ಕೋವಿಡ್ ತಡೆಗೆ ವಿಶೇಷ ಕಣ್ಗಾವಲು ಕಾರ್ಯಬದ್ದ ಯೋಜನೆಗೆ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ

????????????????????????????????????

ಚಾಮರಾಜನಗರ, ನ.12- ಪ್ರಸ್ತುತ ಆರಂಭವಾಗಿರುವ ಚಳಿಗಾಲದ ಸಂದರ್ಭದಲ್ಲಿಯೂ ವಿಶೇಷ ಕಣ್ಗಾವಲು ಹಾಗೂ ಕಾರ್ಯ ಬದ್ದ ಯೋಜನೆ ಮೂಲಕ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಅನುಷ್ಠಾನಗೊಳಿಸಿ ಜಿಲ್ಲೆಯನ್ನು ಕೋವಿಡ್ ಮುಕ್ತಗೊಳಿಸಲು ಅಧಿಕಾರಿಗಳು ಕಾರ್ಯನಿರತರಾಗುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಚಳಿಗಾಲ ಅವಧಿಯಲ್ಲಿ ಕೋವಿಡ್-19 ಹರಡುವಿಕೆ ತಡೆಯುವ ಕುರಿತು ಆರೋಗ್ಯ ಇಲಾಖೆ ಹಾಗೂ ಕೋವಿಡ್ ಸಂಬಂಧ ನಿಯೋಜನೆಗೊಂಡಿರುವ ನೋಡೆಲ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತಾಡಿದರು.
ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳನ್ನು ಬೇಸಿಗೆ ಹಾಗೂ ಮಳೆಗಾಲ ಅವಧಿಯಲ್ಲಿ ಯಶಸ್ವಿಯಾಗಿ ನಿಭಾಯಿಸಿ ನಿಯಂತ್ರಣಕ್ಕೆ ತರಲಾಗಿದೆ. ಈಗ ಆರಂಭವಾಗಿರುವ ಚಳಿಗಾಲ ವೇಳೆಯೂ ಕೋವಿಡ್ ಪ್ರಕರಣಗಳು ಉಲ್ಬಣವಾಗದಂತೆ ಪೂರ್ವ ಸಿದ್ದತಾ ಯೋಜನೆಗಳನ್ನು ವ್ಯಾಪಕವಾಗಿ ಜಾರಿಗೊಳಿಸಿ ಸಂಪೂರ್ಣವಾಗಿ ತಹಬದಿಗೆ ತರಬೇಕಿದೆ. ಕೋವಿಡ್ ತಡೆಗೆ ರೂಪಿಸಲಾಗಿರುವ ಕಾರ್ಯ ರೂಪುರೇಷೆಗಳನ್ನು ಬದ್ದತೆಯಿಂದ ಅಧಿಕಾರಿಗಳು ಪರಿಣಾಮಕಾರಿ ಅನುಷ್ಠಾನಕ್ಕೆ ಮುಂದಾಗಬೇಕೆಂದು ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು.
ಕೋವಿಡ್ ಪ್ರಕರಣಗಳ ಸಂಖ್ಯೆ ಜಿಲ್ಲೆಯಲ್ಲಿ ದಿನೇ ದಿನೇ ಇಳಿಮುಖವಾಗುತ್ತಿದೆ ಎಂಬ ಅತಿ ಆತ್ಮವಿಶ್ವಾಸದಿಂದ ಯಾರೂ ನಿರ್ಲಕ್ಷ್ಯ ವಹಿಸಬಾರದು. ನಿಗಾ ಹಾಗೂ ನಿಯಂತ್ರಣ ವ್ಯವಸ್ಥೆ ನಿರಂತರವಾಗಿ ಮುಂದುವರೆಸಬೇಕು. ಮುಂದಿನ 3 ತಿಂಗಳ ಕಾಲ ಚಳಿಗಾಲ ಬಾಧಿಸುವುದರಿಂದ ಈ ಸಂದರ್ಭದಲ್ಲಿ ಕಾಣಿಸಿಕೊಳ್ಳಬಹುದಾದ ಅನಾರೋಗ್ಯ ತೊಂದರೆಗಳನ್ನು ಪರಿಹರಿಸಲು ಸನ್ನದ್ದರಾಗಿರಬೇಕು ಎಂದರು.
ಜಿಲ್ಲೆಯಲ್ಲಿ ಆರೋಗ್ಯ ಕಾಳಜಿಗಾಗಿ ವಿಶೇಷ ವರ್ಗದವರೆಂದು ಗುರುತಿಸಲಾಗಿರುವ ವಯೋವೃದ್ದರು, ಮಧುಮೇಹ, ರಕ್ತದೊತ್ತಡ, ಅಸ್ತಮಾ, ಕ್ಯಾನ್ಸರ್, ಹೆಚ್.ಐ.ವಿ ಸೇರಿದಂತೆ ಇತರೆ ಕಾಯಿಲೆಗಳಿಂದ ಬಳಲುತ್ತಿರುವ 30 ಸಾವಿರಕ್ಕೂ ಹೆಚ್ಚು ಜನರನ್ನು ಸಮೀಕ್ಷೆ ಮೂಲಕ ಗುರುತಿಸಲಾಗಿದೆ. ಈ ಪೈಕಿ ಬಹುತೇಕ ಜನರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಬಾಕಿ ಉಳಿದಿರುವವರಿಗೂ ವಿಶೇಷ ವರ್ಗದ ಆರೋಗ್ಯ ಕಾಳಜಿ ಜನರಿಗೆ ಕೋವಿಡ್ ಪರೀಕ್ಷೆ ನಡೆಸುವ ಮೂಲಕ ಯಾವುದೇ ಸಮಸ್ಯೆ ಉಂಟಾಗದಂತೆ ಮುಂಜಾಗ್ರತೆ ವಹಿಸುವ ಮೂಲಕ ಕೋವಿಡ್ ಅನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲು ಸಾಧ್ಯವಾಗಲಿದೆ ಎಂದರು.
ಚಳಿಗಾಲ ಸಂದರ್ಭದಲ್ಲಿ ಹೆಚ್ಚು ಅನಾರೋಗ್ಯಕ್ಕೆ ಒಳಗಾಗಬಹುದಾದ ಜನರನ್ನು ಗುರುತಿಸಿ ಅವರ ಆರೋಗ್ಯ ಕಾಳಜಿಗೆ ವಿಶೇಷ ಆಸ್ಥೆ ವಹಿಸಬೇಕು. 15 ದಿನಗಳಿಗೊಮ್ಮೆ ಪರೀಕ್ಷೆ ನಡೆಸಿ ಎಲ್ಲರ ಆರೋಗ್ಯದ ಬಗ್ಗೆ ಖಾತರಿಪಡಿಸಿಕೊಳ್ಳಬೇಕು. ಯಾವುದೇ ರೋಗ ಲಕ್ಷಣಗಳು ಕಂಡು ಬಂದರೂ ಕೂಡಲೇ ಚಿಕಿತ್ಸೆ ಕ್ರಮಗಳಿಗೆ ಒಳಪಡಿಸಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಈಗಾಗಲೇ ಕೋವಿಡ್ ಪರೀಕ್ಷೆ ಸಂಖ್ಯೆಯನ್ನು ಹೆಚ್ಚಳ ಮಾಡಲಾಗಿದೆ. ಪರಿಷ್ಕøತ ಗುರಿ ಪ್ರಕಾರ ಪ್ರತೀ ದಿನಕ್ಕೆ 1.500 ಪರೀಕ್ಷೆಯನ್ನು ಮಾಡಬೇಕಿದೆ. ರಜಾ ದಿನಗಳಲ್ಲಿಯೂ ಸಹ ಕಡ್ಡಾಯವಾಗಿ ಗುರಿ ಅನುಸಾರ ಪರೀಕ್ಷೆ ನಡೆಸಬೇಕು. ಎಲ್ಲಾ ಬಗೆಯ ಆಸ್ಪತ್ರೆಯ ಹೊರರೋಗಿ ವಿಭಾಗಗಳಲ್ಲಿಯೂ ಕೋವಿಡ್ ತಪಾಸಣೆ ಕಡ್ಡಾಯಗೊಳಿಸಲು ವೈದ್ಯ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಕೋವಿಡ್ ಪರೀಕ್ಷೆಗಳನ್ನು ಕೃಷಿ ಉತ್ಪನ್ನ ಮಾರುಕಟ್ಟೆ, ರೇಷ್ಮೆಗೂಡಿನ ಮಾರುಕಟ್ಟೆ, ನಗರ ಪಟ್ಟಣಗಳ ಮಾರುಕಟ್ಟೆಯಂತಹ ಹೆಚ್ಚು ಜನ ಸಂದಣಿ ಸ್ಥಳಗಳಲ್ಲಿಯೂ ಕೈಗೊಳ್ಳಲು ಸಂಚಾರಿ ಅಥವಾ ಇತರೆ ಯೂನಿಟ್ ಅನ್ನು ಬಳಸಿಕೊಳ್ಳÀಬೇಕು. ವರ್ತಕರು, ವ್ಯಾಪಾರಿಗಳ ಸಹಕಾರ ಪಡೆಯಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪರೀಕ್ಷೆ ಸಂಖ್ಯೆಯನ್ನು ಹೆಚ್ಚಳ ಮಾಡಬೇಕೆಂದು ಜಿಲ್ಲಾಧಿಕಾರಿಯವರು ಸಲಹೆ ಮಾಡಿದರು.
ಹಂತ ಹಂತವಾಗಿ ತಾಲ್ಲೂಕುಗಳು ಕೋವಿಡ್ ಮುಕ್ತವಾಗಬೇಕು. ಬಳಿಕ ಇಡೀ ಚಾಮರಾಜನಗರ ಜಿಲ್ಲೆ ಕೋವಿಡ್ ಮುಕ್ತವಾಗಿ ಘೋಷಣೆಯಾಗಬೇಕಿದೆ, ಜನರಿಗೆ ಕೋವಿಡ್ ನಿಯಂತ್ರಣಕ್ಕಾಗಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕಿದೆ. ಗ್ರಾಮ ಪಂಚಾಯಿತಿ, ನಗರ ಪ್ರದೇಶಗಳ ವಾರ್ಡ್ ಮಟ್ಟದ ಕಾರ್ಯಪಡೆಯ ನೆರವು ಪಡೆಯಬೇಕು. ಮಾಸ್ಕ್ ಧರಿಸದೆ ನಿರ್ಲಕ್ಷ್ಯ ವಹಿಸುವವರ ವಿರುದ್ದ ದಂಡ ವಿಧಿಸುವ ಕಾರ್ಯವೂ ನಗರಸಭೆ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಕ್ರಿಯವಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರು ಕಟ್ಟು ನಿಟ್ಟಿನ ಸೂಚನೆ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣವರ್, ಉಪವಿಭಾಗಾಧಿಕಾರಿ ಡಾ. ಗಿರೀಶ್ ದಿಲೀಪ್ ಬಡೋಲೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಸಿ. ರವಿ, ಜಿಲ್ಲಾ ಸರ್ವೆಲನ್ಸ್ ಅಧಿಕಾರಿ ಡಾ. ನಾಗರಾಜು, ಜಿಲ್ಲಾ ಸರ್ಜನ್ ಡಾ.ಮುರಳೀಕೃಷ್ಣ, ವೈದ್ಯಕೀಯ ತಜ್ಞರಾದ ಡಾ. ರಮೇಶ್, ಡಾ. ಮಹೇಶ್, ಡಾ. ಕಾಂತರಾಜು, ಲಸಿಕಾ ಅಧಿಕಾರಿ ಡಾ.ವಿಶ್ವೇಶ್ವರಯ್ಯ, ನೋಡೆಲ್ ಅಧಿಕಾರಿಗಳಾದ ಆಹಾರ ಇಲಾಖೆಯ ಉಪನಿರ್ದೇಶಕ ಸಿ.ಎನ್. ರುದ್ರಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ.ಬಸವರಾಜು, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರೇವಣ್ಣ, ಸೇರಿದಂತೆ ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.