ಕೋವಿಡ್ ನಿಯಂತ್ರಣಕ್ಕೆ ಉಪ ಮುಖ್ಯಮಂತ್ರಿ ಕಾರಜೋಳ್ ನೇತೃತ್ವದಲ್ಲಿ ಜನಪ್ರತಿನಿಧಿಗಳ ಸಭೆ ಕರೆಯಲು ಪ್ರಿಯಾಂಕ್ ಖರ್ಗೆ ಆಗ್ರಹ

ಕಲಬುರಗಿ.ಏ.27: ಕೋವಿಡ್ ನಿಯಂತ್ರಿಸಲು ಈ ಹಿಂದೆ ಜಿಲ್ಲಾ ಸಲಹಾ ಸಮಿತಿ ನೀಡಿರುವ ವರದಿಯಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಮತ್ತು ಸದ್ಯದ ಪರಿಸ್ಥಿತಿಯಲ್ಲಿ ಕೊರೋನಾವನ್ನು ಹತೋಟಿಗೆ ತರಲು ಹಾಗೂ ಸೋಂಕಿಗೆ ತುತ್ತಾದ ರೋಗಿಗಳನ್ನು ಉಪಚರಿಸಲು ತುರ್ತಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ರಾಜ್ಯದ ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ್ ಅವರು ಕೂಡಲೇ ಜಿಲ್ಲೆಯ ಎಲ್ಲ ಶಾಸಕರು, ಸಂಸದರ ಜೊತೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಥವಾ ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಭೆ ಕರೆಯಬೇಕು ಎಂದು ಶಾಸಕರೂ ಹಾಗೂ ಮಾಜಿ ಸಚಿವರೂ ಆದ ಕೆಪಿಸಿಸಿಐ ವಕ್ತಾರ ಪ್ರಿಯಾಂಕ್ ಖರ್ಗೆ ಅವರು ಒತ್ತಾಯಿಸಿದರು.
ಮಂಗಳವಾರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸೋಂಕಿತರ ಪಾಲಿಗೆ ಸರ್ಕಾರ ಸತ್ತು ಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊರೋನಾ ಸೋಂಕಿನ ಎರಡನೇ ಅಲೆಯು ತೀವ್ರತರವಾಗಿ ಹಬ್ಬುತ್ತಿದ್ದು, ಬೆಂಗಳೂರು, ಕಲಬುರ್ಗಿ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅತೀ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿವೆ. ಆದಾಗ್ಯೂ, ಸರ್ಕಾರ ಮಾತ್ರ ಕೇವಲ ಬೆಂಗಳೂರಿನಲ್ಲಿ ಮಾತ್ರ ಸೋಂಕು ಹಬ್ಬುತ್ತಿದೆ ಎನ್ನುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದು, ಬೇರೆ ಜಿಲ್ಲೆಗಳಿಗೆ ಗಮನ ಕೊಟ್ಟಂತೆ ಕಾಣುತ್ತಿಲ್ಲ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಅದರಲ್ಲಿಯೂ ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಲೇ ಇವೆ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆಗಳು ಏರುತ್ತಿರುವುದನ್ನು ಗಮನಿಸಿದರೆ ಸರ್ಕಾರದಿಂದ ಜನರಿಗೆ ಎರಡನೇ ಅಲೆಯಲ್ಲಿಯೂ ಕೂಡ ಮುನ್ನೆಚ್ಚರಿಕೆ ಕ್ರಮ, ತಿಳಿವಳಿಕೆ ಹಾಗೂ ರೋಗಿಗಳಿಗೆ ವೈದ್ಯಕೀಯ ಸೌಲಭ್ಯ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳದೇ ಇರುವುದು ಇಲ್ಲಿನ ಜನರ ಮೇಲೆ ಕಿಂಚಿತ್ತೂ ಕಾಳಜಿ ಇಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ ಎಂದು ಅವರು ಟೀಕಿಸಿದರು.
ಜಿಲ್ಲೆಯಲ್ಲಿ ಇಎಸ್‍ಐಸಿ ಹಾಗೂ ಜಿಮ್ಸ್ ಆಸ್ಪತ್ರೆಗಳಿದ್ದು, ಇಎಸ್‍ಐಸಿ ಆಸ್ಪತ್ರೆ ಕಟ್ಟಡವೊಂದರಲ್ಲಿಯೇ ಜಿಲ್ಲೆಯ ಎಲ್ಲ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಬಹುದಿತ್ತು. ಆದಾಗ್ಯೂ, ಸರ್ಕಾರವು ಬೃಹದ್ದಾಕಾರದ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆ ಸೇರಿದಂತೆ ಬೆಡ್, ಆಕ್ಸಿಜನ್ ಮತ್ತು ರ್ಯಾಮ್‍ಡಿಸಿವರ್ ಇಂಜೆಕ್ಷನ್‍ಗಳನ್ನು ಅಗತ್ಯ ಪ್ರಮಾಣದಲ್ಲಿ ಪೂರೈಸದೇ ಸದರಿ ಆಸ್ಪತ್ರೆಯನ್ನು ಬಳಸಿಕೊಳ್ಳುವಲ್ಲಿ ವಿಫಲವಾಗಿದ್ದು, ರೋಗಿಗಳು ಅತೀ ಹೆಚ್ಚಿನ ಹಣ ನೀಡಿ ಖಾಸಗಿ ಆಸ್ಪತ್ರೆಗೆ ಹೋಗಬೇಕಾಗಿರುತ್ತದೆ. ಆದಾಗ್ಯೂ, ಖಾಸಗಿ ಆಸ್ಪತ್ರೆಗಳಲ್ಲೂ ಕೂಡ ಆಕ್ಸಿಜನ್ ಸೇರಿದಂತೆ ಸರಿಯಾಗಿ ವೈದ್ಯಕೀಯ ಸೇವೆ ದೊರಕದೇ ಇರುವುದರಿಂದ ಕೊರೋನಾ ಸೋಂಕಿತರು ನರಳಿ ಸಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಅಲ್ಲದೇ ತಾಲ್ಲೂಕುಗಳಲ್ಲಿ ಇನ್ನೂ ಕೋವಿಡ್ ಕೇರ್ ಸೆಂಟರ್ ತೆರೆಯದೇ ಇರುವುದರಿಂದ ಕೊರೋನಾ ಸೋಂಕಿಗೆ ಒಳಗಾದ ತಕ್ಷಣ ಯಾವ ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಆಕ್ಸಿಜನ್ ಲಭ್ಯ ಇದೆ ಎಂಬ ಮಾಹಿತಿ ಕೊರತೆಯಿಂದಾಗಿ ರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ನಗರದಾದ್ಯಂತ ಅಲೆದಾಡುವಂತಾಗಿದೆ. ಜಿಲ್ಲೆಯ ಗಡಿಯಲ್ಲಿ ಆರೋಗ್ಯ ಹಾಗೂ ಪೋಲಿಸ್ ಇಲಾಖೆಯಿಂದ ಗಡಿ ಪ್ರವೇಶಿಸುವ ಪ್ರಯಾಣಿಕರನ್ನು ಸರಿಯಾಗಿ ತಪಾಸಣೆ ಮಾಡದ ಕಾರಣ ಪಕ್ಕದ ಮಹಾರಾಷ್ಟ್ರ ಹಾಗೂ ತೆಲಂಗಾಣ್ ಸೇರಿದಂತೆ ಅಕ್ಕ, ಪಕ್ಕದ ರಾಜ್ಯಗಳಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜನರು ಅಕ್ರಮವಾಗಿ ಹಾಗೂ ರೈಲುಗಳ ಮೂಲಕ ಜಿಲ್ಲೆಗೆ ಬರುತ್ತಿದ್ದು, ಜಿಲ್ಲೆಗೆ ಬಂದ ಮೇಲೆ ಅವರೆಲ್ಲರ ಮಾಹಿತಿಯೂ ಕೂಡ ಸಿಗುತ್ತಿಲ್ಲ. ಇದರಿಂದ ಜಿಲ್ಲೆಯಲ್ಲಿ ಕೊರೋನಾ ಮಾತ್ರ ವೇಗವಾಗಿ ಹರಡುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೋವಿಡ್ ನಿಯಂತ್ರಣದ ಕುರಿತು ದ್ವಂದ್ವ ನಿಲುವ ಹೊಂದಿದ್ದಾರೆ. ಸಮರ್ಥವಾಗಿ ನಿರ್ವಹಿಸುತ್ತಿದೆ ಎಂದು ಸರ್ಕಾರದ ಕಾರ್ಯವನ್ನು ಸಮರ್ಥಿಸಿಕೊಳ್ಳುವ ಮುಖ್ಯಮಂತ್ರಿಗಳು ಇನ್ನೊಂದೆಡೆ ಕೋವಿಡ್ ನಿಯಂತ್ರಣಕ್ಕೆ ವ್ಯವಸ್ಥೆ ಕಲ್ಪಿಸದೇ ಇದ್ದರೆ ಸರ್ಕಾರಿ, ಖಾಸಗಿ ಆಸ್ಪತ್ರೆಗಳನ್ನು ಮುಚ್ಚಬೇಕಾಗುತ್ತದೆ ಎಂದೂ ಹೇಳುತ್ತಾರೆ ಎಂದು ಖರ್ಗೆಯವರು ದೂರಿದರು.
ಜಿಮ್ಸ್ ಆಸ್ಪತ್ರೆಗೆ ನಾನು ಖುದ್ದು ಭೇಟಿ ಮಾಡಿರುವೆ. ಅಲ್ಲಿನ ಸ್ಥಿತಿ ಭಯಾನಕವಾಗಿದೆ. ಸಿಬ್ಬಂದಿಗಳ ಪರಿಸ್ಥಿತಿ ಹೇಳತೀರದು. ಇದೇ ಪರಿಸ್ಥಿತಿ ಮುಂದುವರೆದರೆ ಇನ್ನುಷ್ಟು ಭಯಾನಕ ಪರಿಸ್ಥಿತಿ ಮುಂದುವರೆಯಲಿದೆ. ಕೂಡಲೇ ಜಿಮ್ಸ್ ಆಸ್ಪತ್ರೆಗೆ ಅಗತ್ಯವಿರುವ ನೇಮಕಾತಿಗಳನ್ನು ತುರ್ತಾಗಿ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಮಾಜಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಮಾತನಾಡಿ, ಸೋಂಕಿತರಿಗೆ ಸೂಕ್ತ ಚಿಕಿತ್ಸೆಗಾಗಿ ಬೆಡ್ ವ್ಯವಸ್ಥೆ, ಆಕ್ಸಿಜನ್ ಕೊರತೆ, ರೆಮಿಡೆಸಿವರ್ ಇಂಜಕ್ಷನ್ ಸಮಸ್ಯೆಯನ್ನು ಕೂಡಲೇ ಇತ್ಯರ್ಥಪಡಿಸಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ್, ಪಕ್ಷದ ಜಿಲ್ಲಾಧ್ಯಕ್ಷ ಜಗದೇವ್ ಗುತ್ತೇದಾರ್ ಕಾಳಗಿ, ಡಾ. ಕಿರಣ್ ದೇಶಮುಖ್, ಶಿವು ಹೊನಗುಂಟಿ ಮುಂತಾದವರು ಉಪಸ್ಥಿತರಿದ್ದರು.