ಕೋವಿಡ್ ನಡುವೆಯೂ ಸರಳ ವೈಕುಂಠ ಏಕಾದಶಿ ಆಚರಣೆ

ಕುಣಿಗಲ್, ಜ. ೧೫- ಕೋವಿಡ್ ನಡುವೆಯೂ ವೈಕುಂಠ ಏಕಾದಶಿ ವಿಶೇಷವಾಗಿ ಕೋಟೆ ತುಡಿಕೆ ವೆಂಕಟರಮಣಸ್ವಾಮಿಗೆ ವಿವಿಧ ತರಕಾರಿ ಮತ್ತು ಹಣ್ಣುಗಳಿಂದ ಅಲಂಕಾರವನ್ನು ದೇವಾಲಯದ ಒಳಭಾಗ ಮತ್ತು ಹೊರಗಡೆ ಮಾಡಲಾಗಿತ್ತು.
ಪಟ್ಟಣದ ಕೋಟೆ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪೂಜೆ ಮಾಡಲಾಯಿತು. ಮಕರ ಸಂಕ್ರಾಂತಿ ಹಬ್ಬದ ಮುನ್ನಾ ದಿನ ಏಕಾದಶಿ ಬಂದಿರುವ ಹಿನ್ನೆಲೆಯಲ್ಲಿ ರೈತರು ಬೆಳೆದ ವಿವಿಧ ಹಣ್ಣು-ತರಕಾರಿಗಳಿಂದ ವಿಶೇಷ ಅಲಂಕಾರ ಮಾಡಿ, ಪಂಚಾಮೃತ ಅಭಿಷೇಕ, ಉಯ್ಯಾಲೆ ಸೇವೆ ಸೇರಿದಂತೆ ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವ ಮೂಲಕ ಭಕ್ತರು ಮಾಸ್ಕ್ ಮತ್ತು ಸ್ಯಾನಿಟೈಸರ್ ಹಾಕಿಕೊಳ್ಳುವ ಮೂಲಕ ಸರತಿ ಸಾಲಿನಲ್ಲಿ ಸಾಮಾಜಿಕ ಅಂತರದ ಮೂಲಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ದೇವಸ್ಥಾನಕ್ಕೆ ಸಂಪೂರ್ಣವಾಗಿ ಸ್ಯಾನಿಟೈಸರ್ ಮಾಡಲಾಗಿತ್ತು. ಜಗತ್ತಿಗೆ ಒದಗಿರುವ ಮಹಾಮಾರಿ ಕೊರೊನಾ ದೂರವಾಗಲಿ ಎಂದು ದೇವರಲ್ಲಿ ಸದ್ಭಕ್ತರು ಪ್ರಾರ್ಥಿಸಿದರು.
ದೇವಾಲಯದ ಧರ್ಮಾಧಿಕಾರಿ ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ ವೈಕುಂಠ ಏಕಾದಶಿ ಧಾರ್ಮಿಕ ಕಾರ್ಯಗಳನ್ನು ನೆರವೇರಿಸುವ ಮೂಲಕ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು ಎಂದು ತಿಳಿಸಿದರು.
ಕೆ.ಜಿ.ಶ್ರೀನಿವಾಸ್, ರವಿ, ಕೋಟೆ ತಿಮ್ಮಣ್ಣ, ಪುರಸಭಾಧ್ಯಕ್ಷ ರಂಗಸ್ವಾಮಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತರು ಸ್ವಾಮಿಯ ದರ್ಶನ ಪಡೆದರು.