ಕೋವಿಡ್ ನಿಯಂತ್ರಣ, ಚಿಕಿತ್ಸೆಗೆ ಅಗತ್ಯ ಕ್ರಮ ವಹಿಸಿ: ಕೋಟ

ಮಂಗಳೂರು, ಎ.೨೯- ಕೋವಿಡ್ ನಿಯಂತ್ರಣಕ್ಕೆ ಸರ್ಕಾರದ ಹೊಸ ಮಾರ್ಗಸೂಚಿಯನ್ನು ಜಿಲ್ಲೆಯಲ್ಲಿ ಚಾಚುತಪ್ಪದೇ ಜಾರಿಗೆ ತರಬೇಕು. ಕೋವಿಡ್ ಔಷಧಿಗಳು, ಆಕ್ಸಿಜೆನ್, ರೋಗ ನಿರೋಧಕ ಲಸಿಕೆ ಸಮರ್ಪಕ ನಿರ್ವಹಣೆಯೊಂದಿಗೆ ರೈತರು, ಕೈಗಾರಿಕೆಗಳು ಸೇರಿದಂತೆ ಕಟ್ಟಡ ನಿರ್ಮಾಣ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕೆಂದು ಮುಜರಾಯಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೋವಿಡ್-೧೯ ಸೋಂಕು ನಿಯಂತ್ರಣ, ಚಿಕಿತ್ಸೆ ಕುರಿತ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೊರೊನಾ ಕಪ್ರ್ಯೂ ಕುರಿತಾಗಿ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಸಾರ್ವಜನಿಕರು ಅಗತ್ಯವಸ್ತು ಖರೀದಿ ಇತ್ಯಾದಿಗಳಿಗೆ ನಿಗದಿಪಡಿಸಿರುವ ಸಮಯದಲ್ಲಿ ಹೊರತುಪಡಿಸಿ ಅನಾವಶ್ಯಕವಾಗಿ ಮನೆಯಿಂದ ಹೊರಗೆ ಹೋಗಬಾರದು, ಕೋವಿಡ್ ಸೋಂಕು ನಿಯಂತ್ರಣಕ್ಕೆ ಸಾರ್ವಜನಿಕರು ಜಾಗೃತರಾಗಿರುವದರೊಂದಿಗೆ ಸಹಕರಿಸಬೇಕು, ಕಟ್ಟಡ ನಿರ್ಮಾಣ ಕಾರ್ಮಿಕರು, ಕೈಗಾರಿಕೆಗಳಿಗೆ ತೆರಳುವ ಕಾರ್ಮಿಕರು ಹಾಗೂ ರೈತರ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಬೇಕು ಎಂದರು.
ಕೋವಿಡ್ ಸೋಂಕಿತರಿಗೆ ಸಕಾಲದಲ್ಲಿ ಚಿಕಿತ್ಸೆ ಒದಗಿಸಲು ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಅಭ್ಯವಿರುವ ಬೆಡ್‌ಗಳ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ ತಂತ್ರಾಂಶದಲ್ಲಿ ಅಳವಡಿಸಿಕೊಳ್ಳುವುದರೊಂದಿಗೆ ಮಾಹಿತಿ ಹೊಂದಿ ಸೋಂಕಿತರ ಅಗತ್ಯಕ್ಕನುಸಾರವಾಗಿ ಬೆಡ್‌ಗಳನ್ನು ಮಂಜೂರು ಮಾಡಬೇಕು ಎಂದು ಸೂಚನೆ ನೀಡಿದರು.
ಕೋವಿಡ್ ಪೀಡಿತರ ಚಿಕಿತ್ಸೆಗೆ ಅಗತ್ಯವಿರುವ ಆಕ್ಸಿಜೆನ್ ಮತ್ತು ಅಗತ್ಯ ಔಷಧಿ ಸಾಮಾಗ್ರಿಗಳ ಲಭ್ಯತೆ ಕುರಿತು ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು. ಏನಾದರೂ ಅವಶ್ಯಕತೆ ಕಂಡುಬಂದಲ್ಲಿ ಜಿಲ್ಲಾಧಿಕಾರಿಗಳಿಗೆ ಅಥವಾ ನಮ್ಮ ಗಮನಕ್ಕೆ ತರಬೇಕು ಎಂದರು.
ಕೋವಿಡ್ ನಿರೋಧಕ ಚುಚ್ಚುಮದ್ದನ್ನು ೬೦ ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ನೀಡಬೇಕು ಎಂದು ಸೂಚನೆ ನೀಡಿದ ಅವರು, ೪೫ ರಿಂದ ೬೦ ವರ್ಷದ ವಯಸ್ಸಿನವರಿಗೆ, ೨ ನೇ ಬಾರಿ ಕೋವಿಡ್ ನಿರೋಧಕ ಚುಚ್ಚುಮದ್ದು ಪಡೆಯುವವರಿಗೆ ಆದ್ಯತೆ ಮೇಲೆ ಚುಚ್ಚುಮದ್ದು ನೀಡಬೇಕು. ಸರ್ಕಾರ ಇಂದಿನಿಂದ ೧೮ ವರ್ಷ ಮೇಲ್ಪಟ್ಟ ೪೫ ವರ್ಷದ ಒಳಗಿನ ವಯೋಮಿತಿಯವರಿಗೂ ಚುಚ್ಚುಮದ್ದು ಪಡೆಯಲು ನೋಂದಾವಣಿಗೆ ಅವಕಾಶ ನೀಡಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಕೋವಿಡ್ ನಿರೋಧಕ ಚುಚ್ಚುಮದ್ದುಗಳ ದಾಸ್ತಾನು ಇಟ್ಟುಕೊಳ್ಳುವುದರೊಂದಿಗೆ ಚುಚ್ಚುಮದ್ದು ನೀಡಲು ಮುಂದಾಗಬೇಕು ಎಂದರು.
ಕೋವಿಡ್ ಸೋಂಕು ನಿಯಂತ್ರಣ ಕುರಿತು ಜಿಲೆಯಲ್ಲಿ ಇದೂವರೆಗೆ ಕೈಗೊಂಡಿರುವ ಕ್ರಮಗಳು ಹಾಗೂ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ವಿಸ್ತೃತವಾಗಿ ಪರಾಮರ್ಶಿಸಲಾಯಿತು.
ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಮಾತನಾಡಿ, ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಅಗತ್ಯ ಮೂಲಭೂತ ಸೌಕರ್ಯವನ್ನೊಳಗೊಂಡ ಆಕ್ಸಿಜೆನ್ ಸೌಲಭ್ಯವುಳ್ಳ ಒದಗಿಸುವುದರೊಂದಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ನೀಡಬೇಕೆಂದು ವೈದ್ಯರುಗಳಿಗೆ ಸೂಚನೆ ನೀಡಿದರು.
ಸಂಸದ ನಳೀನ್ ಕುಮಾರ್ ಕಟೀಲ್ ಮಾತನಾಡಿ, ಕೋವಿಡ್ ರೋಗಿಗಳನ್ನು ಹೊರತುಪಡಿಸಿ ಇತರೆ ಸಾಮಾನ್ಯ ತುರ್ತುಚಿಕಿತ್ಸೆ ಪಡೆಯಲು ಬಂದ ರೋಗಿಗಳನ್ನು ಆಧ್ಯತೆಯ ಮೇಲೆ ಚಿಕಿತ್ಸೆ ನೀಡುವುದರೊಂದಿಗೆ ಅಗತ್ಯ ಕಂಡುಬಂದಲ್ಲಿ ಶಸ್ತ್ರ ಚಿಕಿತ್ಸೆ ಸೇವೆಯನ್ನು ಒದಗಿಸಬೇಕು ಎಂದರು.
ತಾಲೂಕು ಕೇಂದ್ರಗಳಲ್ಲಿಯೂ ಕೋವಿಡ್ ಚಿಕಿತ್ಸೆ ನೀಡಲು ಸಾಕಷ್ಟು ಆಕ್ಸಿಜೆನ್ ಬೆಡ್ ಹಾಗೂ ಐಸಿಯು ಬೆಡ್‌ಗಳ ವ್ಯವಸ್ಥೆ ಮಾಡಬೇಕು. ಸಾಧ್ಯವಾದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಸಹ ಕೋವಿಡ್ ಚಿಕಿತ್ಸೆಗೆ ಬೆಡ್‌ಗಳ ಕಾಯ್ದಿರಿಸಬೇಕು ಎಂದ ಅವರು, ಶಾಸಕರು ಸ್ಥಳೀಯವಾಗಿ ತಾಲೂಕು ಮಟ್ಟದಲ್ಲಿ ಅಧಿಕಾರಿಗಳ ಸಭೆಯನ್ನು ನಡೆಸುವುದರೊಂದಿಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ ಮಾತನಾಡಿ, ಜಿಲ್ಲೆಯಲ್ಲಿ ಸಧ್ಯ ಆಕ್ಸಿಜೆನ್ ಕೊರತೆ ಕಂಡುಬಂದಿಲ್ಲ ಅದಾಗ್ಯೂ ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಆಕ್ಸಿಜೆನ್ ಪೂರೈಕೆಯ ಬಗ್ಗೆ ಗಮನಹರಿಸಲು ಕಾರ್ಯಪಡೆ ರಚಿಸುವುದರೊಂದಿಗೆ ಆಕ್ಸಿಜೆನ್ ಏಜೆನ್ಸಿಗಳು ಹಾಗೂ ಪೂರೈಕೆದಾರರನ್ನು ಸಂಪರ್ಕಿಸಿ ಇನ್ನೂ ಹೆಚ್ಚಿನ ಆಕ್ಸಿಜೆನ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯಲ್ಲಿ ಕೋವಿಡ್ ಚಿಕಿತ್ಸೆಗೆ ಪೂರಕವಾಗುವ ಔಷಧಿಗಳ ಕೊರತೆ ಕಂಡುಬಂದಿರುವುದಿಲ್ಲ ರೆಮಿಡಿಸಿವಿಯರ್ ಔಷಧಿಯೂ ಸಾಕಷ್ಟು ಇದೆ ಎಂದ ಅವರು, ರೆಮಿಡಿಸಿವಿಯರ್ ಔಷಧಿಯನ್ನು ವೈದ್ಯರ ಶಿಫಾರಸ್ಸಿನಂತೆ ಅಗತ್ಯವಿರುವ ರೋಗಿಗಳಿಗೆ ಮಾತ್ರ ನೀಡಬೇಕು ಎಲ್ಲಾ ಸಾಮಾನ್ಯ ಕೋವಿಡ್ ಸೋಂಕಿತರಿಗೆ ಇದರ ಅವಶ್ಯಕತೆ ಇರುವುದಿಲ್ಲ ಎಂದರು.
ಸಭೆಯಲ್ಲಿ ಶಾಸಕರಾದ ಭರತ್ ಶೆಟ್ಟಿ. ವೈ, ಡಿ. ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ್ ಯು, ಹರೀಶ್ ಪೂಂಜ, ಉಮಾನಾಥ್ ಎ. ಕೋಟ್ಯಾನ್, ವಿಧಾನಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ, ಪೊಲೀಸ್ ಆಯುಕ್ತ ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.