ಕೋವಿಡ್ ಜತೆಗೆ ಮಳೆಗಾಲ ನಿರ್ವಹಣೆಗೂ ಸಿದ್ಧರಾಗಿ:ರಾಕೇಶ್ ಸಿಂಗ್

ಬೆಂಗಳೂರು, ಏ.3-ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ನಿಂಯತ್ರಣ ಮಾಡುವ‌ ಜತೆಗೆ ಇನ್ನೆರಡು ತಿಂಗಳಲ್ಲಿ ಮಳೆಗಾಲ ಪ್ರಾರಂಭವಾಗುವ ಹಿನ್ನೆಲೆ ಅದಕ್ಕೆ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಸೂಚನೆ ನೀಡಿದರು.

ಶನಿವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ನಿಯಂತ್ರಣ, ಮಳೆಗಾಲಕ್ಕೆ ಮಾಡಿಕೊಳ್ಳಬೇಕಾದ ತಯಾರಿ, ಆಸ್ತಿ ತೆರಿಗೆ ಸಂಗ್ರಹ ಸೇರಿದಂತೆ ಇನ್ನಿತರೆ ವಿಷಯಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಆಸ್ತಿ ತೆರಿಗೆಯನ್ನು ಸಮರ್ಪಕವಾಗಿ ಸಂಗ್ರಹಿಸುವ, ಸಾರ್ವಜನಿಕ ದೂರುಗಳಿಗೆ ಸರಿಯಾಗಿ ಸ್ಪಂದಿಸಿ ತ್ವರಿತವಾಗಿ ಇತ್ಯರ್ಥಪಡಿಸುವ, ಕಾಮಗಾರಿಗಳನ್ನು ಕಾಲಮಿತಿಯೊಳಗಾಗಿ ಪೂರ್ಣಗೊಳಿಸುವ, ರಸ್ತೆ ಬದಿಯ ಚರಂಡಿ, ಮೋರಿಗಳಿಂದ ತೆಗೆದಿರುವ ಶಿಲ್ಟ್ ಅನ್ನು ಕೂಡಲೆ ತೆರವು ಮಾಡುವುದು ಸೇರಿದಂತೆ ಇನ್ನಿತರೆ ವಿಷಯಗಳ ಬಗ್ಗೆ ಹೆಚ್ಚು ಗಮನವರಿಸಿ ಸರಿಯಾಗಿ ಕಾರ್ಯನಿರ್ವಹಿಸುವಂತೆ ಹೇಳಿದರು.

ಇನ್ನು, ನಗರದಲ್ಲಿ ಕೋವಿಡ್ ಪ್ರಕರಣಗಳು ಕ್ರಮೇಣ ಹೆಚ್ಚಳವಾಗುತ್ತಿವೆ. ಆ ಬಗ್ಗೆ ಹೆಚ್ಚು ಗಮನವರಿಸಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ನಿಯಂತ್ರಣಕ್ಕೆ ತರಬೇಕು. ಜೊತೆಗೆ ಇನ್ನೆರಡು ತಿಂಗಳಲ್ಲಿ ಮಳೆಗಾಲ ಪ್ರಾರಂಭವಾಗಲಿದ್ದು, ಅದಕ್ಕೆ ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಂಡು ಎಲ್ಲೂ ಯಾವುದೇ ರೀತಿಯ ಸಮಸ್ಯೆ ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಅದೇ ರೀತಿ, ನಗರದ ಪಾದಚಾರಿ ಮಾರ್ಗಗಳಲ್ಲಿ ಕರ್ಬ್ ಸ್ಟೋನ್ಸ್, ಸ್ಲಾಬ್‌ಗಳು ಎಲ್ಲೆಲ್ಲಿ ಮುರಿದು ಬಿದ್ದಿವೆ ಅವುಗಳನ್ನು ಕೂಡಲೆ ತೆರವುಗೊಳಿಸಿ ಪಾದಚಾರಿಗಳ ಓಡಾಟಕ್ಕೆ ಯಾವುದೇ ರೀತಿಯ ತೊಂದಯೆಯಾಗದಂತೆ ಮಾಡಬೇಕು.

ರಸ್ತೆ ಬದಿ ಸುರಿದಿರುವ ಕಟ್ಟಡ ಭಗ್ನಾವೇಶಗಳನ್ನು ತೆರವುಗೊಳಿಸಬೇಕು. ಎಲ್ಲಾ ಅಧಿಕಾರಿಗಳು ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸಬೇಕು. ಯಾವುದೇ ದೂರುಗಳನ್ನು ನೀಡಿದಾಗ ಅದನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು. ಪಾಲಿಕೆ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಕಾಲಮಿತಿಯೊಳಗಾಗಿ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.

ಕನಿಷ್ಟ 3 ಗಂಟೆ: ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ಹೊಸ ಕಾಯ್ದೆ ಜಾರಿಯಾಗಿದ್ದು, ಅದರಂತೆ ಎಲ್ಲರೂ ಸರಿಯಾಗಿ ಕಾರ್ಯನಿರ್ವಹಿಸಬೇಕು.

ವಲಯ ಆಯುಕ್ತರುಗಳು ಆಯಾ ವಲಯಗಳಲ್ಲಿ ಕನಿಷ್ಟ 3 ಗಂಟೆಗಳ ಕಾಲ ಕಾರ್ಯನಿರ್ವಹಿಸಬೇಕು. ಹಾಗೂ ಆಯಾ ವಲಯ ಮಟ್ಟದಲ್ಲಿ ಸಪರ್ಮಕವಾಗಿ ಕಾರ್ಯನಿರ್ವಹಸಿ ಸಾರ್ವಜನಿಕ ದೂರುಗಳಿಗೆ 1 ಗಂಟೆ ಸಮಯ ಮೀಸಲಿರಿಸಿ ಅವರ ಸಮಸ್ಯೆಗಳನ್ನು ಆಲಿಸಿ ಇತ್ಯರ್ಥಪಡಿಸಬೇಕು ಎಂದು ಸೂಚಿಸಿದರು.

ಆಸ್ತಿ ತೆರಿಗೆಯನ್ನು ಸಂಗ್ರಹ ಮಾಡಲು ಸೂಕ್ತ ಕ್ರಮವಹಿಸಬೇಕು. ಬಾಕಿ ಆಸ್ತಿ ತೆರಿಗೆ ಉಳಿಸಿಕೊಂಡಿರುವವರಿಂದ ಆಸ್ತಿ ತೆರಿಗೆ ಸಂಗ್ರಹಿಸಬೇಕು. ಹಾಗೂ ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡದ ಆಸ್ತಿಗಳನ್ನು ಗುರುತಿಸಿ ತೆರಿಗೆ ವ್ಯಾಪ್ತಿಗೆ ತರಲು ಸೂಕ್ತ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ವಿಶೇಷ ಆಯುಕ್ತರಾದ ರಾಜೇಂದ್ರ ಚೋಳನ್, ಮನೋಜ್ ಜೈನ್, ರೆಡ್ಡಿ ಶಂಕರ ಬಾಬು, ಬಸವರಾಜು, ರಂದೀಪ್, ತುಳಸಿ ಮದ್ದಿನೇನಿ, ರವೀಂದ್ರ, ಮುಖ್ಯ ಆರೋಗ್ಯಾಧಿಕಾರಿ ಡಾ.ವಿಜೇಂದ್ರ ಸೇರಿದಂತೆ ಪ್ರಮುಖರಿದ್ದರು.