ಕೋವಿಡ್ ಚಿಕಿತ್ಸೆ ಸಮರೋಪಾದಿಯಲ್ಲಿ ನಿರ್ವಹಿಸಲು ಎಸ್.ಯು.ಸಿ.ಐ-ಸಿ ಒತ್ತಾಯ

ಕಲಬುರಗಿ,ಏ.28- ಹೆಚ್ಚುತ್ತಿರುವ ಕೋವಿಡ್ ರೋಗಿಗಳ ಚಿಕಿತ್ಸೆಗೆ ಬೇಕಾದಷ್ಟು ಆಂಬುಲೆನ್ಸ್, ಹಾಸಿಗೆ, ಆಮ್ಲಜನಕ, ವೆಂಟಿಲೇಟರ್, ಐಸಿಯುಗಳನ್ನು ಸಮರೋಪಾದಿಯಲ್ಲಿ ಒದಗಿಸಿ. ಅಗತ್ಯ ಔಷಧಿಗಳ ಸುಗಮ ಪೂರೈಕೆಗೆ ಕ್ರಮ ಕೈಗೊಳ್ಳುವುದು ಸೇರಿದಂತೆ ಪ್ರಮುಖ ಬೇಡಿಕೆಗೆ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ (ಎಸ್.ಯು.ಸಿ.ಐ-ಸಿ) ಜಿಲ್ಲಾ ಸಮಿತಿ ಒತ್ತಾಯಿಸಿದೆ.
ಇತರ ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆಯ ಲಭ್ಯತೆಯನ್ನು ಖಾತ್ರಿಪಡಿಸಿ. ವೈದ್ಯರು, ದಾದಿಯರು, ಪ್ರಯೋಗಾಲಯ ತಜ್ಞರು, ಡಿ ಗ್ರೂಪ್ ನೌಕರರ ಕೊರತೆಯನ್ನು ಸರಿಪಡಿಸಿ, ನೇಮಕಾತಿ ನಡೆಸಿ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವಂತೆ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಎಚ್.ವ್ಹಿ. ದಿವಾಕರ ಅವರು ಆಗ್ರಹಿಸಿದ್ದಾರೆ.
ಕೋವಿಡ್ ಎರಡನೇ ಅಲೆ ಬಹಳ ತೀವ್ರವಾಗಿ ದೇಶದ ಮೇಲೆ ಅಪ್ಪಳಿಸಿದೆ. ನಮ್ಮ ರಾಜ್ಯದಲ್ಲೂ ಸೋಂಕಿತರ ಸಂಖ್ಯೆ ಆತಂಕಕಾರಿಯಾಗಿ ಏರಿಕೆಯಾಗುತ್ತಿದೆ. ಪರಿಣಾಮವಾಗಿ ಆಂಬುಲೆನ್ಸ್, ಆಸ್ಪತ್ರೆಯ ಹಾಸಿಗೆ, ಆಮ್ಲಜನಕ, ಐಸಿಯು ಇತ್ಯಾದಿಗಳ ಕೊರತೆಯಿಂದ ಬದುಕುಳಿಯಬಹುದಾದ ರೋಗಿಗಳೂ ಜೀವಕಳೆದುಕೊಳ್ಳುವ ಹೃದಯವಿದ್ರಾವಕ ಘಟನೆಗಳು ವರದಿಯಾಗುತ್ತಿವೆ. ರೆಮ್ಡೆಸಿವಿರ್ ನಂತಹ ಔಷಧಿಗಳು ಕಾಳಸಂತೆಯಲ್ಲಿ 4-5 ಪಟ್ಟು ಹೆಚ್ಚು ದರಕ್ಕೆ ಮಾರಾಟವಾಗುತ್ತಿವೆ.
ಕೋವಿಡ್ ಎರಡನೇ ಅಲೆ ವಿದೇಶಗಳಲ್ಲಿ ಸೃಷ್ಟಿಸಿದ ಅವಾಂತರದ ಬಗ್ಗೆ ಸರ್ಕಾರಕ್ಕೆ ತಿಳಿದಿತ್ತು. ರಾಜ್ಯದ ತಜ್ಞರು ಕೂಡ ಮುನ್ನೆಚ್ಚರಿಕೆ ಕ್ರಮಗಳನ್ನು ಸೂಚಿಸಿದ್ದರು. ರೂಪಾಂತರಿ ಕೊರೋನಾ ವೈರಸ್ ಹರಡುತ್ತಿರುವ ಮಾಹಿತಿ ಲಭ್ಯವಿತ್ತು. ಸರ್ಕಾರಿ ಆರೋಗ್ಯ ವ್ಯವಸ್ಥೆಯ ಕೊರತೆಗಳನ್ನು ನೀಗಿಸಿ ಸದೃಢಗೊಳಿಸಲು ಒಂದು ವರ್ಷದ ಕಾಲಾವಕಾಶ ಇತ್ತು. ಆದರೆ ಅತ್ಯಂತ ಖಂಡನೀಯ ವಿಷಯವೆಂದರೆ ರಾಜ್ಯ ಸರ್ಕಾರವಾಗಲಿ, ಕೇಂದ್ರವಾಗಲಿ ಈ ಕುರಿತು ಸ್ವಲ್ಪವೂ ತಲೆಕೆಡಿಸಿಕೊಂಡಿಲ್ಲ.
ಒಳಜಗಳ, ಗುಂಪುಗಾರಿಕೆ, ಸಿಡಿ ಪ್ರಕರಣಗಳಲ್ಲಿ ರಾಜ್ಯ ಸರ್ಕಾರ ಮುಳುಗಿದ್ದರೆ, ಕೇಂದ್ರವು ತಾನು ಕೋವಿಡ್ ಸವಾಲನ್ನು ಗೆದ್ದಾಗಿದೆಯೆಂದು ಕೊಚ್ಚಿಕೊಳ್ಳುವುದರಲ್ಲಿ, ಸರ್ಕಾರಿ ಸೊತ್ತುಗಳ ಮಾರಾಟ, ಪಂಚರಾಜ್ಯಗಳ ಚುನಾವಣೆ, ಕುಂಭಮೇಳದಲ್ಲಿ ತಲ್ಲೀನವಾಗಿತ್ತು. ಪರಿಣಾಮವಾಗಿ ಒಂದು ವರ್ಷದ ಹಿಂದೆ ಅನುಭವಿಸಿದ ಬಿಕ್ಕಟ್ಟನ್ನೇ ಜನತೆ ಮತ್ತೆ ಎದುರಿಸುವಂತಾಗಿರುವುದು ಸರ್ಕಾರದ ಬೇಜವಾಬ್ದಾರಿತನದ ಪರಮಾವಧಿಯಲ್ಲದೆ ಇನ್ನೇನು!ಬೆಂಗಳೂರಿನಂತಹ ನಗರದಲ್ಲೂ ಹಾಸಿಗೆಗಳ ಲಭ್ಯತೆಯ ಮಾಹಿತಿ ಪಡೆಯಲು ಸರಿಯಾದ ವ್ಯವಸ್ಥೆ ಇಲ್ಲವೆಂದರೆ ನಂಬಲೇಬೇಕು.
ಇನ್ನೊಂದೆಡೆ, ಉಪಚುನಾವಣೆ ಮುಗಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಸರ್ಕಾರ ವಾರಾಂತ್ಯ ಕಫ್ರ್ಯೂ, ಲಾಕ್ ಡೌನ್ ಘೋಷಿಸಿದೆ. ದೊಡ್ಡಬಂಡವಾಳಶಾಹಿಗಳ ಆರ್ಥಿಕತೆಯ ಕುರಿತು ಕಾಳಜಿವಹಿಸುತ್ತಿರುವ ಸರ್ಕಾರ ಇದೇ ಕಾರಣದಿಂದ ತಮ್ಮ ಜೀವನೋಪಾಯ ಕಳೆದುಕೊಳ್ಳುವ ದುಡಿಯುವ ಜನರ ಬಗ್ಗೆ ಸರ್ಕಾರ ಮೌನವಾಗಿದೆ.
ಇಂತಹ ಸಂದರ್ಭದಲ್ಲಿ ಕೋವಿಡ್ ಹರಡುವುದನ್ನು ತಡೆಯಲು, ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲು, ಇತರ ಗಂಭೀರ ಕಾಯಿಲೆಗಳ ರೋಗಿಗಳಿಗೆ ಚಿಕಿತ್ಸೆ ನೀಡಲು, ಸಾರ್ವತ್ರಿಕ ಲಸಿಕೆ ಹಾಕಲು, ಜೀವನೋಪಾಯ ಕಳೆದುಕೊಳ್ಳುವ ಬಡವರನ್ನು ರಕ್ಷಿಸಲು ಸರ್ಕಾರ ತಕ್ಷಣವೇ ಮುಂದಾಗಬೇಕು, ಅದಕ್ಕಾಗಿ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬೇಕು.
ಹಕ್ಕೊತ್ತಾಯಗಳು
ಮುಂಚೂಣಿ ಕಾರ್ಯಕರ್ತರಾದ ವೈದ್ಯರು, ದಾದಿಯರು, ಆಶಾ ಕಾರ್ಯಕರ್ತೆಯರು ಮೊದಲಾದವರಿಗೆ ಅಗತ್ಯವಿರುವಷ್ಟು ಮಾಸ್ಕ್, ಸಾನಿಟೈಸರ್, ಸುರಕ್ಷಾ ಕಿಟ್ ಗಳನ್ನು ಒದಗಿಸಿ.
ಕಠಿಣ ಲಾಕ್ ಡೌನ್ ನಿಬರ್ಂಧಗಳ ಸಂದರ್ಭದಲ್ಲಿ ಉದ್ಯೋಗ ನಾಶವನ್ನು ತಡೆಗಟ್ಟಿ. ಜೀವನೋಪಾಯ ಕಳೆದುಕೊಳ್ಳುವ ಬೀದಿಬದಿ ವ್ಯಾಪಾರಿಗಳು, ಅಟೋ-ಟ್ಯಾಕ್ಸಿ ಚಾಲಕರು, ಗಾಮೆರ್ಂಟ್ಸ್ ಕಾರ್ಮಿಕರು, ಮನೆಗೆಲಸದವರು, ಸಣ್ಣ ವ್ಯಾಪಾರಿಗಳು, ಸ್ವಂತ ಕಸುಬು ನಡೆಸುವ ದೋಬಿಗಳು, ಕ್ಷೌರಿಕರು, ಚಮ್ಮಾರರು, ದರ್ಜಿಗಳು ಮೊದಲಾದವರೆಲ್ಲರಿಗೆ ಮಾಸಿಕ ರೂ. 7500 ಸಹಾಯಧನ ಒದಗಿಸಿ. ಬಡವರು ಹಸಿವೆಗೆ ಬಲಿಯಾಗದಂತೆ ತಡೆಯಲು ಪಡಿತರ ಮೂಲಕ ತಲಾ 10ಕೆಜಿ ಅಕ್ಕಿ, ಅಡುಗೆ ಎಣ್ಣೆ, ಬೇಳೆಕಾಳುಗಳು, ಸಕ್ಕರೆ ಮೊದಲಾದ ಅಗತ್ಯ ವಸ್ತುಗಳನ್ನು ಪೂರೈಸಿ. ಎಲ್ಲರಿಗೂ ಸಾರ್ವತ್ರಿಕವಾಗಿ ಉಚಿತ ಲಸಿಕೆ ನೀಡಿ. ಅವಶ್ಯಕತೆ ಇರುವಷ್ಟು ಲಸಿಕೆ ಒದಗಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು.
ಕೋವಿಡ್ ಲಾಕ್ ಡೌನ್ ನ ನಿಬರ್ಂಧಗಳ ದುರುಪಯೋಗ ಪಡೆದುಕೊಂಡು ಜನವಿರೋಧಿ ನೀತಿಗಳ ಜಾರಿಯನ್ನು ಕೈಬಿಡಿ. ಖಾಸಗೀಕರಣ, ಕಾರ್ಮಿಕ ವಿರೋಧಿ-ರೈತ ವಿರೋಧಿ ಕಾನೂನುಗಳ ಜಾರಿ, ರಸಗೊಬ್ಬರ ದರ ಏರಿಕೆ, ಆಸ್ತಿ ತೆರಿಗೆ ಏರಿಕೆ, ಶಿಕ್ಷಣದ ಶುಲ್ಕಗಳ ಏರಿಕೆ ಇತ್ಯಾದಿ ತೀರ್ಮಾನಗಳನ್ನು ಹಿಂತೆಗೆದುಕೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.