ಕೋವಿಡ್ ನಿಯಂತ್ರಣಕ್ಕೆ ಗ್ರಾ.ಪಂ.ಗಳಿಗೆ ಮುಕ್ತ ಅಧಿಕಾರ

ಹುಬ್ಬಳ್ಳಿ, ಮೇ.21: ಕೋವಿಡ್ ನಿಯಂತ್ರಕ್ಕಾಗಿ ಗ್ರಾಮ ಮಟ್ಟದಲ್ಲಿ ರಚಿಸಿರುವ ಕಾರ್ಯಪಡೆಗಳು ಹೆಚ್ಚು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಗ್ರಾಮದಲ್ಲಿ ಕೋವಿಡ್ ಸೋಂಕು ಹರಡದಂತೆ ತಡೆಯಲು ಗ್ರಾ.ಪಂ.ಗಳಿಗೆ ಮುಕ್ತ ಅಧಿಕಾರ ನೀಡಲಾಗಿದೆ ಎಂದು ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ ಅಧ್ಯಕ್ಷ ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.
ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಅವರು ಕೊರೋನಾ ಮುಕ್ತ ಗ್ರಾಮ ಅಭಿಯಾನದ ಅಂಗವಾಗಿ ಗ್ರಾಮ ಮಟ್ಟದ ಕಾರ್ಯಪಡೆ ಸಭೆ ನಡೆಸಿ ಮಾತನಾಡಿದರು.
ಗ್ರಾಮ ಮಟ್ಟದ ಕಾರ್ಯಪಡೆ, ಗ್ರಾಮದಲ್ಲಿನ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ಕಂಡುಬಂದ ಸ್ಥಳಗಳನ್ನು ಗುರುತಿಸಿ ಕಂಟಾಮಿನೇಟೆಡ್ ಜೋನ್ ಎಂದು ಘೋಷಿಸಬೇಕು. ಕೋವಿಡ್ ಆರೈಕೆ ಕೇಂದ್ರಗಳನ್ನು ಗ್ರಾಮ ಮಟ್ಟದಲ್ಲಿ ತರೆಯಬೇಕು. ಮನೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ರೋಗಿಗಳ ಆರೋಗ್ಯದ ಮೇಲೆ ನಿಗಾ ಇಡಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 45 ವರ್ಷ ಮೇಲ್ಪಟವರಗೆ ಲಸಿಕೆ ನೀಡಬೇಕು. ಮೊದಲ ಡೋಸ್ ಲಸಿಕೆ ಪಡೆದವರು ನಿಗದಿತ ಸಮಯದಲ್ಲಿ ಎರಡನೇ ಲಸಿಕೆ ಸಹ ಪಡೆದಿದ್ದಾರೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಗ್ರಾಮಗಳಲ್ಲಿ ಕೋವಿಡ್ ತಪಾಸಣೆಯನ್ನು ಸಹ ಹೆಚ್ಚು ಮಾಡಬೇಕು. ಗ್ರಾಮಸ್ಥರಿಗೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಸ್ಯಾನಿಟೈಸರ್ ಬಳಸುವಂತೆ ಪ್ರೇರಿಪಿಸಬೇಕು ಎಂದರು. ನಂತರ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅಂಚಟಗೇರಿ ಗ್ರಾಮದಲ್ಲಿ ಸ್ಥಾಪಿಸಿರುವ ಕೋವಿಡ್ ಕೇರ್ ಸೆಂಟರ್‍ಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಹುಬ್ಬಳ್ಳಿ ತಾ.ಪಂ.ಇ.ಓ ಗಂಗಾಧರ ಕಂದಕೂರ, ತಾಲೂಕು ವೈದ್ಯಾಧಿಕಾರಿ ಟಿ.ಎಸ್.ಹಿತ್ತಲಮನಿ, ಬ್ಯಾಹಟ್ಟಿ ವೈದ್ಯಾಧಿಕಾರಿ ಎನ್.ಬಿ.ಕರ್ಲಾವಡ ಸೇರಿದಂತೆ ಗ್ರಾ.ಪಂ. ಅಧ್ಯಕ್ಷರು, ಕಾರ್ಯಪಡೆ ಸದಸ್ಯರು ಉಪಸ್ಥಿತರಿದ್ದರು.