ಕೋವಿಡ್ ನಿಯಂತ್ರಣಾ ಕ್ರಮ ಪಾಲನೆಗೆ ಡಿಸಿ ಸೂಚನೆ

ತುಮಕೂರು, ಏ. ೨೦- ಜಿಲ್ಲೆಯಲ್ಲಿ ಕೋವಿಡ್-೧೯ ೨ನೇ ಅಲೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಯನ್ವಯ ಸೋಂಕು ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ತಹಶೀಲ್ದಾರ್‌ಗಳು ಸೇರಿದಂತೆ ಅನುಷ್ಠಾನ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಂದಾಯ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಹಾಗೂ ಪೋಲೀಸ್ ಇಲಾಖೆ ಸೇರಿದಂತೆ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ
ವಿಡಿಯೋ ಕಾನ್ಫುರೆನ್ಸ್ ಮೂಲಕ ಕೊರೊನಾ ನಿಯಂತ್ರಣ ಕ್ರಮಗಳ ಕುರಿತ ಸಭೆ ನಡೆಸಿ ಅವರು ಮಾತನಾಡಿದರು.
ತಹಶೀಲ್ದಾರ್ ನೇತೃತ್ವದಲ್ಲಿ ಕೋವಿಡ್ ನಿಯಂತ್ರಣಾ ಕಾರ್ಯಪಡೆಯನ್ನು ರಚಿಸಿದ್ದು, ತಾಲ್ಲೂಕು ಆರೋಗ್ಯಾಧಿಕಾರಿ, ಪೊಲೀಸ್ ಇನ್ಸ್‌ಪೆಕ್ಟರ್, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ತಮ್ಮ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಕೋವಿಡ್ ನಿಯಮಾವಳಿ ಪಾಲನೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಸರ್ಕಾರ ಜಿಲ್ಲೆಯಲ್ಲಿ ಪ್ರತಿನಿತ್ಯ ೩೨೦೦ ಕೋವಿಡ್ ಪರೀಕ್ಷೆ ಮಾಡಬೇಕೆಂಬ ಗುರಿ ನಿಗದಿಪಡಿಸಿದ್ದು, ಅದರಂತೆ ೩೨೦೦ ಕೋವಿಡ್ ಪರೀಕ್ಷೆ ಮಾಡಲೇಬೇಕು. ಇದಕ್ಕೆ ಯಾವುದೇ ಕಾರಣ ಹೇಳುವಂತಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗೇಂದ್ರಪ್ಪ ಅವರಿಗೆ ಸೂಚಿಸಿದರು.
ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿಯೂ ದಿನನಿತ್ಯ ೮೦೦ ಗಂಟಲು ದ್ರವ ಮಾದರಿ ಸಂಗ್ರಹ ಮಾಡಬೇಕು. ಇದರಲ್ಲಿ ೨೪೦ ಱ್ಯಾಟ್ (ಖಂಖಿ) ಟೆಸ್ಟ್ ಹಾಗೂ ಇನ್ನುಳಿದ ೫೬೦ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಬೇಕು. ತಹಶೀಲ್ದಾರ್‌ಗಳು ನೇತೃತ್ವದಲ್ಲಿನ ಕಾರ್ಯಪಡೆ ಕೋವಿಡ್ ಪರೀಕ್ಷೆ, ಪತ್ತೆ, ಚಿಕಿತ್ಸೆ ಹಾಗೂ ನಿರ್ವಹಣೆ ಕ್ರಮಗಳನ್ನು ಅಚ್ಟುಕಟ್ಟಾಗಿ ನಿಭಾಯಿಸಬೇಕು ಎಂದರು.
@೧೨bಛಿ = ಮಾರ್ಗಸೂಚಿ ಪಾಲಿಸಿ
ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ನೀಡಿದ್ದು, ಅದರಂತೆ ಧಾರ್ಮಿಕ ಆಚರಣೆಗಳು,ಸಮಾರಂಭಗಳನ್ನು ನಿಷೇಧಿಸಲಾಗಿದೆ. ಸಾಮಾಜಿಕ ಆಚರಣೆ ಮತ್ತು ಸಮಾರಂಭಗಳಲ್ಲಿ ಪ್ರತಿ ವ್ಯಕ್ತಿಯೂ ೩.೨೫ ಚದುರ ಮೀಟರ್ ಅಂತರ ಕಾಯ್ದುಕೊಳ್ಳಬೇಕು. ಕಲ್ಯಾಣ ಮಂಟಪ, ಸಭಾಂಗಣ, ಹಾಲ್ ಇತ್ಯಾದಿ ಮುಚ್ಚಿದ ಪ್ರದೇಶಗಳಲ್ಲಿ ನಡೆಯುವ ಮದುವೆಗೆ ೧೦೦ ಜನ ಹಾಗೂ ತೆರೆದ ಪ್ರದೇಶದಲ್ಲಿ ನಡೆಯುವ ಮದುವೆಗೆ ೨೦೦ ಜನ ಮೀರಬಾರದು. ಜನ್ಮದಿನ ಹಾಗೂ ಇತರೆ ಆಚರಣೆಗಳು ತೆರೆದ ಪ್ರದೇಶದಲ್ಲಿ ೫೦ ಮಂದಿ ಹಾಗೂ ಕಲ್ಯಾಣ ಮಂಟಪ, ಸಭಾಂಗಣ, ಹಾಲ್ ಇತರೆ ಮುಚ್ಚಿದ ಪ್ರದೇಶಗಳಲ್ಲಿ ೨೫ ಮಂದಿ ಮೀರಬಾರದು. ನಿಧನ, ಶವ ಸಂಸ್ಕಾರಕ್ಕೆ ತೆರೆದ ಪ್ರದೇಶದಲ್ಲಿ ೫೦ ಹಾಗೂ ಸಭಾಂಗಣ, ಹಾಲ್ ಇತರೆ ಮುಚ್ಚಿದ ಪ್ರದೇಶಗಳಲ್ಲಿ ೨೫ ಜನ ಮೀರಬಾರದು. ಅಂತ್ಯಕ್ರಿಯೆಯಲ್ಲಿ ೨೫ ಮಂದಿ ಮೀರುವಂತಿಲ್ಲ. ರಾಜಕೀಯ ಸಮಾರಂಭಗಳು, ಆಚರಣೆಗಳು ತೆರೆದ ಪ್ರದೇಶದಲ್ಲಿ ೨೦೦ ಜನ ಮೀರಬಾರದು. ಇತರೆ ಸಮಾರಂಭಗಳಲ್ಲಿ ಸಭಾಂಗಣದ ವಿಸ್ತೀರ್ಣಕ್ಕೆ ಅನುಗುಣವಾಗಿ ೫೦ ಮಂದಿ ಮೀರಬಾರದು. ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ಅಧಿಕಾರಿಗಳು ಹೆಚ್ಚು ನಿಗಾ ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಸರ್ಕಾರದ ಈ ಮಾರ್ಗಸೂಚಿಗಳನ್ನು ಜನರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ಹೊಸ ಮಾರ್ಗಸೂಚಿಗಳ ಬಗ್ಗೆ ತಾಲೂಕು ಕೇಂದ್ರಗಳಲ್ಲಿ ತಾಲ್ಲೂಕು ಅಧಿಕಾರಿಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪಿಡಿಒಗಳು ಟಾಂ ಟಾಂ ಹೊಡೆಸುವ ಮೂಲಕ ಅರಿವು ಮೂಡಿಸಬೇಕು. ವಾಟರ್‌ಮೆನ್, ಆಶಾ ಕಾರ್ಯಕರ್ತೆಯರೂ ಜನರಿಗೆ ಸ್ವಯಂಪ್ರೇರಿತವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಮತ್ತು ಲಸಿಕೆ ಪಡೆಯಲು ಅರಿವು ಮೂಡಿಸಿ ಪ್ರೇರೇಪಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ಚೆನ್ನಬಸಪ್ಪ, ಉಪವಿಭಾಗಾಧಿಕಾರಿ ಅಜಯ್, ಡಿಹೆಚ್‌ಓ ಡಾ. ನಾಗೇಂದ್ರಪ್ಪ, ತಹಶೀಲ್ದಾರ್ ಮೋಹನ್‌ಕುಮಾರ್ ಮತ್ತಿತರರು ಭಾಗವಹಿಸಿದ್ದರು.