ಕೋವಿಡ್ ನಿಯಂತ್ರಣಕ್ಕೆ ಜನರಲ್ಲಿ ಅರಿವು ಅಗತ್ಯ: ಸಿಂಗ್

????????????????????????????????????

ಬಳ್ಳಾರಿ,ಮಾ.31: ಕೋವಿಡ್ 2ನೇ ಅಲೆಯು ಮೊದಲಿಗಿಂತ ಅತ್ಯಂತ ವೇಗವಾಗಿ ಹರಡುತ್ತಿದ್ದು,ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಧಿಕಾರಿಗಳು ಅಗತ್ಯ ಸಿದ್ಧತೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಮಾಡಿಕೊಳ್ಳುವುದರ ಜೊತೆಗೆ ಜನರಲ್ಲಿ ಈ ಕುರಿತು ಅರಿವು ಮೂಡಿಸುವ ಕೆಲಸ ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಎಲ್ಲ ತಾಲೂಕುಗಳ ತಹಸೀಲ್ದಾರರು,ಆರೋಗ್ಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಕೋವಿಡ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹೋದ ವರ್ಷದ ಅನುಭವ ಬಳಸಿಕೊಂಡು 2ನೇ ಅಲೆಯನ್ನು ನಿಯಂತ್ರಿಸುವುದಕ್ಕೆ ಮುಂದಾಗಬೇಕು. ಕೋವಿಡ್ 2ನೇ ಅಲೆಯ ಬಗ್ಗೆ ಜನರಲ್ಲಿ ಹೆದರಿಕೆ ಕಡಿಮೆ ಆಗಿದೆ.ಜನರಲ್ಲಿ ಕೋವಿಡ್ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು, ತಪಾಸಣಾ ಪ್ರಮಾಣ ಹೆಚ್ಚಳವಾಗಬೇಕು. ಸೊಂಕಿತರೊಂದಿಗಿನ ಸಂಪರ್ಕಿತರ ಪತ್ತೆಹಚ್ಚುವಿಕೆ(ಟ್ರೇಸಿಂಗ್) ವೇಗ ಪಡೆದುಕೊಳ್ಳಬೇಕು. ನಿಗದಿಪಡಿಸಿದ ಪ್ರಮಾಣದಲ್ಲಿ ಲಸಿಕೆ ನೀಡುವಿಕೆ ಕೆಲಸವಾಗಬೇಕು.ಕೋವಿಡ್ ಸೆಂಟರ್‍ಗಳ ಗುರುತಿಸುವ ಕೆಲಸವಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಸಚಿವ ಆನಂದಸಿಂಗ್ ಅವರು ಕೋವಿಡ್ ಸೊಂಕು ನಿಯಂತ್ರಣಕ್ಕೆ ಏನಾದರೂ ಅಗತ್ಯತೆಗಳಿದ್ದಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವಂತೆ ಅವರು ತಿಳಿಸಿದರು.
ಈ ಹಿಂದಿನ ಕೋವಿಡ್ ಸಮಸ್ಯೆ ನಮಗೆ ತುಂಬಾ ಅನುಭವ ಕಲಿಸಿದೆ.ಅಧಿಕಾರಿಗಳು ಸೊಂಕು ಹೆಚ್ಚಳವಾಗದಂತೇ ಮತ್ತು ಈ ಕುರಿತು ನಿರ್ಲಕ್ಷ್ಯವಹಿಸದೆ ಪ್ರಾಮಾಣಿಕವಾಗಿ ಕೆಲಸ ಮಾಡಿ. ಕೋವ್ಯಾಕ್ಸಿನ್ ವೇಸ್ಟ್ ಆಗದಂತೆ ನೋಡಿಕೊಳ್ಳಿ, ಒಂದು ಡೋಸ್ ಒಂದು ಪ್ರಾಣ ಉಳಿಸಬಲ್ಲದು. ಲಸಿಕೆ ಹಾಕುವಿಕೆ ಇನ್ನಷ್ಟು ಪರಿಣಾಮಕಾರಿಯಾಗಲಿ. ಟಾರ್ಗೆಟ್ ಜಾಸ್ತಿ ಮಾಡಿ, ಹೆಚ್ಚಿನ ಜನರಿಗೆ ಲಸಿಕೆ ಹಾಕಿಸಿ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಪವನ ಕುಮಾರ್ ಮಾಲಪಾಟಿ ಅವರು, ಕೋವಿಡ್ ಧೃಢಪಟ್ಟವರನ್ನು ಗುರುತಿಸಿ ಅವರ ಸಂಪರ್ಕದಲ್ಲಿ ಇದ್ದ ಕನಿಷ್ಠ 30 ಜನರನ್ನು ಟೆಸ್ಟ್ ಮಾಡಿ, ಅವರನ್ನು ಕ್ವಾರಂಟೈನ್ ಮಾಡುವ ಕೆಲಸ ಮಾಡಿ. ಹೋ ಕ್ವಾರೆಂಟೈನ್‍ನಲ್ಲಿರುವವನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸುವ ಕೆಲಸ ಮಾಡಿ; ಜನರಿಗೆ ಲಸಿಕೆ ನೀಡುವ ಪ್ರಕ್ರಿಯೆ ಮತ್ತಷ್ಟು ತೀವ್ರವಾಗಲಿ. ಹೋಂ ಕ್ವಾರೇಂಟೈನ್ ನಲ್ಲಿರುವವ ಮನೆಗೆ ಭೇಟಿ ಮಾಡಿ ಪರಿಶೀಲನೆ ಮಾಡಿ ಎಂದು ಅವರು ತಿಳಿಸಿದರು.
ಆಂದ್ರ ಗಡಿಭಾಗದಲ್ಲಿ ಚೆಕ್‍ಪೋಸ್ಟ್ ನಿರ್ಮಾಣ ಮಾಡಿ ಅಲ್ಲಿಯೇ ಕೋವಿಡ್ ಟೆಸ್ಟ್ ಮಾಡಲಾಗುತ್ತದೆ. ಕಾಲೇಜು ಮತ್ತು ವಸತಿ ನಿಲಯಗಳಲ್ಲಿ ಕೋವಿಡ್ ಟೆಸ್ಟ್ ಮಾಡಲಾಗುತ್ತದೆ. ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಶಾಲಾ ಕಾಲೇಜಿನಲ್ಲಿ ಮಕ್ಕಳಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಶಿಕ್ಷಕರಿಗೆ ಸೂಚಿಸುವಂತೆ ಡಿಡಿಪಿಐ ಮತ್ತು ಡಿಡಿಪಿಯು ಅವರಿಗೆ ಸೂಚಿಸಿದರು. ಎಲ್ಲ ತಹಸೀಲ್ದಾರರು ತಾಲೂಕುಮಟ್ಟದಲ್ಲಿ ಕೋವಿಡ್ ಕೇರ್ ಸೆಂಟರ್‍ಗಳ ಸಿದ್ದತೆ ಮಾಡಿಕೊಳ್ಳಿ ಎಂದು ಅವರು ತಿಳಿಸಿದರು.