ಕೋವಿಡ್ ದೃಢವಾದರೆ 7 ದಿನ ಹೋಮ್ ಐಸೊಲೇಷನ್

ಬೆಂಗಳೂರು, ಡಿ.26-ಕೋವಿಡ್ ಪಾಸಿಟಿವ್ ಬಂದವರಿಗೆ ಕಡ್ಡಾಯ 7 ದಿನ ಹೋಮ್ ಐಸೊಲೇಷನ್ ಮಾಡುವ ಜೊತೆಗೆ ಸೋಂಕಿತರ ಮನೆಗಳಿಗೆ ವೈದ್ಯರು ಭೇಟಿ ನೀಡಿ ನಿಗಾ ವಹಿಸಲಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ನಗರದಲ್ಲಿಂದು ಕೋವಿಡ್ ಮುಂಜಾಗೃತ ಕ್ರಮಗಳ ಕುರಿತಂತೆ ನಡೆದ ಕ್ಯಾಬಿನೆಟ್ ಸಬ್ ಕಮಿಟಿ ಸಭೆಯಲ್ಲಿ ಪ್ರಸ್ತಾಪಿಸಿದ ಅವರು,
ಕೋವಿಡ್ ಪಾಸಿಟಿವ್ ಆದವರು ಕಡ್ಡಾಯವಾಗಿ 7 ದಿನ ಹೋಮ್ ಐಸೊಲೇಷನ್ʼನಲ್ಲಿ ಇರಬೇಕು. ʻಹೋಮ್ ಐಸೊಲೇಷನ್ʼನಲ್ಲಿ ಇರುವ, ಸರ್ಕಾರಿ ಅಥವಾ ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ 7 ದಿನಗಳ ರಜೆ ಕೊಡಬೇಕು.

ಐಸಿಯು ಅಥವಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಬಾಧಿತರಿಗೆ ಸಂಪೂರ್ಣ ಗುಣಮುಖರಾಗುವರೆಗೆ ರಜೆ ಕೊಡಿಸುವ ಕುರಿತು ಸರ್ಕಾರದಿಂದ ಮಾರ್ಗಸೂಚಿ ಹೊರಡಿಸಲು ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ ಎಂದರು.

ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳು, ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ್ ರಚನೆಗೆ ನಿರ್ಧಾರಿಸಿದ್ದು, ಬೆಂಗಳೂರಿನ ವಿಕ್ಟೋರಿಯಾ, ಮತ್ತು ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ್.‌ ಐಸಿಯು ಬೆಡ್, ಹಾಗೂ ಐಸೊಲೇಷನ್ ಬೆಡ್ ವ್ಯವಸ್ಥೆ ಮಾಡಲಾಗುವುದು ಎಂದರು.

ಹಾಗೇ, ರಾಜ್ಯದಲ್ಲಿ ಕೋವಿಡ್ 436 ಸಕ್ರಿಯ ಪ್ರಕರಣಗಳಿವೆ. ಹೋಮ್ ಐಸೊಲೇಷನ್ ನಲ್ಲಿರುವ 400 ಕೋವಿಡ್ ಸೋಂಕಿತರ ಮನೆಗಳಿಗೆ ವೈದ್ಯರು ಭೇಟಿ ನೀಡಿ ನಿಗಾ ವಹಿಸಲು ಸೂಚಿಸಲಾಗಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕಿತರಲ್ಲಿ ಕೋವಿಡ್ ರೋಗಲಕ್ಷಣಗಳಿದ್ದರೆ ಕಡ್ಡಾಯವಾಗಿ ಟೆಸ್ಟಿಂಗ್ ನಡೆಸಬೇಕು. ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಮೇಲೆ ಹೆಚ್ಚಿನ ನಿಗಾ ವಹಿಸಬೇಕು ಎಂದೂ ಸಭೆಯಲ್ಲಿ ಸೂಚಿಸಲಾಗಿದೆ ಎಂದು ಹೇಳಿದರು.

ಕೋವಿಡ್ ಶಂಕೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡುವ ಎಲ್ಲರನ್ನು ಸಿ.ಟಿ ಸ್ಕ್ಯಾನಿಂಗ್ ಗೆ ಒಳಪಡಿಸುವುದು ನಿಷೇಧಿಸಲಾಗಿದ್ದು, ಕೋವಿಡ್ ಪಾಸಿಟಿವ್ ಬಂದವರನ್ನ ಮಾತ್ರ ಸಿ.ಟಿ ಸ್ಕ್ಯಾನಿಂಗ್ ಗೆ ಒಳಪಡಿಸಬಹುದು.

ಇಂದಿನಿಂದ ಪ್ರತಿ ನಿತ್ಯ 5 ಸಾವಿರ ಕೋವಿಡ್ ಟೆಸ್ಟಿಂಗ್. ವೆಂಟಿಲೇಟರ್, ಆಕ್ಸಿಜನ್ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ. ನಾಲ್ಕು ಮೊಬೈಲ್ ಆಕ್ಸಿಜನ್ ಕಂಟೆಂಡರ್ ಗಳ ಖರೀದಿಗೆ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದರು.

ಸಭೆಯಲ್ಲಿ ಸಮಾಜ ಕಲ್ಯಾಣ ಸಚಿವ ಎಚ್.ಸಿ ಮಹದೇವಪ್ಪ, ವೈದ್ಯಕೀಯ ಶಿಕ್ಷಣ ಸಚಿವ ಶರಣು ಪ್ರಕಾಶ್ ಪಾಟೀಲ್, ಉನ್ನತ ಶಿಕ್ಷಣ ಸಚಿವ ಸುಧಾಕರ್ ಸೇರಿದಂತೆ, ಹಿರಿಯ ಆರೋಗ್ಯ ಅಧಿಕಾರಿಗಳು ಪಾಲ್ಗೊಂಡಿದ್ದರು.