ಕೋವಿಡ್ ನಿಯಂತ್ರಣ ಏ.1 ಕಠಿಣ ನಿಯಮ ಜಾರಿ

ಬೆಂಗಳೂರು, ಮಾ.೩೦- ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ಭೀತಿ ಹಿನ್ನೆಲೆ ಏ.೧ ರಿಂದ ನಗರದೆಲ್ಲೆಡೆ ಕಠಿಣ ನಿಯಮಗಳು ಜಾರಿಯಾಗಲಿದ್ದು, ಇದಕ್ಕಾಗಿ ಬಿಬಿಎಂಪಿ ಪೂರ್ಣ ತಯಾರಿ ಮಾಡಿಕೊಂಡಿದೆ.
ಕೋವಿಡ್ ಪ್ರಕರಣಗಳು ದಿನೇ ದಿನೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ವರ್ಚ್ಯುಯಲ್ ಸಭೆ ನಡೆಸಿರುವ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್, ತ್ವರಿತವಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ವ್ಯವಸ್ಥಿತ ಯೋಜನೆಗಳನ್ನು ರೂಪಿಸಿಕೊಂಡು ಮೂಲದಲ್ಲಿಯೇ ಕೋವಿಡ್ ಉಲ್ಬಣಗೊಳ್ಳುವುದನ್ನು ನಿಯಂತ್ರಿಸಬೇಕು ಎಂದು ವೈದ್ಯಾಧಿಕಾರಿಗಳು ಸೇರಿದಂತೆ ಇನ್ನಿತರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮುಖ್ಯವಾಗಿ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರ, ಫೀವರ್ ಕ್ಲೀನಿಕ್, ಮೊಬೈಲ್ ಟೆಸ್ಟಿಂಗ್ ಕೇಂದ್ರ ಹಾಗೂ ಇನ್ನಿತರೆ ಆಸ್ಪೆತ್ರೆಗಳಲ್ಲಿ ಸ್ವಾಬ್ ಸಂಗ್ರಹಿಸುವ ವೇಳೆ ಸರಿಯಾದ ಮಾಹಿತಿ ಪಡೆಯುತ್ತಿಲ್ಲ.
ಈಗಲಾದರೂ, ಸ್ವಾಬ್ ಸಂಗ್ರಹಿಸುವ ವೇಳೆ ಕಡ್ಡಾಯವಾಗಿ ನಿಖರವಾದ ಮೊಬೈಲ್ ಸಂಖ್ಯೆ, ವಿಳಾಸ ಹಾಗೂ ಪಿನ್ ಕೋಡ್ ಸಂಗ್ರಹ ಮಾಡಿಕೊಳ್ಳಬೇಕು. ಸರಿಯಾದ ಮಾಹಿತಿ ಪಡೆಯದಿದ್ದರೆ ಸೋಂಕು ದೃಢಪಟ್ಟ ವ್ಯಕ್ತಿಯನ್ನು ಪತ್ತೆಹಚ್ಚುವುದು ಕಷ್ಟವಾಗಲಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಗಳು ಸರಿಯಾಗಿ ಕೆಲಸ ಮಾಡುವಂತೆ ಹೇಳಿದ್ದಾರೆ.
ವಲಯ ಮಟ್ಟದಲ್ಲಿ ಕಾರ್ಯರ್ನಿಹಿಸುವ ಆರೋಗ್ಯ ವೈದ್ಯಾಧಿಕಾರಿಗಳು ಆಯಾ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಇರುವ ಪರಿಸ್ಥಿತಿಯನ್ನು ಅವಲೋಕಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಜೊತೆಗೆ ಸ್ವಾಬ್ ಸಂಗ್ರಹಿಸುವ, ಕೋವಿಡ್ ಪ್ರಕರಣಗಳು ಕಂಡುಬರುವ ಬಗ್ಗೆ ಜವಾಬ್ದಾರಿಯಿಂದ ಕೆಲಸ ಮಾಡಿ ಕೋವಿಡ್ ಪ್ರಕರಣಗಳು ಹರಡುವುದನ್ನು ಕಡಿಮೆ ಮಾಡಲು ಕ್ರಮವಹಿಸಬೇಕು. ಇಲ್ಲವಾದಲ್ಲಿ ಸರಿಯಾಗಿ ಕೆಲಸ ಮಾಡದ ಆರೋಗ್ಯ ವೈದ್ಯಾಧಿಕಾರಿಗಳನ್ನು ಅಮಾನತು ಮಾಡಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.
ಅಂತಾರಾಷ್ಟ್ರೀಯ ಪ್ರಯಾಣಿಕರು ವಿಮಾನದಿಂದ ಬರುವವರಿಗೆ ಆರ್ ಟಿಪಿಸಿಆರ್ ಪರೀಕ್ಷೆ ಮಾಡಿ ನೆಗೆಟಿವ್ ಬಂದವರಿಗೆ ಮಾತ್ರ ವಿಮಾನದಲ್ಲಿ ತೆರಳಲು ಅನುಮತಿ ನೀಡಲಿದೆ. ನೆಗೆಟಿವ್ ವರದಿ ಪಡೆದು ನಗರಕ್ಕೆ ಬಂದಿರುವವರ ಪಟ್ಟಿ ಪಡೆದು ೭ನೇ ದಿನ ಆರ್.ಟಿ.ಪಿ.ಸಿ.ಆರ್ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಬೇಕು. ಅದೇ ರೀತಿ ಹೊರರಾಜ್ಯಗಳಿಂದ ಬರುವವರಿಗೂ ಮಾಡಬೇಕು. ಜೊತೆಗೆ ಬಸ್ ನಿಲ್ದಾಣ, ಮಾರುಕಟ್ಟೆ, ಮಾಲ್‌ಗಳು, ಮಾರುಕಟ್ಟೆ, ಮದುವೆ ಮಂಟಪ, ಚಿತ್ರಮಂದಿರ ಸೇರಿದಂತೆ ಜನಸಂದಣಿ ಪ್ರದೇಶಗಳಲ್ಲಿ ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ಮಾಡಿ.
ಜೊತೆಗೆ ಎಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳು ಕಂಡುಬರುತ್ತಿವೆ ಎಂಬುದನ್ನು ಅವಲೋಕಿಸಿ ಆ ಭಾಗದ ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ಮಾಡಲು ಸೂಚನೆ ನೀಡಿದರು.

ಔಷಧಿ ಮಳಿಗೆಗಳಿಂದ ಮಾಹಿತಿ ಸಂಗ್ರಹಿಸಿ:
ಪಾಲಿಕೆ ವ್ಯಾಪ್ತಿಯ ಆಯಾ ವಾರ್ಡ್ ಗಳ ಪ್ರಾಥಮಿಕ ಆರೋಗ್ಯ ಕೇಂದ್ರ ಗಳ ಮಟ್ಟದಲ್ಲಿ ಬರುವ ಎಲ್ಲಾ ಔಷಧ ಮಳಿಗೆಗಳಲ್ಲಿ ಕೋವಿಡ್ ಸೋಂಕು ಲಕ್ಷಣಗಳಿಗೆ ಸಂಬಂಧಿಸಿದ ಮಾತ್ರೆಗಳನ್ನು ತೆಗೆದುಕೊಂಡು ಹೋಗಿರುವವರ ವಿವರವನ್ನು ನೀಡಲು ಸೂಚನೆ ನೀಡಬೇಕು. ಔಷಧಿ ಮಳಿಗೆಗಳಿಂದ ಪಡೆದ ಮಾಹಿತಿಯನ್ನು ಪ್ರತಿನಿತ್ಯ ಸಂಜೆ ಸಂಗ್ರಹಿಸಿಕೊಂಡು ಅಂತಹವರಿಗೆ ಕೋವಿಡ್ ಪರೀಕ್ಷೆ ಮಾಡಿ ಎಂದು ಅವರು ಸೂಚನೆ ನೀಡಿದ್ದಾರೆ.
ದಿನಕ್ಕೆರಡು ಬಾರಿ ಸ್ಯಾಂಪಲ್: ನಗರದಲ್ಲಿ ಐಎಲ್‌ಐ ಹಾಗೂ ಸಾರಿ ಲಕ್ಷಣಗಳಿರುವವರಿಂದ ಸಂಗ್ರಹ ಮಾಡಿದ ಸ್ವಾಬ್‌ನ ಸ್ಯಾಂಪಲ್‌ಗಳನ್ನು ದಿನಕ್ಕೆರಡು ಬಾರಿ ಲ್ಯಾಬ್‌ಗಳಿಗೆ ಕಳುಹಿಸಿಕೊಡಿ. ಈ ಸಂಬಂಧ ವಿಶೇಷ ಆಯುಕ್ತರು(ಆರೋಗ್ಯ) ಅವರಿಗೆ ಲ್ಯಾಬ್‌ಗಳ ಜೊತೆ ಮಾತನಾಡಲು ಆಯುಕ್ತರು ಸೂಚನೆ ನೀಡಿದರು.