ಕೋವಿಡ್ ಜಾಗೃತಿ ಅಭಿಯಾನ- ಜನ ಆಂದೋಲನಕ್ಕೆ ಚಾಲನೆ

ಧಾರವಾಡ ನ.13-ರಾಷ್ಟ್ರೀಯ ಕೃಷಿ ಬ್ಯಾಂಕ್ (ನಬಾರ್ಡ್) ಮತ್ತು ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿಯ ನಿರ್ದೇಶನದಂತೆ ಕೋವಿಡ್-19 ರ ಸೋಂಕು ನಿರ್ವಹಣೆಗೆ ಸಂಬಂಧಿಸಿದ ಸಾರ್ವಜನಿಕ ಜಾಗೃತಿ ಅಭಿಯಾನಕ್ಕೆ (ಜನ ಆಂದೋಲನ) ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷರಾದ ಪಿ ಗೋಪಿ ಕೃಷ್ಣ ಧಾರವಾಡದಲ್ಲಿ ಚಾಲನೆ ನೀಡಿದರು. ಕಡ್ಡಾಯವಾಗಿ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಿಕೆ ಮತ್ತು ಕೈ ನೈರ್ಮಲ್ಯವನ್ನು ಕಾಪಾಡಿಕೊಳ್ಳುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.
ಧಾರವಾಡದ ಬ್ಯಾಂಕಿನ ಪ್ರಧಾನ ಕಛೇರಿ ಸಂಕೀರ್ಣದಲ್ಲಿ ಜಾಗೃತಿ ಪ್ರಮಾಣವಚನ ಬೋಧಿಸಿದ ಅವರು ಕೋವಿಡ್ ಮಹಾ ಮಾರಿಯ ಬಗ್ಗೆ ಗ್ರಾಹಕರಲ್ಲಿ ಅದರಲ್ಲೂ ಗ್ರಾಮೀಣ ಜನರಲ್ಲಿ ಜಾಗೃತಿ ಮೂಡಿಸಲು ಬ್ಯಾಂಕಿನ ಎಲ್ಲ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಸಾಂಕ್ರಾಮಿಕ ರೋಗ ಪ್ರಸರಣದ ತಡೆಗೆ ಬ್ಯಾಂಕು ತನ್ನ ಶಾಖಾ ಪ್ರಾಂಗಣ / ಎಟಿಎಂ ಆವರಣದಲ್ಲಿ ಹೆಚ್ಚಿನ ಕಾಳಜಿ ವಹಿಸಿದೆ. ದ್ರವ ಸಾಬೂನುಗಳು ಮತ್ತು ಸೆನ್ಸಿಟೈಜರ್‍ಗಳನ್ನು ಎಲ್ಲಾ ಶಾಖೆಗಳಲ್ಲಿ ಮತ್ತು ಎಟಿಎಂ ಪಾಯಿಂಟ್‍ಗಳಲ್ಲಿ ಇರಿಸಲಾಗಿದೆ. ಶಾಖೆಯ ಆವರಣವನ್ನು ಪ್ರವೇಶಿಸುವ ಮುನ್ನ ಮಾಸ್ಕ್ ಧರಿಸಲು ಗ್ರಾಹಕರಿಗೆ ಸೂಚಿಸಲಾಗಿದೆ ಎಂದರು.
ಇಂತಹ ತುರ್ತು ಸ್ಥಿತಿಯಲ್ಲೂ ಬ್ಯಾಂಕಿನ ಸಿಬ್ಬಂದಿ ಗ್ರಾಹಕರಿಗೆ ಅನಿರ್ಬಂಧಿತ ಸೇವೆ ನೀಡುವ ಮೂಲಕ ಶ್ಲಾಘನೀಯ ಕಾರ್ಯ ಮಾಡಿದ್ದಾರೆ ಎಂದ ಅವರು ಕೋವಿಡ್ ನಿರ್ವಹಣೆಗೆ ಸಂಬಂಧಿಸಿ ಪ್ರಧಾನಮಂತ್ರಿ ನಿಧಿಗೆ 50 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ರೋಟರಿ ಕ್ಲಬ್ ಮೂಲಕ ಸಿವಿಲ್ ಹಾಸ್ಪಿಟಲ್ ಧಾರವಾಡದಲ್ಲಿ ವೆಂಟಿಲೇಟರ್ ಮತ್ತು ಇತರ ಅಗತ್ಯ ಸಲಕರಣೆಗಳೊಂದಿಗೆ ಐಸಿಯು ಹಾಸಿಗೆಗಳನ್ನು ನಿರ್ಮಿಸಲು ಬ್ಯಾಂಕು ರೂ .7.50 ಲಕ್ಷಗಳನ್ನು ದೇಣಿಗೆ ನೀಡಿದ್ದು ಆ ಸೌಲಭ್ಯ ಶೀಘ್ರದಲ್ಲೇ ಲೋಕಾರ್ಪಣಗುಳ್ಳುವುದು ಎಂದು ಪಿ ಗೋಪಿ ಕೃಷ್ಣ ಹೇಳಿದರು.ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಮತ್ತು ಮೆಲಿಂದ ಮೇಲೆ ಸಾಬೂನು ಅಥವಾ ಸೆನ್ಸಿಟೈಜರ್ ಮೂಲಕ ಕೈ ಸ್ವಚ್ಛವಾಗಿಟ್ಟುಕೊಳ್ಳುವಿಕೆ ಕೊರೋನಾ ತಡೆಗಟ್ಟುವಲ್ಲಿ ಈ ಮೂರು ಮಹಾ ಮಂತ್ರಗಳಾಗಿದ್ದು ಅವು ನಮ್ಮನ್ನು ಲಸಿಕೆ ಲಭ್ಯವಾಗುವವರೆಗೆ ಕಾಪಾಡಬಲ್ಲವು ಎಂದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಮಹಾ ಪ್ರಬಂಧಕ ಬಿ ಸಿ ರವಿಚಂದ್ರ, ಪಿ ನಾಗೇಶ್ವರ ರಾವ್, ಚಂದ್ರ ಶೇಖರ್ ಮೊರೊ ಮತ್ತು ಇತರರು ಉಪಸ್ಥಿತರಿದ್ದರು.