ಕೋವಿಡ್ : ದೇವದುರ್ಗ ಶನಿವಾರ ಸಂತೆ ಸ್ಥಗಿತಕ್ಕೆ ಆದೇಶ

ತರಕಾರಿ ಮಾರಾಟಕ್ಕೆ ಬಂದ ರೈತರು – ಟ್ರಾಫಿಕ್ ಜಾಮ್…
ರಾಯಚೂರು.ಮಾ.೨೭- ಕೊರೊನಾ ಹಿನ್ನೆಲೆಯಲ್ಲಿ ಸಂತೆ ರದ್ದು ಪಡಿಸಿದ ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ಈ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ನೀಡದಿರುವುದರಿಂದ ಇಂದು ದೇವದುರ್ಗ ಸಿರವಾರ ಕ್ರಾಸ್ ಬಳಿ ಭಾರೀ ಟ್ರಾಫಿಕ್‌ನಿಂದ ಜನರು ಪರದಾಡಬೇಕಾಯಿತು. ಅಲ್ಲದೇ, ತರಕಾರಿ ವ್ಯಾಪಾರಿಗಳು ಕಷ್ಟಕ್ಕೆ ಗುರಿಯಾದರು.
ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸಂತೆಗಳನ್ನು ರದ್ದುಗೊಳಿಸಿದ್ದಾರೆ. ಎರಡು ವಾರಗಳಿಂದ ಸಂತೆ ನಿರ್ವಹಣೆಗೊಂಡಿಲ್ಲ. ಆದರೆ, ಹಳ್ಳಿ ಜನ ಮಾತ್ರ ದೇವದುರ್ಗದಲ್ಲಿ ತರಕಾರಿ ಮತ್ತಿತರ ವಸ್ತುಗಳ ಮಾರಾಟಕ್ಕೆ ಭಾರೀ ಸಂಖ್ಯೆಯಲ್ಲಿ ತೆರಳಿ ಬಂದಿದ್ದರು. ತರಕಾರಿಯೊಂದಿಗೆ ಆಗಮಿಸಿದ್ದರು. ಸಿರವಾರ ಕ್ರಾಸ್ ಬಳಿ ಎಲ್ಲಾ ತರಕಾರಿ ವ್ಯಾಪಾರಿಗಳನ್ನು ತಡೆದು, ಒಳಗೆ ಬಿಡದಿರುವುದರಿಂದ ತರಕಾರಿ ತಂದ ಜನ ರಸ್ತೆಯಲ್ಲಿಯೇ ತರಕಾರಿ ಮಾರಾಟ ಆರಂಭಿಸಿದರು. ಇದರಿಂದ ಏಕಾಏಕಿ ವಾಹನಗಳ ಸಂಚಾರಕ್ಕೆ ಬಾರೀ ತಡೆಯಾಯಿತು.
ಸುಮಾರು ೨ ಗಂಟೆಗಳವರೆಗೂ ಜನ ಟ್ರಾಫಿಕ್‌ನಲ್ಲಿ ಸಿಕ್ಕಿದ್ದರೂ, ಇದನ್ನು ತೆರವುಗೊಳಿಸಲು ಪೊಲೀಸರೇ ಇಲ್ಲದಿರುವುದರಿಂದ ಜನರೇ ತಮಗೇ ತಾವು ನಿಧಾನಕ್ಕೆ ವಾಹನಗಳನ್ನು ಅಲ್ಲಿಂದ ಮುಂದೆ ಸಾಗಿಸಿದರು. ರಸ್ತೆಗಳಲ್ಲಿ ತರಕಾರಿ ಚೆಲ್ಲಾಪಿಲ್ಲಿ ಬೀಳುವಂತಾಗಿತ್ತು. ಕಳೆದ ಎರಡು ವಾರಗಳಿಂದ ಕೋವಿಡ್ ಅಲೆಯ ಹಿನ್ನೆಲೆಯಲ್ಲಿ ತರಕಾರಿ ಮಾರಾಟ ಸಂತೆಗಳನ್ನೇ ರದ್ದುಗೊಳಿಸಿದ ಜಿಲ್ಲಾಡಳಿತಕ್ಕೆ ಮಸ್ಕಿ ಚುನಾವಣೆಯಲ್ಲಿ ಸಾವಿರಾರು ಸಂಖ್ಯೆಯ ಜನ ಮಾಸ್ಕ್ ಧರಿಸದೇ, ಗುಂಪು ಗುಂಪಾಗಿ ಪ್ರತಿನಿತ್ಯ ಪ್ರಚಾರ ನಡೆಸುತ್ತಿರುವುದು ಕಾಣಲಿಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿ ಶನಿವಾರ ತರಕಾರಿ ಮಾರಾಟಕ್ಕೆ ದೇವದುರ್ಗ ಸಂತೆಗೆ ಬರುವುದು ಸಾಮಾನ್ಯ. ಸಂತೆಯನ್ನೇ ರದ್ದುಪಡಿಸಿದರೇ, ಬೇಡದ ತರಕಾರಿ ಎಲ್ಲಿ ಮಾರಾಟ ಮಾಡಬೇಕು. ರೈತರಿಗೆ ಆಗುವ ನಷ್ಟ ತುಂಬಿಕೊಡುವುದು ಯಾರು ಎಂದು ತರಕಾರಿ ವ್ಯಾಪಾರಿಗಳು ಆಡಳಿತಕ್ಕೆ ಹಿಡಿಶಾಪ ಹಾಕಿದರು. ಸಿನಿಮಾ ಮಂದಿರ, ಜಾತ್ರೆ, ಚುನಾವಣೆ ಮತ್ತಿತರ ರಾಜಕೀಯ ಕಾರ್ಯಕ್ರಮಗಳಿಲ್ಲದ ಕೊರೊನಾ ಅಡ್ಡಿ ದೇವದುರ್ಗ ಸಂತೆಗೆ ಮಾತ್ರ ಏಕೆ ಎನ್ನುವುದು ಜನರ ಪ್ರಶ್ನೆಯಾಗಿತ್ತು. ಈಗಾಗಲೇ ತರಕಾರಿ ಸಂಗ್ರಹಕ್ಕೆ ಯಾವುದೇ ಪರ್ಯಾಯ ವ್ಯವಸ್ಥೆಯಿಲ್ಲದ ಕಾರಣ ಸಂತೆಯಲ್ಲಿ ಮಾರಾಟಗೊಳ್ಳದಿದ್ದರೇ, ತರಕಾರಿ ಕೊಳೆತು, ತರಕಾರಿ ಬೆಳೆಗಾರರ ಬದುಕು ಬೀದಿಗೆ ಬರುವಂತಾಗುತ್ತದೆ.
ಇಲ್ಲಿಯ ಜನಪ್ರತಿನಿಧಿಗಳು ಮತ್ತು ಮುಖಂಡರು, ಜಿಲ್ಲಾಡಳಿತ ತಮ್ಮ ಸಮಸ್ಯೆ ಮನವರಿಕೆ ಮಾಡಿಕೊಂಡು ಮಾಸ್ಕ್ ಧರಿಸುವ ಮೂಲಕ ಒಂದು ದಿನದ ಸಂತೆ ನಿರ್ವಹಣೆಗೆ ಅವಕಾಶ ಕೊಡಬೇಕೆಂದು ಒತ್ತಾಯಿಸಿದರು. ಇಂದು ಸಂತೆ ಎನ್ನುವ ಮಾಹಿತಿಯಿದ್ದರೂ, ತಾಲೂಕು ಪೊಲೀಸ್ ಅಧಿಕಾರಿಗಳು ಸರಿಯಾದ ವ್ಯವಸ್ಥೆ ಕೈಗೊಳ್ಳದ ಕಾರಣ ಸಂಚಾರ ದಟ್ಟತೆಗೆ ಜನರು ಬಿಸಿಲಿನಲ್ಲಿ ಎರಡು ಗಂಟೆ ಕಾಯುವ ಪ್ರಸಂಗ ನಿರ್ಮಾಣವಾಯಿತು. ತರಕಾರಿ ಮಾರಾಟಗಾರರಿಗೆ ಪರ್ಯಾಯ ಒದಗಿಸುವ ಮೂಲಕ ಶನಿವಾರದ ಸಂತೆ ಸಾಮಾಜಿಕ ಅಂತರ ಮತ್ತು ಮಾಸ್ಕ್ ಮೂಲಕ ನಿರ್ವಹಿಸಲು ನೆರವು ಮಾಡಿಕೊಡಿ ಎನ್ನುವ ಕೂಗು ಜಿಲ್ಲಾಡಳಿತ ಮತ್ತು ತಾಲೂಕುಗಳಿಗೆ ಕೇಳಬಹುದೇ? ಮಹಲ್ ಹಾಗೂ ಉಳ್ಳವರ ವ್ಯಾಪಾರ ವಹಿವಾಟಿಗೆ ಮತ್ತು ರಾಜಕಾರಣಿಗಳ ಕಾರ್ಯಕ್ರಮಗಳಿಗೆ ಒಂದು ನ್ಯಾಯ, ಬಡ ರೈತರಿಗೆ ಮತ್ತೊಂದು ನ್ಯಾಯ ಎನ್ನುವ ನಿಯಮ ಜಿಲ್ಲಾಡಳಿತ ಅನುಸರಿಸುತ್ತದೆಯೇ? ಎಂದು ಪ್ರಶ್ನಿಸಿದರು.