ಕೋವಿಡ್ ನಿಯಂತ್ರಣ ನಿಟ್ಟಿನಲ್ಲಿ ಜಿಲ್ಲೆಗೆ ತುರ್ತಾಗಿ ಅವಶ್ಯಕತೆವಿರುವ ಪಟ್ಟಿ ಕೊಡಿ, ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುವೆ:ಮುರುಗೇಶ‌ ನಿರಾಣಿ

ಕಲಬುರಗಿ.ಮೇ.3: ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೇ ನಿಯಂತ್ರಣ ನಿಟ್ಟಿನಲ್ಲಿ ಮತ್ತು ಅರೋಗ್ಯ ಸಂಸ್ಥೆಗಳ ಸುಧಾರಣೆಗೆ ತುರ್ತಾಗಿ ಅಗತ್ಯವಿರುವ ಮತ್ತು ಸೇವೆಗಳ ಪಟ್ಟಿ ಕೊಡಿ. ಮಂಗಳವಾರ ನಡೆಯುವ ವಿಶೇಷ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಇದಕ್ಕೆ ಪರಿಹಾರ ಕಲ್ಪಿಸಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಅವರು ಹೇಳಿದರು.

ಸೋಮವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಪ್ರಥಮ ಬಾರಿಗೆ ಕಲಬುರಗಿ ಜಿಲ್ಲೆಗೆ ಭೇಟಿ ನೀಡಿದ ಅವರು ಕೋವಿಡ್-19 ಕುರಿತು ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದರು.

ಮಂಗಳವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೊರೋನಾ ನಿಯಂತ್ರಣ ನಿಟ್ಟಿನಲ್ಲಿ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳಲು ವಿಶೇಷ ಸಂಪುಟ ಸಭೆ ಕರೆದಿದ್ದು, ಸಭೆಯಲ್ಲಿ ಹಲವು ವಿಷಯಗಳು ಚರ್ಚೆಗೆ ಬರಲಿವೆ. ಆದರಿಂದ ಕಲಬುರಗಿ ಜಿಲ್ಲೆಯ ಕೋವಿಡ್ ವಿಷಯಕ್ಕೆ ಸಂಬಂಧಿಸಿದಂತೆ‌ ಸಮಸ್ಯೆಗಳ ಪಟ್ಟಿ‌ ನೀಡಿದಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಜಿಲ್ಲಾ ಮಟ್ಟದ ಅಧಿಕಾರಿಗಳು ಪರಸ್ಪರ ಸಹಕಾರದಿಂದ ಒಂದು ಕುಟುಂಬದ ರೀತಿಯಲ್ಲಿ ಕಾರ್ಯನಿರ್ವಹಿಸುವ ಮೂಲಕ ಈ ಮಹಾಮಾರಿ ಕೊರೋನಾ ನಿಯಂತ್ರಣಕ್ಕೆ ಕಡಿವಾಣ ಹಾಕಬೇಕಾಗಿದೆ. ಮುಂದಿನ 2 ತಿಂಗಳು ಕಾಲ ಎಲ್ಲರು ಹಗಲಿರುಳು ಶ್ರಮಿಸಬೇಕು ಎಂದು ಸಚಿವ ಮುರುಗೇಶ್ ನಿರಾಣಿ ಅವರು ಅಧಿಕಾರಿಗಳಿಗೆ ಕರೆ ನೀಡಿದರು.

ಕಲಬುರ್ಗಿ ಜಿಮ್ಸ್ ಆವರಣದಲ್ಲಿರುವ 65 ಹಾಸಿಗೆಯ ಎಸ್.ಎನ್.ಸಿ ಯು. ಘಟಕವು ಕೋವಿಡ್ ರೋಗಿಗಳಿಗೆ ಚಿಕಿತ್ಸೆ‌ ನೀಡಲು ಸಕಲ ಮೂಲಭೂತ ಸೌಕರ್ಯದೊಂದಿಗೆ ಸಿದ್ಧಗೊಂಡಿದ್ದು, ಮೂರು ದಿನದೊಳಗೆ ಆಕ್ಸಿಜನ್ ಪೂರೈಕೆ ಕಾರ್ಯ ಮುಗಿಸಿ ರೋಗಿಗಳ ಸೇವೆಗೆ ಅಣಿಗೊಳಿಸಬೇಕು ಎಂದು ಆರೋಗ್ಯ ಇಲಾಖೆಯ ಇಂಜಿನೀಯರ್ ಗೆ ಸಚಿವರು ಸೂಚಿಸಿದರು.

ಜಿಲ್ಲೆಯಲ್ಲಿ ಆಕ್ಸಿಜನ್ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ 1000 ಆಕ್ಸಿಜನ್ ಕನ್ಸನ್ ಟ್ರೇಟರ್ ಖರೀದಿಗೆ ಅಧಿಕಾರಿಗಳು ಮುಂದಾಗಬೇಕು. ಜಿಮ್ಸ್ ಅಸ್ಪತ್ರೆಯಲ್ಲಿ 20 ಕೆ‌.ಎಲ್. ಆಕ್ಸಿಜನ್ ಪ್ಲಾಂಟ್ ಸ್ಥಾಪನೆಗೆ ಅಗತ್ಯ ಕ್ರಮ ವಹಿಸಬೇಕು ಎಂದ ಸಚಿವರು ಜಿಲ್ಲೆಯ ಕೈಗಾರಿಕೆಗಳಲ್ಲಿ ಇರುವಂತಹ ಖಾಲಿ ಸಿಲಿಂಡರಗಳನ್ನು ಬಾಡಿಗೆ ಆಧಾರದ‌ ಮೇಲೆ ಪಡೆಯುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ರೆಮಿಡಿಸಿವಿರ್ ಇಂಜೆಕ್ಷನ್ ಬಳಕೆ ಬಗ್ಗೆ ನಿಗಾ ಇಡಿ: ಕಲಬುರಗಿಯಲ್ಲಿ ರೆಮಿಡಿಸಿವಿರ್ ಇಂಜೆಕ್ಷನ್ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಹೀಗಾಗಿ ಕಳೆದ 8 ದಿನಗಳಲ್ಲಿಇದರ ಬಳಕೆ ಹಾಗೂ ಉಳಿಕೆ ಕುರಿತು ಖಾಸಗಿ ಆಸ್ಪತ್ರೆ ಒಳಗೊಂಡಂತೆ ಮಾಹಿತಿ ಪಡೆದುಕೊಂಡು ವರದಿ‌ ನೀಡಿ ಎಂದು ಸಹಾಯಕ ಔಷದ ನಿಯಂತ್ರಕ ಗೋಪಾಲರಾವ್ ಭಂಡಾರಿಯವರಿಗೆ ಸಚಿವರು ತಾಕೀತು ಮಾಡಿದರು.

ಕೊರೋನಾ ನಿಯಂತ್ರಣಕ್ಕೆ ಯಾವುದೇ ಅನುದಾನ ಕೊರತೆ ಇಲ್ಲ. ತಮ್ಮ ಇಲಾಖೆಯಲ್ಲಿಯೆ‌ ಡಿ.ಎಂ.ಎಫ್ ನಿಧಿಯಡಿ ಖರ್ಚಾಗದೆ ಇನ್ನು 1700 ಕೋಟಿ. ರೂ. ಇದೆ. ಇದರ ಜೊತೆಗೆ ಆರೋಗ್ಯ ಕ್ಷೇತ್ರಕ್ಕೆಂದೆ 18000 ಕೋಟಿ ರೂ. ಇದೆ ಎಂದರು.

ಜಿಲ್ಲೆಯ ಕೋವಿಡ್ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಲಭ್ಯತೆ, ಆಕ್ಸಿಜನ್ ಹಾಗೂ ರೆಮೆಡಿಸಿವಿರ್ ಇಂಜೆಕ್ಷನ್ ಲಭ್ಯತೆ ಕುರಿತು ಸಾರ್ವಜನಿಕರಿಗೆ ತಂತ್ರಜ್ಞಾನದ ಮೂಲಕ ಪ್ರತಿ ಗಂಟೆಗೊಮ್ಮೆ ಅಪಡೇಟ್ ಮಾಹಿತಿ ನೀಡುವ ವ್ಯವಸ್ಥೆ ತರಬೇಕು ಎಂದು ಸಚಿವರು ಸಲಹೆ ನೀಡಿದರು.

ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಮಾತನಾಡಿ ಜಿಲ್ಲೆಯಲ್ಲಿ ಪ್ರಮುಖವಾಗಿ ಆಕ್ಸಿಜನ್ ಕೊರತೆ ಇದೆ. ಪ್ರಸ್ತುತ 68 ಜಂಬು ಸಿಲೆಂಡರ್ ಗಳಿದ್ದು, 200 ಜಂಬು ಸಿಲೆಂಡರ್‌ಗಳನ್ನು ಮುಂಬೈನಿಂದ ತರಲು ಈಗಾಗಲೇ ಆದೇಶ ನೀಡಲಾಗಿದೆ. ಇದರ ಜೊತೆಗೆ ಇನ್ನೂ 400 ಜಂಬು ಸಿಲೆಂಡರ್ ಪಡೆದುಕೊಂಡಲ್ಲಿ, ತಾಲೂಕಿನ ಎಲ್ಲಾ ಆರೋಗ್ಯ ಆಸ್ಪತ್ರೆಗಳು ಸೇರಿದಂತೆ ಜಿಲ್ಲೆಯಲ್ಲಿ ಆಕ್ಸಿಜನ್ ಸಮಸ್ಯೆ ಬಗೆಹರಿಯಲಿದೆ. ಪ್ರತಿ ನಿತ್ಯ ಜಿಲ್ಲೆಯಲ್ಲಿ 25 ಕೆ.ಎಲ್. ಆಕ್ಸಿಜನ್ ಅವಶ್ಯಕತೆ ಇದೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರಣಬಸಪ್ಪ ಗಣಜಲಖೇಡ್ ಅವರು ಜಿಲ್ಲೆಯ ಕೋವಿಡ್ ಅಂಕಿ ಸಂಖ್ಯೆಯ ಚಿತ್ರಣ ನೀಡಿದರು. ಜಿಮ್ಸ್ ನಿರ್ದೇಶಕಿ ಡಾ.ಕವಿತಾ ಪಾಟೀಲ್ ಮತ್ತು ಇ.ಎಸ್.ಐ.ಸಿ. ಡೀನ್ ಡಾ.ಲೋಬೋ ಅವರು ತಮ್ಮ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ನೀಡಲಾಗುತ್ತಿರುವ ಚಿಕಿತ್ಸೆಯಲ್ಲಿ ಆಗುತ್ತಿರುವ ತೊಂದರೆಗಳ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು

ಕೋವಿಡ್ ಕರ್ಫ್ಯೂ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿ: ರಾಜ್ಯಾದ್ಯಂತ ಈಗಾಗಲೇ ಕೊರೋನಾ ನಿಯಂತ್ರಣಕ್ಕೆ ಕೋವಿಡ್ ಕರ್ಫ್ಯೂ ಜಾರಿಯಲ್ಲಿದ್ದು, ಜಿಲ್ಲೆಯಲ್ಲಿ ಇದನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು ಎಂದು ನಗರ ಪೊಲೀಸ್ ಆಯುಕ್ತ ಎನ್.ಸತೀಶ್ ಕುಮಾರ್ ಹಾಗೂ ಹೆಚ್ಚುವರಿ ಎಸ್.ಪಿ.ಪ್ರಸನ್ನ ದೇಸಾಯಿ ಅವರಿಗೆ ಸೂಚನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರು ಗ್ರಾಮೀಣ ಭಾಗದಲ್ಲಿ ಪಂಚಾಯತಿಯಿಂದ ಈ ಕೆಲಸವಾಗಬೇಕು ಎಂದು ಜಿ.ಪಂ. ಸಿ.ಇ.ಓ ಡಾ.ದಿಲೀಷ್ ಶಶಿ ಅವರಿಗೆ ಸೂಚಿಸಿದರು.

ಸಭೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ಶಾಸಕರಾದ ಸುಭಾಷ ಗುತ್ತೇದಾರ, ಡಾ.ಅವಿನಾಶ ಜಾಧವ, ವಿಧಾನ ಪರಿಷತ್ತಿನ ಶಾಸಕರಾದ ಬಿ.ಜಿ. ಪಾಟೀಲ್, ಶಶಿಲ್ ಜಿ. ನಮೋಶಿ, ಕರ್ನಾಟಕ‌ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ಅಧ್ಯಕ್ಷ ಚಂದು ಪಾಟೀಲ, ಎನ್.ಇ.ಕೆ.ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕ ಎಂ.ಖೂರ್ಮರಾವ, ಮಹಾನಗರ ಪಾಲಿಕೆಯ ಆಯುಕ್ತ ಸ್ನೇಹಲ ಸುಧಾಕರ ಲೋಖಂಡೆ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಇದ್ದರು.