ಕೋವಿಡ್ ನಿಯಂತ್ರಣಕ್ಕೆ ಸರ್ಕಾರದ ಮಾರ್ಗಸೂಚಿ ಕಡ್ಡಾಯ

ಚಾಮರಾಜನಗರ, ಮಾ.23- ಕೋವಿಡ್ ಪ್ರಕರಣಗಳು ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳು ಹಾಗೂ ಗಡಿಭಾಗಕ್ಕೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ಹೆಚ್ಚಾಗುತ್ತಿರುವ ಕಾರಣ ಚಾಮರಾಜನಗರ ಜಿಲ್ಲೆಯಲ್ಲೂ ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಹಾಗೂ ಸುತ್ತೋಲೆಗಳನ್ನು ಜನರು ಕಟ್ಟುನಿಟ್ಟಾಗಿ ಪಾಲನೆ ಮಾಡುವ ಮೂಲಕ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದ್ದಾರೆ.
ಕೋವಿಡ್ ಎರಡನೇ ಅಲೆಯ ಅಪಾಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲೆಯ ಜನರು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ದೈಹಿಕ ಅಂತರ ಕಾಯ್ದುಕೊಳ್ಳಬೇಕು ಹಾಗೂ ಸ್ಯಾನಿಟೈಸರ್ ಬಳಕೆಮಾಡಬೇಕು ಎಂದು ಅವರು ತಿಳಿಸಿದ್ದಾರೆ.
ವಿವಿಧ ಸಮಾರಂಭಗಳು ಕಾರ್ಯಕ್ರಮಗಳ ಸಂದರ್ಭದಲ್ಲಿ ಹೆಚ್ಚು ಸಾರ್ವಜನಿಕರು ಗುಂಪು ಸೇರುವ ಹಿನ್ನಲೆಯಲ್ಲಿ ಸೋಂಕು ಹರಡುವ ಅಪಾಯವು ಹೆಚ್ಚಿರುತ್ತದೆ. ಹೀಗಾಗಿ ಕೋವಿಡ್ -19 ಹರಡದಂತೆ ತಡೆಗಟ್ಟಲು ಸಾರ್ವಜನಿಕ, ರಾಜಕೀಯ, ಧಾರ್ಮಿಕ ಸಭೆ-ಸಮಾರಂಭ, ಮದುವೆ, ಜನ್ಮದಿನ ಆಚರಣೆ, ಶವ ಸಂಸ್ಕಾರ ಸೇರಿದಂತೆ ಪ್ರತಿಯೊಂದಕ್ಕೂ ಭಾಗವಹಿಸಲು ನಿರ್ದಿಷ್ಟ ಜನರ ಸಂಖ್ಯೆಯನ್ನು ನಿಗದಿಪಡಿಸಿ ಸರ್ಕಾರ ಸುತ್ತೋಲೆ ಹೊರಡಿಸಿದೆ. ಜಿಲ್ಲೆಯಲ್ಲಿ ಯಾವುದೇ ಕಾರ್ಯಕ್ರಮ ಸಮಾರಂಭಕ್ಕೆ ಪೂರ್ವಭಾವಿಯಾಗಿ ಅನುಮತಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಸರ್ಕಾರದ ಸುತ್ತೋಲೆ ಮಾರ್ಗಸೂಚಿ ಉಲ್ಲಂಘಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಜಿಲ್ಲೆಯ ಗಡಿಗೆ ಹೊಂದಿಕೊಂಡಂತೆ ಇರುವ ಕೇರಳ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿ ಇರುವುದರಿಂದ ಗಡಿ ಭಾಗದ ಪ್ರವೇಶ ಹಾಗೂ ನಿರ್ಗಮನ ಸ್ಥಳದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕೇರಳದಿಂದ ಜಿಲ್ಲೆಗೆ ಬರುವವರು ಪ್ರವೇಶದ ಹಿಂದಿನ 72 ಗಂಟೆಗಳ ಅವಧಿಯಲ್ಲಿ ಆರ್.ಟಿ.ಪಿ.ಸಿ.ಆರ್ ಪರೀಕ್ಷೆಗೆ ಒಳಪಟ್ಟು ನೆಗೆಟಿವ್ ವರದಿ ಹೊಂದಿದ್ದಲ್ಲಿ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ. ಅದೇ ರೀತಿ ಕೇರಳ ರಾಜ್ಯಕ್ಕೆ ತೆರಳುವವರು ಸಹ ಆರ್.ಟಿ.ಪಿ.ಸಿ.ಆರ್ ಪರೀಕ್ಷೆಗೆ ಮಾಡಿಸಬೇಕು. ಕೇರಳಕ್ಕೆ ಹೋಗಿ ಬರುವ ಅಗತ್ಯ ವಸ್ತುಗಳ ಸರಕು ಸಾಗಣೆಯ ವಾಹನ ಚಾಲಕರು ಹಾಗೂ ಸಹಾಯಕರು 15 ದಿನಗಳಿಗೊಮ್ಮೆ ಆರ್.ಟಿ.ಪಿ.ಸಿ.ಆರ್ ಪರೀಕ್ಷೆಗೆ ಒಳಪಟ್ಟು ವರದಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಈಗಾಗಲೆ ಮೂಲೆಹೊಳೆ ಹಾಗೂ ಕೆಕ್ಕನಹಳ್ಳದಲ್ಲಿ ಚೆಕ್‍ಪೋಸ್ಟ್ ತೆರೆಯಲಾಗಿದೆ. ಜಿಲ್ಲೆಯಿಂದ ಹೊರಹೋಗುವ ಹಾಗೂ ಹೊರ ರಾಜ್ಯಗಳಿಂದ ಬರುವ ವಾಹನಗಳು ಹಾಗೂ ಸಾರ್ವಜನಿಕರ ಮೇಲೆ ನಿಗಾ ವಹಿಸುವ ಸಲುವಾಗಿ 24*7 ಅವಧಿಯಲ್ಲಿ ಕರ್ತವ್ಯ ನಿರ್ವಹಿಸಲು ಆರೋಗ್ಯ ಕಂದಾಯ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಚೆಕ್ ಪೋಸ್ಟ್‍ಗಳಿಗೆ ನಿಯೋಜಿಸಲಾಗಿದೆ.
ಕೋವಿಡ್ ಪ್ರಕರಣಗಳು ಹೆಚ್ಚಳವಾಗದಂತೆ ತಡೆಯಲು ಜಿಲ್ಲಾಡಳಿತ ತೆಗೆದುಕೊಂಡಿರುವ ನಿಯಂತ್ರಣ ಕ್ರಮಗಳಿಗೆ ಜಿಲ್ಲೆಯ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಪರಿಸ್ಥಿತಿ ಗಂಭೀರ ಹಂತ ತಲುಪುವ ಮೊದಲೇ ಸೋಂಕು ಹರಡದಂತೆ ಜನರು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಯಾವುದೆ ಜ್ವರ, ಕೆಮ್ಮು, ನೆಗಡಿ, ಶೀತದಂತಹ ಲಕ್ಷಣಗಳು ಕಂಡುಬಂದಲ್ಲಿ ಕೂಡಲೆ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಸಲಹೆ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.