ಕೋವಿಡ್ ನಿಯಂತ್ರಣಕ್ಕೆ ಕ್ರಮ: ವಿ. ಶ್ರೀನಿವಾಸ್ ಪ್ರಸಾದ್

ಚಾಮರಾಜನಗರ, ಮೇ. 04- ಜಿಲ್ಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಸಂಭವಿಸಿರುವ ಕೋವಿಡ್ ಸಾವು ಪ್ರಕರಣಗಳ ಕುರಿತು ಚರ್ಚೆ ನಡೆಸಿ ವಿವರ ಪಡೆಯಲಾಗಿದ್ದು ಕೋವಿಡ್ ನಿಯಂತ್ರಣಾ ಕಾರ್ಯದಲ್ಲಿ ಜಿಲ್ಲಾಡಳಿತ, ಆರೋಗ್ಯ ಅಧಿಕಾರಿಗಳು ನಿರಂತರವಾಗಿ ತೊಡಗಿದ್ದಾರೆ ಎಂದು ಲೋಕಸಭಾ ಸದಸ್ಯ ವಿ. ಶ್ರೀನಿವಾಸ ಪ್ರಸಾದ್ ತಿಳಿಸಿದರು.
ಜಿಲ್ಲೆಯಲ್ಲಿ ಸಂಭವಿಸಿರುವ ಕೋವಿಡ್ ಸಾವು ಪ್ರಕರಣಗಳ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ಪ್ರಾಥಮಿಕ, ಪ್ರೌಢಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ಮತ್ತು ಜಿಲ್ಲೆಯ ಹಿರಿಯ ಎಲ್ಲಾ ಅಧಿಕಾರಿಗಳೊಂದಿಗೆ ವಿವರವಾಗಿ ಚರ್ಚಿಸಿದ ಬಳಿಕ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಚಿವರೊಂದಿಗೆ ಸುದ್ದಿಗೋಷ್ಠಿ ನಡೆಸಿ ಈ ವಿಷಯ ತಿಳಿಸಿದರು.
ಜಿಲ್ಲೆಯಲ್ಲಿ ಸಂಭವಿಸಿರುವ ಕೋವಿಡ್ ಸಂಬಂಧಿ ಪ್ರಕರಣ ಕುರಿತು ವಿಸೃತವಾಗಿ ಚರ್ಚೆ ನಡೆಸಿ ಮಾಹಿತಿ ಪಡೆಯಲಾಗಿದೆ.
ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರಿಗೆ ವೆಂಟಿಲೇಟರ್, ಐ.ಸಿ.ಯು ಹಾಸಿಗೆಗಳು, ಔಷಧಗಳು ಸಮರ್ಪಕವಾಗಿವೆ. ಜಿಲ್ಲೆಯ ಆಮ್ಲಜನಕ ಪ್ಲಾಂಟ್‍ಗೆ ಪ್ರತಿದಿನ 7 ಕೆ.ಎಲ್ ಸರಬರಾಜು ಮಾಡಲು ಕ್ರಮ ವಹಿಸಲಾಗಿದೆ. 300 ಆಮ್ಲಜನಕ ಸಿಲಿಂಡರ್‍ಗಳನ್ನು ನೇರವಾಗಿ ಪೂರೈಸಲೂ ಸಹ ವ್ಯವಸ್ಥೆ ಮಾಡಲಾಗಿದೆ ಎಂದರು.
ಕೋವಿಡ್ ನಿಯಂತ್ರಣ ಸಂಬಂಧಿ ಮುಖ್ಯ ಮಂತ್ರಿಯವರೊಂದಿಗೂ ಸಮಾಲೋಚಿಸಿ ಗಮನಸೆಳೆಯಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಸುರೇಶ್‍ಕುಮಾರ್, ಆರೋಗ್ಯ ಸಚಿವರಾದ ಡಾ. ಕೆ. ಸುಧಾಕರ್ ವಿವರ ವಾಗಿ ಚರ್ಚಿಸಿದ್ದಾರೆ. ಕೋವಿಡ್ ತಡೆಗಾಗಿ ಎಲ್ಲಾ ಬಗೆಯ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸ ಲಾಗಿದೆ ಎಂದರು.
ಕೋವಿಡ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಾರ್ವಜನಿಕರು ಯಾವುದೇ ನಿರ್ಲಕ್ಷ್ಯ ವಹಿಸ ಬಾರದು. ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜನರೂ ಕೂಡ ಜಾಗೃತರಾಗಬೇಕು. ಎಲ್ಲಾ ಜನಪ್ರತಿನಿಧಿಗಳು ಕೋವಿಡ್ ನಿಯಂತ್ರಣಕ್ಕೆ ಒಗ್ಗೂಡಿ ಸಹಕರಿಸಬೇಕೆಂದು ತಿಳಿಸಿದರು.
ಕೋವಿಡ್ ತಡೆಯುವ ನಿಟ್ಟಿನಲ್ಲಿ ಗ್ರಾಮ ಹಾಗೂ ನಗರ ಪಟ್ಟಣ ವಾರ್ಡ್‍ಗಳಲ್ಲಿ ಟಾಸ್ಕ್ ಪೋರ್ಸ್ ಸಮಿತಿ ರಚನೆಯ ಮೂಲಕ ಕೋವಿಡ್ ಸೋಂಕಿತರಿಗೆ ಆರೋಗ್ಯ ಕಿಟ್ ಗಳನ್ನು ನೀಡುವ ಮೂಲಕ ಸೋಂಕು ಉಲ್ಬಣವಾಗದಂತೆ ಆರೋಗ್ಯ ಸಚಿವರು ನೀಡಿರುವ ಸಲಹೆ ಉತ್ತಮವಾಗಿದೆ ಎಂದು ಲೋಕಸಭಾ ಸದಸ್ಯ ವಿ. ಶ್ರೀನಿವಾಸ ಪ್ರಸಾದ್ ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಕೆ. ಸುಧಾಕರ್, ಪ್ರಾಥಮಿಕ, ಪ್ರೌಢಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಸುರೇಶ್ ಕುಮಾರ್, ಶಾಸಕರಾದ ಎನ್. ಮಹೇಶ್, ಸಿ.ಎಸ್. ನಿರಂಜನ್ ಕುಮಾರ್, ಹರ್ಷವರ್ಧನ್, ನಗರಸಭೆ ಅಧ್ಯಕ್ಷರಾದ ಆಶಾ ನಟರಾಜು, ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಇತರರು ಸುದ್ದಿಗೋಷ್ಠಿಯಲ್ಲಿದ್ದರು.