ಕೋವಿಡ್ ಟೆಸ್ಟ್-ಶಾಲೆಗಳಿಗೆ ಸಂಚಾರ ವಾಹನ

ಕೋಲಾರ,ಜ.೧೦: ನಗರದ ಎಲ್ಲಾ ಶಾಲೆಗಳ ಶಿಕ್ಷಕರು ಕೋವಿಡ್ ಟೆಸ್ಟ್‌ಗೆ ಒಳಗಾಗಲು ಅನುವಾಗುವಂತೆ ಇಂದು ಕೋವಿಡ್ ಪರೀಕ್ಷಾ ತಜ್ಞರೊಂದಿಗೆ ಪ್ರತಿ ಶಾಲೆಗೂ ಸಂಚಾರಿ ವಾಹನ ವ್ಯವಸ್ಥೆ ಮಾಡುತ್ತಿರುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ತಿಳಿಸಿದರು.
ನಗರದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಇಲಾಖೆಯ ಎಲ್ಲಾ ಅಧಿಕಾರಿಗಳು,ಸಿಬ್ಬಂದಿ, ಚಾಲಕರೂ ಸೇರಿದಂತೆ ಸ್ವತಃ ಅವರೂ ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಮಾತನಾಡುತ್ತಿದ್ದರು.ಪ್ರತಿ ಶಾಲೆಯ ಶಿಕ್ಷಕರು,ಸಿಬ್ಬಂದಿ ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಗಾಗಿ ನೆಗೆಟೀವ್ ಪ್ರಮಾಣ ಪತ್ರ ಹೊಂದಿರಬೇಕು, ಇಲ್ಲವಾದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಮಕ್ಕಳ ಆರೋಗ್ಯ ರಕ್ಷಣೆಯ ಹೊಣೆ ಇಲಾಖೆ ಮತ್ತು ಶಿಕ್ಷಕರದ್ದಾಗಿದೆ, ಶಾಲೆಯಲ್ಲಿ ಯಾವುದೇ ಮಗುವಿಗೆ ನೆಗಡಿ,ಜ್ವರದಂತಹ ಕೋವಿಡ್ ಲಕ್ಷಣಗಳಿದ್ದರೆ ಕೂಡಲೇ ಆ ಮಗುವನ್ನು ಕೋವಿಡ್ ಪರೀಕ್ಷೆಗೆ ಒಳಪಡಲು ತಿಳಿಸಿ ಮನೆಗೆ ಕಳುಹಿಸಿ ಎಂದು ಸೂಚಿಸಿದರು.
ಶಾಲೆಯ ಆವರಣದಲ್ಲಿ ಸ್ವಚ್ಚತೆ ಕಾಪಾಡಿ ಎಂದು ತಾಕೀತು ಮಾಡಿದ ಅವರು, ಮಕ್ಕಳಿಗೆ ಕೈತೊಳೆಯಲು ಸೋಪು,ಲಿಕ್ವಿಡ್ ಒದಗಿಸಿ, ಶೌಚಾಲಯದಲ್ಲಿ ಯಥೇಚ್ಚವಾಗಿ ನೀರು ಇರುವಂತೆ ನೋಡಿಕೊಳ್ಳಿ ಎಂದು ತಿಳಿಸಿದರು.
ಕೋವಿಡ್ ಸೋಂಕು ಹರಡುವುದನ್ನು ತಡೆಯಲು ಮತ್ತು ಪೋಷಕರಲ್ಲಿ ಶಾಲೆಗೆ ಮಕ್ಕಳನ್ನು ಕಳುಹಿಸಲು ವಿಶ್ವಾಸ ಗಟ್ಟಿಗೊಳಿಸಲು ಕೋವಿಡ್ ಟೆಸ್ಟ್ ಕಡ್ಡಾಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಎ.ಬಿ.ರಾಮಕೃಷ್ಣ,ಬಿಆರ್‍ಪಿ ಸಿ.ಎಸ್.ನಾಗರಾಜ್, ಬಿಐಆರ್‍ಪಿ ವೆಂಕಟರಮಣಪ್ಪ, ಇಸಿಒ ಆರ್.ಶ್ರೀನಿವಾಸನ್, ಸಿಆರ್‍ಪಿಗಳಾದ ಗೋವಿಂದು, ಸೌಮ್ಯಲತಾ,ರೇಣುಕಮ್ಮ,ಮದುಸೂಧನ್, ವೆಂಕಟರಮಣಪ್ಪ, ಚಾಲಕ ಆನಂದ್ ಮತ್ತಿತರರು ಹಾಜರಿದ್ದರು.