ಕೋವಿಡ್: ಜನರ ರಕ್ಷಣೆಯಲ್ಲಿ ಸಹಕಾರ ಕ್ಷೇತ್ರದ ಪಾತ್ರ ಮಹತ್ತರ

ತುಮಕೂರು, ನ. ೧೭- ಕೊರೊನಾ ಸೋಂಕಿನಿಂದ ಜನತೆಯನ್ನು ರಕ್ಷಿಸುವಲ್ಲಿ ಸಹಕಾರ ಕ್ಷೇತ್ರ ಮಹತ್ತರ ಪಾತ್ರ ನಿರ್ವಹಿಸಿದೆ ಎಂದು ರಾಜ್ಯ ಸಹಕಾರ ಮಹಾಮಂಡಳದ ನಿಕಟಪೂರ್ವ ಅಧ್ಯಕ್ಷ ಎನ್. ಗಂಗಣ್ಣ ಹೇಳಿದರು.
ನಗರದ ಜಿಲ್ಲಾ ಸಹಕಾರ ಯೂನಿಯನ್ ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಜಿಲ್ಲಾ ಸಹಕಾರ ಯೂನಿಯನ್ ನಿ., ತುಮಕೂರು ಡಿ.ಸಿ.ಸಿ. ಬ್ಯಾಂಕ್ ನಿ., ತುಮಕೂರು ಸಹಕಾರಿ ಹಾಲು ಒಕ್ಕೂಟ ನಿ., ತುಮಕೂರು ಸಹಕಾರ ಇಲಾಖೆ ತುಮಕೂರು, ಟಿ.ಎ.ಪಿ.ಸಿ.ಎಂ.ಎಸ್.ಲಿ.,ತುಮಕೂರು, ಸ್ವಾಮಿ ವಿವೇಕಾನಂದ ಸಹಕಾರ ಸಂಘ ನಿ., ತುಮಕೂರು, ತುಮಕೂರು ವಾಲ್ಮೀಕಿ ಸಹಕಾರ ಸಂಘ ನಿ., ತುಮಕೂರು, ಶ್ರೀ ಚಂದ್ರಮೌಳೇಶ್ವರ ಸಹಕಾರ ಸಂಘ ನಿ., ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಕ್ಯಾತ್ಸಂದ್ರ, ಹಾಗೂ ತುಮಕೂರು ತಾಲ್ಲೂಕಿನ ಎಲ್ಲಾ ಸಹಕಾರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ ೬೭ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ?ಕೊರೊನೋತ್ತರ ಸಹಕಾರ ಸಂಸ್ಥೆಗಳ ಜವಾಬ್ದಾರಿ ಮತ್ತು ಪಾತ್ರ? ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ಎಲ್ಲಾ ರೈತರು, ಮಹಿಳೆಯರು ಹಾಗೂ ಯುವಕರು ಸಹಕಾರ ಆಂದೋಲನದಲ್ಲಿ ಭಾಗವಹಿಸಬೇಕು ಎಂಬುದೇ ಈ ಸಹಕಾರಿ ಆಂದೋಲನದ ಪ್ರಮುಖ ಉದ್ದೇಶವಾಗಿದೆ. ಕೋವಿಡ್-೧೯ನಿಂದ ಸಹಕಾರ ಸಂಘಗಳ ಮೇಲೆ ಆರ್ಥಿಕ ಬಿಕ್ಕಟ್ಟ ಉಂಟಾಗಿದ್ದು, ನಷ್ಟದಲ್ಲಿರುವವರಿಗೆ ಹಾಗೂ ನೊಂದವರಿಗೆ ಆರ್ಥಿಕವಾಗಿ ಪ್ರೋತ್ಸಾಹಿಸಿ, ಅವರನ್ನು ಪುನಃ ಸಮಾಜದ ಮುಖ್ಯವಾಹಿನಿಯಲ್ಲಿ ತೊಡಗಿಕೊಳ್ಳುವ ವಾತಾವರಣ ಸಹಕಾರ ಸಂಘಗಳು ನಿರ್ಮಾಣ ಮಾಡಬೇಕಾಗಿದೆ ಎಂದರು.
ಕೋವಿಡ್ ಸಂಕಷ್ಟ ಸಮಯದಲ್ಲಿ ಜಿಲ್ಲೆಯ ಹಿರಿಯ ಸಹಕಾರಿಗಳಾದ ಕೆ.ಎನ್. ರಾಜಣ್ಣ ಹಾಗೂ ರಾಷ್ಟ್ರೀಯ ಕ್ರಿಭ್ಕೋ ನಿರ್ದೇಶಕರಾದ ಆರ್. ರಾಜೇಂದ್ರರವರು ಅನ್ನ ಸಂತರ್ಪಣೆ ಹಾಗೂ ಡಿ.ಸಿ.ಸಿ.ಬ್ಯಾಂಕ್ ವತಿಯಿಂದ ದಿನಗೂಲಿ ಕಾರ್ಮಿಕರು, ರೈತರಿಗೆ ಎಲ್ಲಾ ರೀತಿಯ ಸಾಲಗಳನ್ನು ನೀಡಿ ಕೊರೊನಾದಿಂದ ಬೇಸತ್ತವರಿಗೆ ಆತ್ಮಸೈರ್ಯ ತುಂಬುವಂತಹ ಕೆಲಸ ಮಾಡಿದ್ದಾರೆ ಎಂದ ಅವರು, ಕೊರೊನಾಗೆ ಹೆದರದೆ ಪ್ರಕೃತಿಗೆ ವಿರುದ್ಧವಾಗಿ ನಡೆದುಕೊಳ್ಳದೆ ಪ್ರಕೃತಿಯನ್ನು ಗೌರವಿಸುವಂತೆ ಅವರು ಕರೆ ನೀಡಿದರು.
ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ಯುವಜನತೆಗೆ ಆದ್ಯತೆ ನೀಡುವುದರ ಮೂಲಕ ಸಹಕಾರ ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಕೆ.ಎನ್. ರಾಜಣ್ಣನವರ ಪಾತ್ರ ಬಹು ಮುಖ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ.ಜಿ. ವೆಂಕಟೇಗೌಡ ಮಾತನಾಡಿ, ಸಹಕಾರ ಚಳವಳಿಯು ೧೧೬ ವರ್ಷಗಳಲ್ಲಿ ಬೃಹದಾಕಾರವಾಗಿ ಬೆಳೆದಿದೆ. ಕೊರೊನಾ ಕಾಯಿಲೆಯ ಸಂದರ್ಭದಲ್ಲಿಯೂ ಸಹ ಸಹಕಾರ ಸಂಘಗಳು ರೈತರು, ದುರ್ಬಲರ ಬೆನ್ನೆಲುಬಾಗಿವೆ. ಹಿರಿಯ ಸಹಕಾರಿಗಳಾದ ಕೆ.ಎನ್. ರಾಜಣ್ಣನವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಯುವಜನತೆಗೆ ಈ ಸಹಕಾರಿ ಕ್ಷೇತ್ರದಲ್ಲಿ ತೊಡಗಿಕೊಳ್ಳುವಂತೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಈ ವರ್ಷವು ಸಹ ತುಮಕೂರು ಜಿಲ್ಲೆಯ ಕರ್ನಾಟಕ ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರು ಹಾಗೂ ಡಿ.ಸಿ.ಸಿ.ಬ್ಯಾಂಕಿನ ನಿರ್ದೇಶಕರಾದ ಕೆ. ಷಡಕ್ಷರಿಯವರಿಗೆ ?ಸಹಕಾರ ರತ್ನ ಪ್ರಶಸ್ತಿ? ದೊರೆತಿರುವುದು ಸಂತೋಷದ ವಿಷಯವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಾಲ್ಮೀಕಿ ಸಹಕಾರ ಸಂಘದ ಅಧ್ಯಕ್ಷ ಹಾಗೂ ಮಹಾನಗರಪಾಲಿಕೆ ಸದಸ್ಯರಾದ ಬಿ.ಜಿ. ಕೃಷ್ಣಪ್ಪ ಮಾತನಾಡಿ, ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರದ ಅಭಿವೃದ್ಧಿ ಹೊಂದಲು ಕೆ.ಎನ್. ರಾಜಣ್ಣನವರು ಕಾರಣೀಭೂತರಾಗಿದ್ದಾರೆ. ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳು ಅವರ ಮಾರ್ಗದರ್ಶನದಲ್ಲಿ ಸಹಕಾರ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.
ಡಿಸಿಸಿ ಬ್ಯಾಂಕ್ ಆರ್ಥಿಕ ಸಲಹೆಗಾರರಾದ ಜಂಗಮಪ್ಪ ಮಾತನಾಡಿ, ೧೯೦೫ ರಿಂದ ಇಲ್ಲಿಗೆ ೧೧೬ ವರ್ಷಗಳ ಇತಿಹಾಸವಿದೆ. ಸಹಕಾರ ಕ್ಷೇತ್ರದಲ್ಲಿ ಯುವಜನತೆ ಸಹಕಾರ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಡಿಸಿಸಿ ಬ್ಯಾಂಕ್ ದಿನಗೂಲಿ ಕಾರ್ಮಿಕರು, ರೈತರಿಗೆ ಎಲ್ಲ ರೀತಿಯ ಸಾಲಗಳನ್ನು ನೀಡಿ ಕೊರೊನಾದಿಂದ ಬೇಸತ್ತವರಿಗೆ ಆತ್ಮಸೈರ್ಯ ತುಂಬುವಂತಹ ಕೆಲಸ ನಿರ್ವಹಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ವಿ.ಪಿ. ಕಾಂತರಾಜು, ನಿರ್ದೇಶಕರಾದ ಎಸ್. ರಾಮಚಂದ್ರಯ್ಯ, ಸ್ವಾಮಿ ವಿವೇಕಾನಂದ ಸಹಕಾರ ಸಂಘದ ಅಧ್ಯಕ್ಷ ಪಿ. ಮೂರ್ತಿ, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಜಂಟಿ ನಿರ್ದೇಶಕರಾದ ಎಂ. ರಾಮಯ್ಯ, ಮಸ್ಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆಂಪಹನುಮಯ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಂತೇಶ ಹಿರೇಮಠ, ವ್ಯವಸ್ಥಾಪಕ ಎಂ.ಎಲ್. ದಯಾನಂದ ಮತ್ತಿತರರು ಉಪಸ್ಥಿತರಿದ್ದರು.