ಕೋವಿಡ್ ತಡೆಗೆ ಕಠಿಣ ನಿರ್ಬಂಧ

ಬೆಂಗಳೂರು, ಏ.೩-ರಾಜ್ಯದಲ್ಲಿ ಕೋವಿಡ್-೧೯ ಸೋಂಕಿನ ಎರಡನೇ ಅಲೆ ತೀವ್ರ ಸ್ವರೂಪದಲ್ಲಿ ಹರಡುತ್ತಿದ್ದು, ಸೋಂಕು ತಡೆಗಟ್ಟಲು ರಾಜಧಾನಿ ಬೆಂಗಳೂರು ಸೇರಿದಂತೆ, ಎಂಟು ಜಿಲ್ಲೆಗಳಲ್ಲಿ ಕಠಿಣ ನಿರ್ಬಂಧ ಹೇರಲಾಗಿದ್ದು, ಈ ನಿಯಮಾವಳಿಗಳು ಜಾರಿಗೆ ತಂದಿವೆ.
ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಮೈಸೂರು, ದಕ್ಷಿಣ ಕನ್ನಡ, ಉಡುಪಿ, ಕಲಬುರ್ಗಿ, ಬೀದರ್ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಸಿನಿಮಾ ಹಾಲ್‌ಗಳಲ್ಲಿ ಪರ್ಯಾಯ ಆಸನಗಳಲ್ಲಿ ಗರಿಷ್ಠ ಶೇ. ೫೦ ರಷ್ಟು ವೀಕ್ಷಕರಿಗೆ ಮಾತ್ರ ಅವಕಾಶ. ಪಬ್, ಬಾರ್, ಕ್ಲಬ್, ರೆಸ್ಟೋರೆಂಟ್‌ಗಳಲ್ಲಿ ಗರಿಷ್ಠ ಗ್ರಾಹಕರ ಸಂಖ್ಯೆ ಶೇ.೫೦ ರಷ್ಟು ಜನರಿಗೆ ಮಾತ್ರ ಅವಕಾಶ ಕಲ್ಪಿಸಿಲ್ಲ.
ಅದೇ ರೀತಿ, ಖಾಸಗಿ ಆಸ್ಪತ್ರೆಗಳಲ್ಲಿ ಶೇ.೨೦ ರಷ್ಟು ಬೆಡ್ ನಿಗಧಿ ಮಾಡಲು ನಿರ್ಧರಿಸಲಾಗಿದೆ. ಮಾಸ್ಕ್ ಧರಿಸುವುದು ಕಡ್ಡಾಯ, ವ್ಯಕ್ತಿಗತ ಅಂತರ ಕಾಯ್ದುಕೊಳ್ಳಬೇಕು. ಮಾರ್ಗಸೂಚಿ ಪಾಲನೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿದ್ದು, ಲಸಿಕೆ ಹೆಚ್ಚಿಸಲು ಸೂಚನೆ ನೀಡಿದ್ದು, ಹೆಚ್ಚು ಜನ ಇರುವ ಕಡೆ ಲಸಿಕೆ ಹಾಕಲು ಕೈಗೊಳ್ಳಲು ಮುಂದಾಗಿದೆ.
ಜಿಮ್, ಈಜುಕೊಳ ಬಂದ್:
ರಾಜ್ಯಾದ್ಯಂತ ಧಾರ್ಮಿಕ ಸ್ಥಳಗಳಲ್ಲಿ ವೈಯಕ್ತಿಕವಾಗಿ ಪ್ರಾರ್ಥನೆ ಮಾಡಲು ಅವಕಾಶವಿದೆ. ಆದರೆ, ಗುಂಪು ಸೇರುವ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ. ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್‌ಗಳಲ್ಲಿ ಸಾಮಾನ್ಯವಾಗಿ ನಿವಾಸಿಗಳು, ಜನರು ಸೇರುವ ಸ್ಥಳಗಳಾದ ಪಾರ್ಟಿ ಹಾಲ್‌ಗಳು, ಕ್ಲಬ್‌ಗಳು, ಈಜುಕೊಳಗಳು, ಎಲ್ಲಾ ಜಿಮ್‌ಗಳನ್ನು ಬಂದ್ ಮಾಡಲಾಗಿದೆ.
ಧರಣಿ, ಪ್ರತಿಭಟನೆ ನಿಷೇಧ:
ಯಾವುದೇ ರೀತಿಯ ಪ್ರತಿಭಟನೆ, ರ್‍ಯಾಲಿ, ಮುಷ್ಕರ, ಧರಣಿ, ಸತ್ಯಾಗ್ರಹಗಳನ್ನು ನಿಷೇಧಿಸಲಾಗಿದೆ. ಸಾರ್ವಜನಿಕ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ನಿಗದಿಪಡಿಸಿದ ಆಸನದ ವ್ಯವಸ್ಥೆಯನ್ನು ಮೀರುವಂತಿಲ್ಲ. ಕಚೇರಿ ಹಾಗೂ ಇತರೆ ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸುವ ಅಭ್ಯಾಸ, ವ್ಯವಸ್ಥೆಯನ್ನು ಪಾಲಿಸುವುದು.
ಗುಂಪು ಸೇರಲು ಅವಕಾಶವಿಲ್ಲ:
ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಆಚರಣೆಗಳು ಹಾಗೂ ಜಾತ್ರೆ ಮಹೋತ್ಸವಗಳ, ಮೇಳಗಳು, ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ವಿವಿಧ ಸಭೆ,ಸಮಾರಂಭಗಳಲ್ಲಿ ಭಾಗವಹಿಸುವ ಸಂಬಂಧ ಮಾರ್ಚ್ ೧೨ರ ಸುತ್ತೋಲೆ ಮುಂದುವರಿಯಲಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಹಾಗೂ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ನಿಯಮ ಪಾಲನೆಗೆ ಸ್ಥಳೀಯ ಆಡಳಿತ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
ಇನ್ನು, ಶಾಪಿಂಗ್ ಮಾಲ್‌ಗಳು, ಮುಚ್ಚಿದ ಪ್ರದೇಶಗಳಲ್ಲಿರುವ ಮಾರ್ಕೆಟ್‌ಗಳು ಹಾಗೂ ಡಿಪಾರ್ಟ್‌ಮೆಂಟಲ್ ಸ್ಟೋರ್ ಗಳಲ್ಲಿ ಶಿಷ್ಟಾಚಾರದನ್ವಯ ಕೋವಿಡ್ ಮುನ್ನೆಚ್ಚರಿಕೆ ಪಾಲಿಸಬೇಕು. ನಿಯಮ ಉಲ್ಲಂಘಿಸಿದರೆ ಮೇಲ್ಕಂಡ ಸ್ಥಳಗಳನ್ನು ಕೋವಿಡ್ ಪರಿಸ್ಥಿತಿ ಸುಧಾರಿಸುವವರೆಗೂ ಮುಚ್ಚಲಾಗುವುದು ಎಂದು ಸೂಚಿಸಿದ್ದು, ಈ ತಿಂಗಳ ೨೦ರವರೆಗೆ ಕೋವಿಡ್ ಹೊಸ ಮಾರ್ಗಸೂಚಿ ಅನ್ವಯವಾಗಲಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ.ಗಿರಿಧರ ಬಾಬು, ಈ ನಿರ್ಬಂಧಗಳನ್ನು ಹೇರುವ ಹಿಂದಿನ ಮುಖ್ಯ ಉದ್ದೇಶವೆಂದರೆ ಸೂಪರ್-ಸ್ಪ್ರೆಡರ್ ಘಟನೆಗಳನ್ನು ತಪ್ಪಿಸುವುದು. ಅಲ್ಲದೆ ಸೋಂಕು ಮುಚ್ಚಿದ ಮತ್ತು ಕಿಕ್ಕಿರಿದ ಸ್ಥಳಗಳಲ್ಲಿ ವೇಗವಾಗಿ ಹರಡುವ ಸಾಧ್ಯತೆಯಿದೆ. ಹಾಗಾಗಿ ಸಾಮಾಜಿಕ ಅಂತರ ಬಹುಮುಖ್ಯ ಎಂದರು.
ಶಾಲೆಗಳ ಸ್ಥಗಿತ
ವಿದ್ಯಾಗಮ ಸೇರಿದಂತೆ ೬ರಿಂದ ೯ನೆ ತರಗತಿ ಶಾಲೆಗಳನ್ನು ಸ್ಥಗಿತಗೊಳಿಸಲಾಗಿದೆ.
೧೦, ೧೧ ಮತ್ತು ೧೨ನೆ ತರಗತಿ ಪ್ರಸ್ತುತ ಇರುವಂತೆಯೇ ಮುಂದುವರಿಯಲಿದ್ದು, ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯವಲ್ಲ.
ಉನ್ನತ ಶಿಕ್ಷಣ ಹಾಗೂ ವೃತ್ತಿಪರ ಕೋರ್ಸ್ ಗಳ ತರಗತಿಗಳಲ್ಲಿ ಮಂಡಳಿಯ, ವಿ.ವಿ.ಗಳ ಪರೀಕ್ಷೆ ಬರೆಯುವ ಹಾಗೂ ವೈದ್ಯಕೀಯ ಶಿಕ್ಷಣದ ತರಗತಿಗಳನ್ನು ಹೊರತುಪಡಿಸಿ, ವಸತಿ ಶಾಲೆಗಳು ಹಾಗೂ ಬೋರ್ಡಿಂಗ್ ಇರುವ ಶಾಲೆಗಳಲ್ಲಿ ೧೦, ೧೧, ೧೨ನೆ ತರಗತಿಯ ಬೋರ್ಡ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಇತರ ಎಲ್ಲ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ.