಕ್ತ ಚಿಕಿತ್ಸೆಗೆ ಆಸ್ಪತ್ರೆಗಳು ಸರ್ವ ಸನ್ನದ್ಧವಾಗಿರಬೇಕೆಂದು ನಿರ್ದೇಶನ ನೀಡಿದರು.

ಜನಸಾಮಾನ್ಯರು ಕೋವಿಡ್ -19 ಜೆಎನ್1 ಸೋಂಕಿನ ಕುರಿತು ಆತಂಕಪಡುವ ಅಗತ್ಯವಿಲ್ಲ. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸೋಂಕಿನಿಂದ ತಮ್ಮನ್ನು ತಾವು ಸಂರಕ್ಷಿಸಿಕೊಳ್ಳಬೇಕು. ಸರ್ಕಾರವೂ ಸಹ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು. ಹಿಂದಿನ ಕೋವಿಡ್ ಅಲೆಗಳ ಸಂದರ್ಭದಲ್ಲಿ ನಡೆದ ತಪ್ಪುಗಳು ಈ ಬಾರಿ ಮರುಕಳಿಸಬಾರದು. ಆಕ್ಸಿಜನ್, ವೆಂಟಿಲೇಟರ್, ಬೆಡ್‍ಗಳು ಕೊರತೆಯಾಗದಂತೆ ಸಮರ್ಪಕವಾಗಿ ನಿರ್ವಹಿಸಬೇಕು. ಮುಂಚಿತವಾಗಿಯೇ ಕೋವಿಡ್ ಚಿಕಿತ್ಸೆಗೆ ಅಗತ್ಯವಿರುವ ಸಾಧನ ಸಲಕರಣೆಗಳ ಸಂಪೂರ್ಣ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಿದರು.

ಜಿಮ್ಸ್ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ಮಾತನಾಡಿ ಜಿಮ್ಸ್‍ನಲ್ಲಿ ಕೋವಿಡ್ ಚಿಕಿತ್ಸೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಸದ್ಯ 200 ಜಂಬೂ ಸಿಲೆಂಡರ್ ಲಭ್ಯಿ ಇವೆ.ಸಮರ್ಪಕವಾಗಿ ಆಕ್ಸಿಜನ್ ಕಾನ್ಸನ್ಸಟ್ರೇಟರ್ ಇದ್ದು ಚಿಕಿತ್ಸೆಗೆ ಬಳಸಲಾಗುವುದು. ಜಿಮ್ಸ್ ನಲ್ಲಿ 78ಕ್ಕೂ ಅಧಿಕ ಐಸಿಯು ಬೆಡ್‍ಗಳು ಲಭ್ಯವಿದ್ದು ಕೋವಿಡ್ ಸೋಂಕಿತರ ಚಿಕಿತ್ಸೆಗೆ ಅಗತ್ಯವಿದ್ದಲ್ಲಿ ಸಂದರ್ಭಾನುಸಾರ ಬಳಸಿಕೊಳ್ಳಲಾಗುವುದು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾದಿಕಾರಿ ಡಾ.ಎಸ್.ಎಸ್.ನೀಲಗುಂದ ಮಾತನಾಡಿ ಜಿಲ್ಲೆಯ ಎಲ್ಲ ತಾಲೂಕ ಆಸ್ಪತ್ರಗಳಲ್ಲಿಯೂ ಕೋವಿಡ್ ಚಿಕಿತ್ಷೆಗೆ ಸಿದ್ಧತೆ ಕೈಗೊಳ್ಳೂವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ರೋಗಿಗಳ ಸ್ಥಳಾಂತರಕ್ಕಾಗಿ ಜಿಲ್ಲೆಯಲ್ಲಿ ಒಟ್ಟು 34 ಅಂಬುಲೆನ್ಸ್‍ಗಳು ಕಾರ್ಯನಿರ್ವಹಿಸುತ್ತಿವೆ. ಸಂದರ್ಭಾನುಸಾರ ಅವುಗಳನ್ನು ಕೋವಿಡ್ ಚಿಕಿತ್ಸಾ ಕಾರ್ಯಕ್ಕೆ ಬಳಸಿಕೊಳ್ಳಲಾಗುವುದು.

ಸಭೆಯಲ್ಲಿ ತಾಲೂಕಾವಾರು ಆಸ್ಪತ್ರೆಗಳಲಿರುವ ಬೆಡ್‍ಗಳ ಹಾಗೂ ಆಕ್ಸಿಜನ್ ಬೆಡ್, ಸಿಲೆಂಡರ್, ಆಕ್ಸಿಜನ್ ಕಾನ್ಸನ್ಟ್ರೇಟರ್, ವೈದ್ಯಕೀಯ ಸಿಬ್ಬಂದಿ, ಸಾಧನ ಸಲಕರಣೆಗಳ ಬಗ್ಗೆ , ನುರಿತ ವೈದ್ಯರ ಲಬ್ಯತೆ ಸೇರಿದಂತೆ ಇತರ ಕಾರ್ಯಗಳ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಿ ಡಾ.ಸೋಮಶೇಖರ ಬಿಜ್ಜಳ, ಡಾ.ಬಿ.ಸಿ.ಕರಿಗೌಡ್ರ, ಡಾ.ರಾಜೇಂದ್ರ ಬಸರಿಗಿಡದ, ಆರೋಗ್ಯ ಶಿಕ್ಷಣಾದಿಕಾರಿ ರೂಪಸೇನ ಚವ್ಹಣ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ವೆಂಕಟೇಶ ರಾಠೋಡ ಸೇರಿದಂತೆ ತಾಲೂಕಾ ಆಸ್ಪತ್ರೆಗಳ ವೈದ್ಯಾಧಿಕಾರಿಗಳು ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಹಾಜರಿದ್ದರು.