ಕೋವಿಡ್ ತಡೆಗೆ ಅಧಿಕಾರಿಗಳು ಶ್ರಮಿಸಬೇಕಿದೆ- ಬಳ್ಳಾರಿ


ಬ್ಯಾಡಗಿ,ಎ.22: ತಾಲೂಕಿನಾದ್ಯಂತ ಕೋವಿಡ -19 ಎರಡನೇ ಹಂತದ ಸೋಂಕು ಹರಡದಂತೆ ತಾಲೂಕ ಮಟ್ಟದ ಅಧಿಕಾರಿಗಳ ಕಾರ್ಯಾಪಡೆ ನಿರಂತರವಾಗಿ ಶ್ರಮಿಸಬೇಕಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರು ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಹೊರಡಿಸಿರುವ ಎಲ್ಲ ನಿಯಮಾವಳಿಗಳು ಕಡ್ಡಾಯವಾಗಿ ಜಾರಿಗೊಳಿಸಿ ಲಸಿಕೆ ನೀಡುವ ಪ್ರಮಾಣವನ್ನು ಹೆಚ್ಚಿಸಲು ಕ್ರಮ ವಹಿಸಬೇಕಾಗಿದೆ. ತಾಲೂಕಿನ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಗಳ ಲಭ್ಯತೆಯಿದ್ದು, ನಾಗರಿಕರು ಸ್ವಯಂಪ್ರೇರಿತರಾಗಿ ಲಸಿಕೆ ಪಡೆಯಲು ಮುಂದಾಗಬೇಕು. ಈಗಾಗಲೇ ಮದುವೆ ಕಾರ್ಯಕ್ರಮ ಹಮ್ಮಿಕೊಂಡವರು ಕಡ್ಡಾಯವಾಗಿ ತಾಲೂಕಾಡಳಿತದಿಂದ ಪರವಾನಿಗೆ ಪಡೆದು 50 ಜನರು ಮೀರದಂತೆ ಸರ್ಕಾರದ ನಿಯಮದ ಪ್ರಕಾರ ಕಾರ್ಯಕ್ರಮ ನಡೆಸಬೇಕು. ಗ್ರಾಮ ಪಂಚಾಯತ್ ಮಟ್ಟದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಯಬೇಕು. ಅಲ್ಲದೆ ನೈರ್ಮಲ್ಯತೆಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕಲ್ಲದೇ ಕಡ್ಡಾಯವಾಗಿ ಎಲ್ಲರೂ ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು.
ಕೋವಿಡ್ ಸೊಂಕಿತರ ಪತ್ತೆಗಾಗಿ ಸರ್ವೆ ಕಾರ್ಯ ತ್ವರಿತಗತಿಯಲ್ಲಿ ನಡೆಸಬೇಕು. ಸರ್ಕಾರ ರಾತ್ರಿ ಕಪ್ರ್ಯೂ ಜಾರಿಗೊಳಿಸಿದ್ದು, ಸಾರ್ವಜನಿಕರು ಸಹಕಾರ ನೀಡುವ ಮೂಲಕ ಅನಗತ್ಯವಾಗಿ ಹೊರಗಡೆ ಓಡಾಡಬಾರದು. ತಾಲೂಕಿನಲ್ಲಿ ಕೋವಿಡ್ ವಾರಿಯಾರ್ಸ್ ಧೃತಿಗೆಡದೆ ಮತ್ತೊಮ್ಮೆ ಕರ್ತವ್ಯ ನಿಷ್ಠೆ ಮೆರೆಯಬೇಕಾದ ಸಂದರ್ಭ ಬಂದೊದಗಿದೆ. ಹಾಗಾಗಿ ನಾವೆಲ್ಲರೂ ಕೋವಿಡ್ ಮಹಾಮಾರಿಯನ್ನು ಹೋಗಲಾಡಿಸಲು ಸಮನ್ವಯತೆಯಿಂದ ಕೆಲಸ ನಿರ್ವಹಿಸಬೇಕಾಗಿದೆ ಎಂದು ಹೇಳಿದರು.
ಸಭೆಯಲ್ಲಿ ತಹಶೀಲ್ದಾರ ರವಿಕುಮಾರ ಕೊರವರ, ಟಿಇಓ ಜಯಕುಮಾರ, ಸಿಪಿಐ ಬಸವರಾಜ, ತಾಲೂಕಾ ಆರೋಗ್ಯಾಧಿಕಾರಿ ಸುಹಿಲ್ ಹರವಿ, ಡಾ.ಪುಟ್ಟರಾಜ, ಎಪಿಎಂಸಿ. ಅಧ್ಯಕ್ಷ ವೀರಭದ್ರಪ್ಪ ಗೊಡಚಿ, ಸುರೇಶ ಅಸಾದಿ, ಸುರೇಶ ಯತ್ನಳ್ಳಿ ತಾಲೂಕಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.