ಕೋವಿಡ್ ನಿಭಾವಣೆಗೆ ಜಿಲ್ಲಾಡಳಿತ ಸಿದ್ಧ

ಗದಗ,ಮಾ31 : ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಕೋವಿಡ್ ಸೋಂಕು ದೃಢಪಟ್ಟ ಪ್ರಕರಣಗಳು ಅಧಿಕವಾಗುತ್ತಿದ್ದು, ಇದೇ ರೀತಿ ಮುಂದುವರೆದಲ್ಲಿ ಜಿಲ್ಲಾಡಳಿತ ನಿಭಾವಣೆಗೆ ಸಿದ್ಧವಿದೆ ಎಂದು ಸಣ್ಣ ಕೈಗಾರಿಕೆ, ವಾರ್ತಾ ಸಚಿವ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿ ಜರುಗಿದ ಕೋವಿಡ್ ನಿಯಂತ್ರಣ ಕ್ರಮಗಳ ಕುರಿತು ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೋವಿಡ್ ಸೋಂಕಿನ 2 ನೇ ಅಲೆಯ ಹಿನ್ನೆಲೆಯಲ್ಲಿ ಇಂದು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಲಾಗಿದ್ದು ಸಭೆಯಲ್ಲಿ ಸೋಂಕು ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕ್ರಮಗಳ ಕುರಿತು ಚರ್ಚಿಸಲಾಗಿದೆ. ಸೋಂಕು ಅಧಿಕವಾದಲ್ಲಿ ಚಿಕಿತ್ಸೆಗಾಗಿ ಔಷಧಿಗಳ ಸಂಗ್ರಹಣೆ, ಪಿ.ಪಿ.ಇ ಕಿಟ್, ಮಾಸ್ಕ್ ಸ್ಯಾನಿಟೈಜರ್, ವೈದ್ಯಕೀಯ ಉಪಕರಣಗಳ ಲಭ್ಯತೆ ಹಾಗೂ ಸಂಗ್ರಹಣೆ ಕುರಿತು ಚರ್ಚಿಸಲಾಯಿತು ಎಂದರು.

ಸರ್ಕಾರದಲ್ಲಿ ಸೋಂಕು ನಿಯಂತ್ರಣಕ್ಕಾಗಿ ಅನುದಾನ ಕೊರತೆಯಿಲ್ಲ. ಹಾಗೂ ಚಿಕಿತ್ಸೆಗೆ ಬೇಡಿಕೆಗನುಸಾರವಾಗಿ ಉಪಕರಣಗಳನ್ನು ಒದಗಿಸಲಾಗುತ್ತಿದೆ ಎಂದರು. ಕರೋನಾ ಸೋಂಕನ್ನು ಸರ್ಕಾರದಿಂದ ಮಾತ್ರ ತಡೆಯಲು ಸಾಧ್ಯವಿಲ್ಲ. ಸೋಂಕು ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಸಹ ಅತ್ಯಗತ್ಯವಾಗಿದೆ. ಸಾರ್ವಜನಿಕರು ಸೋಂಕು ನಿಯಂತ್ರಣ ಕ್ರಮಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿನಾಕಾರಣ ಗುಂಪು ಸೇರುವುದು, ಅನಗತ್ಯ ತಿರುಗಾಟ ಬಿಡಬೇಕೆಂದು ಹೇಳಿದರು.

ಜಿಲ್ಲೆಯ 57 ಕೇಂದ್ರಗಳಲ್ಲಿ ಈಗಾಗಲೇ ಕೋವಿಡ್ ಲಸಿಕೆಯನ್ನು ನೀಡಲಾಗುತ್ತಿದ್ದು ಎಪ್ರಿಲ್ 1 ರಿಂದ 127 ಹೊಸ ಕೇಂದ್ರಗಳಲ್ಲಿ ಲಸಿಕೆ ವಿತರಣೆಗೆ ಕ್ರಮ ವಹಿಸಲಾಗುತ್ತಿದೆ. ಈವರೆಗೆ ಜಿಲ್ಲೆಯಾದ್ಯಂತ ಶೇ.39 ರಷ್ಟು ಲಸಿಕೆ ನೀಡಿಕೆಯಾಗಿದ್ದು ಲಸಿಕೆ ನೀಡಿಕೆಯಲ್ಲಿ ಗದಗ ಜಿಲ್ಲೆಯು ರಾಜ್ಯದಲ್ಲಿ 6 ನೇ ಸ್ಥಾನದಲ್ಲಿದೆ. ಇನ್ನೂ ಉತ್ತಮ ಸಾಧನೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಲಸಿಕೆ ಕುರಿತು ಅನುಮಾನ ಬೇಡ. ಲಸಿಕೆಯಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳಿಲ್ಲ. ಕೋವಿಶೀಲ್ಡ್ ,ಕೋವ್ಯಾಕ್ಸಿನ್ ಎರಡೂ ಲಸಿಕೆಗಳು ವಿಶ್ವಾಸಾರ್ಹವಾಗಿದ್ದು ನಮ್ಮ ಮನೆಯಲ್ಲಿಯೇ ಎರಡೂ ತರಹದ ಲಸಿಕೆಗಳನ್ನು ಮನೆಯ ಸದಸ್ಯರು ಪಡೆದಿರುವುದಾಗಿ ತಿಳಿಸಿದರು.
ನರಗುಂದದ ದಲಿತ ಹೆಣ್ಣುಮಗಳ ಮೇಲೆ ರಾಮದುರ್ಗದಲ್ಲಿ ಬರ್ಬರ ಹತ್ಯೆ ನಡೆದಿದ್ದು ಇದೊಂದು ಕ್ರೂರ ಹತ್ಯೆಯಾಗಿದೆ. ಡಿ.ಎಸ್.ಪಿ. ರಾಮನಗೌಡ ಹಟ್ಟಿ ತನಿಖೆ ಕೈಗೊಂಡಿದ್ದು ತಪ್ಪಿತಸ್ಥರನ್ನು ಈಗಾಗಲೇ ಬಂಧಿಸಲಾಗಿದ್ದು ಆರೋಪಿಗೆ ತಕ್ಕ ಶಿಕ್ಷೆ ವಿಧಿಸಲು ತನಿಖಾ ಕಾರ್ಯ ಮುಂದುವರೆದಿದೆ ಎಂದರು.

ಇದೇ ಸಂದರ್ಭದಲ್ಲಿ ಆಯುಷ್ ಇಲಾಖೆಯಿಂದ ಸಿದ್ಧಪಡಿಸಲಾದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಿಟ್‍ನ್ನು ವಸತಿ ಶಾಲೆಯ ಮಕ್ಕಳಿಗೆ ಸಚಿವರು ಸಾಂಕೇತಿಕವಾಗಿ ವಿತರಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಸಂಸದ ಶಿವಕುಮಾರ ಉದಾಸಿ, ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕ ಕಳಕಪ್ಪ ಬಂಡಿ, ಶಾಸಕರಾದ ರಾಮಣ್ಣ ಲಮಾಣಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು, ಜಿ.ಪಂ. ಸಿ.ಇ.ಓ ಭರತ್ ಎಸ್, ಜಿಲ್ಲಾ ಪೆÇಲೀಸ ವರಿಷ್ಟಾಧಿಕಾರಿ ಯತೀಶ್ ಎನ್, ಅಪರ ಜಿಲ್ಲಾಧಿಕಾರಿ ಸತೀಶಕುಮಾರ್ ಎಂ, ಹಾಜರಿದ್ದರು.