ಕೋವಿಡ್ ತಡೆಗೆ ಮಾರ್ಗಸೂಚಿ ಪಾಲಿಸಿ : ಲಿಂಬಾವಳಿ

ಕೆ.ಆರ್.ಪುರ,ಏ. ೨೮- ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೋವಿಡ್ ಪರಿಸ್ಥಿತಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.

ಮಾರತ್ತಹಳ್ಳಿ ಎಸ್.ಬಿ.ಆರ್ ಕಲ್ಯಾಣ ಮಂಟಪದಲ್ಲಿ ಕೋವಿಡ್ -೧೯ ನಿಯಂತ್ರಣ ಕ್ರಮಗಳ ಪರಿಶೀಲನೆ ಕುರಿತು ಮಹದೇವಪುರ ವಿಧಾನಸಭಾ ಕ್ಷೇತ್ರದ ಆರೋಗ್ಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಬಿಬಿಎಂಪಿ ಮತ್ತು ಗ್ರಾಮಾಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.

ಕೋವಿಡ್ ವಾರಿಯರ್ಸ್ ಗಳು ಕರ್ತವ್ಯ ನಿರ್ವಹಿಸುವಾಗ ತಮ್ಮ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು, ತಮ್ಮ ಆರೋಗ್ಯ ಕಾಪಾಡಿಕೊಂಡು ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಇದು ಒಂದು ಸಂಕಷ್ಟದ ಸಮಯ, ಈ ಸಮಯದಲ್ಲಿ ಅಧಿಕಾರಿಗಳು ಬದ್ದತೆಯಿಂದ ಮತ್ತು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಬೇಕು, ಜನರು ಸಹ ಅಧಿಕಾರಿಗಳೊಂದಿಗೆ ಸಹಕರಿಸಿ ಕೋವಿಡ್ ಲಸಿಕೆ ಪಡೆದು, ಸರ್ಕಾರ ರೂಪಿಸಿರುವ ಎಲ್ಲಾ ನಿಯಮಗಳನ್ನು ಪಾಲಿಸುವ ಮೂಲಕ ಕೋವಿಡ್ ತಡೆಯಲು ಕೈಜೋಡಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಂಟಿ ಆಯುಕ್ತ ವೆಂಕಟಚಲಪತಿ,ಡಿಸಿಪಿ ದೇವರಾಜ್,ನಗರ ಮಂಡಳ ಅಧ್ಯಕ್ಷ ಮನೋಹರರೆಡ್ಡಿ ಮತ್ತಿತರರು ಇದ್ದರು.

ಸುದ್ದಿಚಿತ್ರ:ಮಹದೇವಪುರ ಕ್ಷೇತ್ರದ ಮಾರತ್ತಹಳ್ಳಿಯ ಎಸ್.ಬಿ.ಆರ್ ಕಲ್ಯಾಣ ಮಂಟಪದಲ್ಲಿ ಕರೋನ ನಿಯಂತ್ರಣ ಕುರಿತು ಅಧಿಕಾರಿಗಳ ಸಭೆ ನಡೆಸಲಾಯಿತು.