ಕೋವಿಡ್ ನಿಯಂತ್ರಣಕ್ಕೆ ನಗರ, ಗ್ರಾಮೀಣ ಜನಪ್ರತಿನಿಧಿಗಳ ಸಹಕಾರ ಅಗತ್ಯ: ಡಿಸಿ

ರಾಯಚೂರು,ಮೇ.೨೨-ಕೋವಿಡ್ ಸೋಂಕು ತಡೆಗಟ್ಟುವಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಹಾಗೂ ಗ್ರಾಮ ಪಂಚಾಯತ್‌ನ ಜನಪ್ರತಿನಿಧಿಗಳು, ಅವರವರ ವ್ಯಾಪ್ತಿಯಲ್ಲಿ ನಿರ್ವಹಿಸಬೇಕಾದ ಜವಬ್ದಾರಿಗಳ ಬಗ್ಗೆ ಸಭೆ ನಡೆಸಿ ಉಪಯುಕ್ತ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ಅವರು ಜಿಲ್ಲೆಯ ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರರಿಗೆ ಸೂಚನೆ ನೀಡಿದರು.
ಅವರು ಮೇ.೨೧ರ ಶುಕ್ರವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿಯ ವಿಡಿಯೋ ಸಂವಾದ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ ತಹಶೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ಆರೋಗ್ಯ, ಪೊಲೀಸ್ ಹಾಗೂ ಕಂದಾಯ ಇಲಾಖೆಗಳ ಅಧಿಕಾರಿಗಳೊಂದಿಗೆ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹಮ್ಮಿಕೊಳ್ಳಲಾಗಿದ್ದ ವಿಡಿಯೋ ಸಂವಾದದಲ್ಲಿ ಹಲವು ನಿರ್ದೇಶನಗಳನ್ನು ನೀಡಿದರು.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಾರ್ಡ್‌ವಾರು ಹಾಗೂ ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯತ್‌ಗೆ ಆಯ್ಕೆಯಾಗಿರುವ ಜನಪ್ರತಿನಿಧಿಗಳ ಸಹಭಾಗಿತ್ವದಲ್ಲಿ ಅಧಿಕಾರಿಗಳ ಟಾಸ್ಕ್ ಫೋರ್ಸ್ ಸಮಿತಿ ರಚಿಸಿಕೊಳ್ಳಬೇಕು, ಈ ಸಮಿತಿಯನ್ನು ರಚಿಸಿಕೊಂಡು ನಿರ್ವಹಿಸಬೇಕಾದ ಕಾರ್ಯಕ್ರಮಗಳ ಕುರಿತು ಸರ್ಕಾರ ಕಳೆದ ಬಾರಿಯೇ ಆದೇಶ ಹೊರಡಿಸಿತ್ತು, ಅದರನ್ವಯ ಜಿಲ್ಲೆಯ ಇಬ್ಬರೂ ಸಹಾಯಕ ಆಯುಕ್ತರು ಹಾಗೂ ಸಂಬಂಧಿಸಿದ ತಹಶೀಲ್ದಾರರು ವಿಶಾಲವಾದ ಕಲ್ಯಾಣ ಮಂಟಪಗಳಲ್ಲಿ ಕೋವಿಡ್ ನಿಯಮಾನುಸಾರ ಮಾಸ್ಕ್, ಸ್ಯಾನಿಟೈಜರ್ ಬಳಸಿಕೊಂಡು ಹಾಗೂ ಪರಸ್ಪರ ಸಾಮಾಜಿಕ ಅಂತರ ಕಾಪಾಡಿಕೊಂಡು ಕೂಡಲೇ ನಗರ ಹಾಗೂ ಗ್ರಾಮೀಣ ಮಟ್ಟದ ಟಾಸ್ಕ್ ಪೋರ್ಸ್‌ಗಳ ಸಭೆಯನ್ನು ನಡೆಸುವಂತೆ ಸೂಚನೆ ನೀಡಿದರು.
ಗ್ರಾಮೀಣ ಭಾಗದಲ್ಲಿ ಸೋಂಕಿತರನ್ನು ಆದಷ್ಟು ಬೇಗನೆ ಪತ್ತೆ ಹಚ್ಚಲು ಆರೋಗ್ಯ ಇಲಾಖೆಯವರು ನಡೆಸುವ ಮನೆ ಮನೆ ಸಮೀಕ್ಷಾ ಕಾರ್ಯಕ್ಕೆ ನೆರವು ನೀಡಬೇಕು, ಸೋಂಕಿತರು ಪತ್ತೆಯಾದಲ್ಲೀ ಅವರನ್ನು ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಲು ಸಹರಿಸುವುದು, ಈ ಜವಾಬ್ದಾರಿಗಳಲ್ಲಿ ಅವರು ಶೇ.೧೦೦ ರಷ್ಟು ತೊಡಗಿಸಿಕೊಳ್ಳಬೇಕು, ಈ ಕರ್ತವ್ಯಗಳಿಂದ ಅವರು ನುಣಚಿಕೊಳ್ಳಲು ಯತ್ನಿಸಿದ್ದಲ್ಲೀ ಅವರನ್ನು ಆ ಸ್ಥಾನಗಳಿಂದ ಅನರ್ಹಗೊಳಿಸಲು ಸೂಕ್ತಕ್ರಮ ಕೈಗೊಳ್ಳಲಾಗುವುದು, ಈ ಬಗ್ಗೆ ಲಿಖಿತವಾಗಿ ಆದೇಶವನ್ನು ಹೊರಡಿಸಲಾಗುವುದು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಈ ಬಗ್ಗೆ ವಹಿಸಲಾಗುತ್ತಿರುವ ಕ್ರಮಗಳ ಕುರಿತು ಪರಿಶೀಲಾಗುವುದು, ಅಲ್ಲದೇ ಇದಕ್ಕೆ ಸಂಬಂಧಿಸಿದಂತೆ ಪ್ರತಿದಿನ ನಿಯಮಿತವಾಗಿ ನೀಡಲಾಗುವ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸಬೇಕು, ಇದೂ ಕೋವಿಡ್-೨ನೇ ಅಲೆ ಸಂಪೂರ್ಣವಾಗಿ ಹೋಗುವವರೆಗೆ ನಡೆಯುವ ಪ್ರಕ್ರಿಯೆಯಾಗಿದೆ, ಶಂಕಿತ ಕೋವಿಡ್ ರೋಗಿಯನ್ನು ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಿದ ನಂತರ ವಾಹನವನ್ನು ಸ್ಯಾನಿಟೈಜರ್ ಮಾಡಿಸಬೇಕು, ಸ್ಯಾನಿಟೈಜ್ ಯಂತ್ರವಿಲ್ಲದಿದ್ದರೇ ಕೂಡಲೇ ಖರೀದಿಸಬೇಕು, ಯಾವುದೇ ಕಾರಣಕ್ಕೂ ಇದನ್ನು ಲಘುವಾಗಿ ಪರಿಗಣಿಸಬಾರದು, ಶಂಕಿತರನ್ನು ಮುಂದಾಗಿ ಪರೀಕಿಸಬೇಕು ಹಾಗೂ ಅವರಿಗೆ ಚಿಕಿತ್ಸೆ ನೀಡಬೇಕು ಎಂದು ಹೇಳಿದರು.
ಕೋವಿಡ್ ಸರಪಳಿಯನ್ನು ತುಂಡರಿಸಲು ಲಾಕ್ ಡೌನ್ ಹೇರಲಾಗಿದೆ, ಆದರೆ ಸೋಂಕಿತ ರೋಗಿ ಲಾಕ್ ಡೌನ್ ನಂತರ ಇತರೆಡೆ ಸಂಚರಿಸಿದರೆ, ಅಲ್ಲಿ ಸೋಕು ಹರಡುವ ಸಾಧ್ಯತೆಗಳಿರುತ್ತವೆ, ಇಷ್ಟು ದಿನದ ಲಾಕ್ ಡೌನ್ ಉಪಯೋಗಕ್ಕೆ ಬರುವುದಿಲ್ಲ, ಹಾಗಾಗಿ ಹಳ್ಳಿಗಳಲ್ಲಿರುವ ಸೋಂಕಿತರನ್ನು ಪ್ರಥಮ ಆದ್ಯತೆಯ ಮೇರೆಗೆ ಪತ್ತೆ ಹಚ್ಚಿ, ಅವರಿಗೆ ಚಿಕಿತ್ಸೆ ನೀಡಲೇ ಬೇಕು ಎಂದರು.
ಜಿಲ್ಲೆಯಲ್ಲಿ ಹೇರಲಾಗಿರುವ ಸಂಪೂರ್ಣ ಲಾಕ್ ಡೌನ್ ಮೇ.೨೩ರ ಭಾನುವಾರದಂದು ತೆರೆಯಲಿದ್ದ್ದು, ಅಂದು ಮಧ್ಯಾಹ್ನ ೨ ಗಂಟೆಯ ವರೆಗೆ ಜಿಲ್ಲೆಯ ನಾಗರೀಕರಿಗೆ ಜೀವನಾವಶ್ಯಕ ವಸ್ತುಗಳನ್ನು ಖರೀದಿಸಲು ಅವಕಾಶ ಕಲ್ಪಿಸಿಕೊಡಲಾಗುವುದು, ಈ ಅವಧಿಯಲ್ಲಿ ಹೆಚ್ಚಿನ ಜನ ದಟ್ಟಣೆ ಆಗಬಾರದು, ಅದಕ್ಕಾಗಿ ಇಲಾಖಾ ಅಧಿಕಾರಿಗಳು ಸಿಬ್ಬಂದಿಯೊಂದಿಗೆ ಸ್ಥಳದಲ್ಲಿ ಹಾಜರಿರಬೇಕು, ಜನ ಸಂದಣೆಯಾಗದಂತೆ ಅಗತ್ಯ ಕ್ರಮವಹಿಸಬೇಕು, ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದಲ್ಲೀ ದಂಡ ವಿಧಿಸಬೇಕು, ನಗರದೊಳಗೆ ಆ ಅವಧಿಯಲ್ಲಿ ಸಂಚಾರ ಒತ್ತಡವಾಗದಂತೆ ಬೃಹತ್ ವಾಹನಗಳಿಗೆ ಪ್ರವೇಶ ನೀಡಬಾರದು ಎಂದು ತಿಳಿಸಿದರು.
ಸರ್ಕಾರದಿಂದ ನಿಖರ ಮಾಹಿತಿ ಬರುವವರೆಗೂ ಲಾಕ್ ಡೌನ್ ಮುಂದುವರಿಯುವ ಸಾಧ್ಯತೆಗಳಿವೆ, ಆದರೆ ಜನರಿಗೆ ಪ್ರತಿ ಮೂರು ದಿನಗಳಿಗೊಮ್ಮೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗುವುದು, ಜೀವನಾವಶ್ಯಕ ವಸ್ತುಗಳ ಖರೀದಿಗೆ ಮಾರುಕಟ್ಟೆಗಳನ್ನು ವಿಕೇಂದ್ರಿಕರಣ ಮಾಡಲಾಗಿದ್ದು, ಹೆಚ್ಚು ಜನ ಸೇರದಂತೆ ಅಗತ್ಯ ವಸ್ತುಗಳನ್ನು ಖರೀದಿಸುವ ಬಗ್ಗೆ ಸ್ಥಳೀಯ ಮಟ್ಟದಲ್ಲಿ ಮಾಹಿತಿ ನೀಡಬೇಕು, ಈ ವೇಳೆ ಜಿಲ್ಲಾಡಳಿತ ನಿಗದಿ ಪಡಿಸಿದ ದರಕ್ಕಿಂತ ಹೆಚ್ಚಿನ ದರದಲ್ಲಿ ಹಣ್ಣು, ತರಕಾರಿ ಮಾರಾಟ ಮಾಡುವವರು ಕಂಡುಬಂದರೆ ಕ್ರಮವಹಿಸಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ ಮಾತನಾಡಿ, ಜೀವನಾವಶ್ಯಕ ವಸ್ತುಗಳ ಖರೀದಿ ಸಮಯದಲ್ಲಿ ವಾಹನಗಳ ನಿಲುಗಡೆಗೆ ಪ್ರದೇಶಗಳನ್ನು ಗುರುತಿಸಲಾಗಿದೆ, ಅವುಗಳನ್ನು ಅಲ್ಲಿಯೇ ನಿಲ್ಲಿಸಬೇಕು, ಈ ಅವಧಿಯಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಕೆಲವು ಬ್ಯಾರಿಕೆಡ್‌ಗಳನ್ನು ತೆರವುಗೊಳಿಸಲಾಗುವುದು, ಮಾಸ್ಕ್, ಸಾಮಾಜಿಕ ಅಂತರ ಪಾಲಿಸದವರಿಂದ ದಂಡ ವಸೂಲಿ ಮಾಡಲಾಗುವುದು, ಭಾನುವಾರ ಬೆಳಿಗ್ಗೆ ೭ ರಿಂದ ಮಧ್ಯಾಹ್ನ ೨ ಗಂಟೆಯ ವರೆಗೆ ರಾಯಚೂರು, ಸಿಂಧನೂರು ಹಾಗೂ ಲಿಂಗಸೂಗೂರು ನಗರದೊಳಗೆ ಬೃಹತ್ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗುವುದು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಕ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಕೆ.ಆರ್. ದುರುಗೇಶ್, ಸಹಾಯಕ ಆಯುಕ್ತ ಸಂತೋಷ್ ಕಾಮಗೌಡ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸತೀಶ್, ರಾಯಚೂರು ತಹಸೀಲ್ದಾರ್ ಡಾ. ಹಂಪಣ್ಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಮಕೃಷ್ಣ, ರಿಮ್ಸ್ ನಿರ್ದೇಶಕ ಡಾ. ಬಸವರಾಜ ಪಿರಾಪುರ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಸುರೇಂದ್ರಬಾಬು ಸೇರಿದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ವಿಡಿಯೋ ಸಂವಾದದಲ್ಲಿದ್ದರು.