ಕೋವಿಡ್ ತಪಾಸಣೆಗೆ ತಹಶೀಲ್ದಾರ ಮನವಿ

ಬ್ಯಾಡಗಿ,ಮೇ3: ಕೊರೊನಾ ಪಾಸಿಟಿವ್ ಬಂದಂತಹ ವ್ಯಕ್ತಿಯ ಪ್ರಾಥಮಿಕ ಸಂಪರ್ಕಿತರು ಕೋವಿಡ್-19 ತಪಾಸಣೆ ಮಾಡಿಸಿಕೊಳ್ಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ತಹಶೀಲ್ದಾರ ರವಿಕುಮಾರ ಕೊರವರ ಅವರು ಸ್ಥಳಕ್ಕೆ ತೆರಳಿ ಆರೋಗ್ಯ ಇಲಾಖೆಯ ಸಿಬ್ಬಂದಿಯಿಂದ ಕೋವಿಡ್ ತಪಾಸಣೆ ಮಾಡಿಸಿಕೊಳ್ಳುವಂತೆ ಮನವಿ ಮಾಡಿಕೊಂಡು ಮನವೊಲಿಸಿದ ಘಟನೆ ತಾಲೂಕಿನ ಕಾಸಂಬಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ಗ್ರಾಮದ ವ್ಯಕ್ತಿಯೋರ್ವನಿಗೆ ಕೊರೋನಾ ಸೋಂಕು ತಗುಲಿದ್ದು, ನೂರು ಮೀಟರ್ ವ್ಯಾಪ್ತಿಯಲ್ಲಿ ಬರುವ ಜನರಿಗೆ ಹಾಗೂ ಪ್ರಾಥಮಿಕ ಸಂಪರ್ಕಿತರಿಗೆ ಕೋವಿಡ್ ತಪಾಸಣೆ ಮಾಡಲು ತೆರಳಿದ್ದ ಆರೋಗ್ಯ ಇಲಾಖೆ ಸಹಾಯಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿಗೆ ತಪಾಸಣೆ ಮಾಡಿಸಿಕೊಳ್ಳಲು ಸಹಕಾರ ನೀಡದ ಹಿನ್ನಲೆಯಲ್ಲಿ ಈ ವಿಷಯವನ್ನು ತಹಶೀಲ್ದಾರ ಅವರ ಗಮನಕ್ಕೆ ತಂದಾಗ ರವಿಕುಮಾರ ಕೊರವರ ಅವರು ಖುದ್ದಾಗಿ ಗ್ರಾಮಕ್ಕೆ ತೆರಳಿ ಕೊರೋನಾ ಜಾಗೃತಿ ಮೂಡಿಸುವ ಮೂಲಕ ಕೋವಿಡ್ ತಪಾಸಣೆ ಮಾಡಿಸಿಕೊಳ್ಳುವಂತೆ ಮನವಿ ಮಾಡಿಕೊಂಡ ಬಳಿಕ ಸಂಪರ್ಕಿತರು ತಪಾಸಣೆಗೆ ಒಪ್ಪಿಕೊಂಡರು.
ಈ ಸಂದರ್ಭದಲ್ಲಿ ಕಾಗಿನೆಲೆ ಠಾಣೆಯ ಪಿಎಸೈ ಡಿ.ಕೆ.ಬಳಿಗಾರ, ಗ್ರಾಪಂ ಕಾರ್ಯದರ್ಶಿ ವೀರಣ್ಣ ತಳವಾರ, ಗ್ರಾಮ ಲೆಕ್ಕಾಧಿಕಾರಿಗಳಾದ ಜಾಫರಸಾಬ ತಹಶೀಲ್ದಾರ, ಶಬ್ಬೀರ ಬಾಗೇವಾಡಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.