ಕೋವಿಡ್ ನಿಯಂತ್ರಣಕ್ಕೆ ಡಾ.ಜಾಧವ್, ನಿರಾಣಿ ಅವಿರತ ಶ್ರಮ : ಪ್ರೇಮಸಿಂಗ್ ಜಾಧವ್

ಚಿಂಚೋಳಿ,ಮೇ.19-ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಸದ ಡಾ.ಉಮೇಶ ಜಾಧವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ತಾಲ್ಲೂಕಾ ಪಂಚಾಯತಿ ಸದಸ್ಯ ಪ್ರೇಮಸಿಂಗ್ ಜಾಧವ ಐನಾಪುರ ಶ್ಲಾಘಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೊದಲು ಜಿಲ್ಲೆಯಲ್ಲಿ ಪ್ರತಿನಿತ್ಯ 1500 ರಿಂದ 2000ರದವರೆಗೆ ಪ್ರಕರಣಗಳು ವರದಿಯಾಗುತ್ತಿದ್ದವು. ಇದೀಗ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಇದಕ್ಕೆ ಸಂಸದ ಜಾಧವ ಮತ್ತು ಸಚಿವ ಮುರುಗೇಶ ನಿರಾಣಿ ಮತ್ತು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಹಾಗೂ ವೈದ್ಯಕೀಯ ಸಿಬ್ಬಂದಿಗಳ ಶ್ರಮ, ಸೇವೆಯೆ ಕಾರಣವಾಗಿದೆ ಎಂದರು.
ಕೋವಿಡ್ ರೋಗಿಗಳ ತುರ್ತು ಚಿಕಿತ್ಸೆಗೆ ಅಗತ್ಯವಾದ ರೆಮಿಡಿಸಿಯರ್ ಇಂಜೆಕ್ಷನ್ ಮತ್ತು ಆಕ್ಸಿಜನ್ ವ್ಯವಸ್ಥೆ ಕಲ್ಪಿಸುವುದರ ಮೂಲಕ ಹೆಚ್ಚಿನ ಸಾವು-ನೋವನ್ನು ತಪ್ಪಿಸಿದ್ದಾರೆ. ಇದಕ್ಕೆ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ರಾಜಕುಮಾರ ಪಾಟೀಲ ತೇಲ್ಕೂರ, ಡಾ.ಅವಿನಾಶ ಜಾಧವ, ಸುಭಾಷ ಗುತ್ತೇದಾರ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ, ಬಾಬುರಾವ ಚಿಂಚನಸೂರ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಚಂದು ಪಾಟೀಲ ಅವರು ಸಾಥ್ ನೀಡಿದ್ದಾರೆ. ಒಟ್ಟಾರೆ ಎಲ್ಲರು ಸೇರಿ ಕೈ ಜೋಡಿಸಿ ಕೊರೊನಾ ನಿಯಂತ್ರಣಕ್ಕೆ ಸಾಕಷ್ಟು ಶ್ರಮಿಸುತ್ತಿರುವುದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.