ಕೋವಿಡ್ ಚಿಕಿತ್ಸೆಗೆ ಎಬಿಆರ್‍ಕೆ ಸೌಲಭ್ಯ ಬಡವರಿಗೆ ಸಿಗಲಿ,

ಚಿತ್ರದುರ್ಗ,ಮೇ.20;  ಆಯುಷ್ಮಾನ್ ಆರೋಗ್ಯ ಕರ್ನಾಟಕ ಯೋಜನೆಯಡಿ ಎಲ್ಲಾ ಕೋವಿಡ್ ರೋಗಿಗಳಿಗೆ ಸರ್ಕಾರಿ ಸೇರಿದಂತೆ ಸರ್ಕಾರಿ ಕೋಟಾದಡಿ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‍ಗೆ ಉಚಿತ ಚಿಕಿತ್ಸೆ ಪಡೆಯಲು ಅವಕಾಶ ಇದ್ದು ಕೂಡಲೇ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಸಹಾಯ ಮೇಜನ್ನು ಸ್ಥಾಪಿಸಬೇಕೆಂದು ಸಂಸದರಾದ ಎ.ನಾರಾಯಣಸ್ವಾಮಿ ಸೂಚನೆ ನೀಡಿದರು.
 ಅವರು  ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸರ್ಕಾರಿ ಸೇರಿದಂತೆ ಖಾಸಗಿಯಲ್ಲಿ ಕೋವಿಡ್‍ಗೆ ಚಿಕಿತ್ಸೆ ಪಡೆಯಲು ಅವಕಾಶ ಇದೆ. ಆದರೆ ಬೆಡ್ ಸಿಗದೆ ಅನೇಕ ಬಡವರಿಗೆ ತೊಂದರೆಯಾಗಿದೆ. ಇದಕ್ಕಾಗಿ ಎಬಿಆರ್‍ಕೆಯಿಂದ ಸ್ಥಳದಲ್ಲೆ ಸಹಾಯ ಮಾಡಲು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಸಹಾಯಮೇಜು ಸ್ಥಾಪಿಸಲು ಈಗಾಗಲೇ ಅನುಮೋದನೆ ನೀಡಲಾಗಿದೆ. ಆದರೂ ತೆರೆಯದ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿ ತಕ್ಷಣವೇ ಈ ಕೆಲಸವಾಗಬೇಕೆಂದು ತಾಕೀತು ಮಾಡಿದರು. ಈ ವೇಳೆ ಎಬಿಆರ್‍ಕೆ ನೋಡಲ್ ಅಧಿಕಾರಿ ಡಾ; ಚಂದ್ರಶೇಖರ್ ನಾಳೆಯಿಂದಲೇ ಸಹಾಯಮೇಜು ಸ್ಥಾಪಿಸಲಾಗುತ್ತದೆ ಎಂದರು.
 ಪ್ರತಿ ದಿನ ಎಷ್ಟು ಬೆಡ್‍ಗಳು ಖಾಲಿಯಾಗಿವೆ ಹಾಗೂ ಬಿಡುಗಡೆಯಾಗುತ್ತದೆ ಎಂಬ ಮಾಹಿತಿ ಹಾಗೂ ರೋಗಿಗಳಿಗೆ ಯಾವ ಯಾವ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂಬ ಮಾಹಿತಿಯನ್ನು ಇಟ್ಟುಕೊಂಡಿರಬೇಕು ಎಂದರು.
 ವಾರ್ ರೂಂ; ಇಂತಹ ಸಂಕಷ್ಟದ ಸಂದರ್ಭದಲ್ಲಿ ಎಲ್ಲಾ ವಿವರವನ್ನು ಹೊಂದಿರುವ ವಾರ್ ರೂಂ ಸ್ಥಾಪನೆ ಮಾಡಬೇಕು. ಈ ಕೇಂದ್ರದಲ್ಲಿ ಕೋವಿಡ್‍ಗೆ ಸಂಬಂಧಿಸಿದಂತೆ ಸಂಪೂರ್ಣ ವಿವರ ಇಲ್ಲಿರಬೇಕು. ಪ್ರತಿ ನಿತ್ಯ ಎಷ್ಟು ಜನ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ, ಎಷ್ಟು ಜನ ಬಿಡುಗಡೆ ಮಾಡಿದೆ, ಆಕ್ಸಿಜನ್ ಪೂರೈಕೆ, ಔಷಧ ಪೂರೈಕೆ ಸೇರಿದಂತೆ ಸಂಪೂರ್ಣವಾದ ನಿಯಂತ್ರಣ ವಾರ್ ರೂಂನಲ್ಲಿ ಇರಬೇಕಾಗಿದ್ದು ಇದೇ ಮಾದರಿಯಲ್ಲಿ ಕೋವಿಡ್ ನಿರ್ವಹಿಸಬೇಕೆಂದು ಸೂಚನೆ ನೀಡಿದರು.
 ಕೋವಿಡ್ ರೋಗಿಗಳನ್ನು ಪ್ರತ್ಯೇಕಿಸಿ;
 ಕೋವಿಡ್ ಪಾಸಿಟೀವ್ ರೋಗಿಗಳನ್ನು ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡುವುದರಿಂದ ಹೆಚ್ಚಿನ ಪ್ರಾಣಹಾನಿ ತಡೆಯಬಹುದಾಗಿದ್ದು ಅವರ ಕುಟುಂಬವನ್ನು ರಕ್ಷಣೆ ಮಾಡಬಹುದಾಗಿದೆ. ರೋಗ ಲಕ್ಷಣ ಇರುವವರು ಮನೆಯಲ್ಲಿ ಪ್ರತ್ಯೇಕವಾಗಿರದೆ ಎಲ್ಲರೊಂದಿಗೆ ಹಾಗೂ ಎಲ್ಲಾ ಕಡೆ ತಿರುಗಾಡಿಕೊಂಡಿರುತ್ತಾರೆ. ಆದ್ದರಿಂದ ಕೇರ್ ಸೆಂಟರ್‍ಗಳಿಗೆ ಕರೆ ತರಬೇಕೆಂದು ತಿಳಿದರು.
 ಖಾಸಗಿ ಕ್ಲಿನಿಕ್‍ಗಳ ಮೇಲೆ ನಿಗಾ;
 ಕೋವಿಡ್ ರೋಗ ಲಕ್ಷಣಗಳಿದ್ದರೂ ಸಹ ಖಾಸಗಿ ಕ್ಲಿನಿಕ್‍ನಲ್ಲಿ ವೈದ್ಯರು ಅವರಿಗೆ ಸಾಮಾನ್ಯ ಚಿಕಿತ್ಸೆ ನೀಡಿ ಕಳುಹಿಸುತ್ತಾರೆ. ಕೆಲವು ದಿನಗಳ ನಂತರ ಇವರ ಆಕ್ಸಿಜನ್ ಲೆವೆಲ್ ಕಡಿಮೆಯಾದಾಗ ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ. ಇದರಿಂದ ಅಂತಹ ರೋಗಿಯು ಸಂಕಷ್ಟಕ್ಕೆ ಸಿಲುಕುತ್ತಾನೆ. ಕೋವಿಡ್ ಲಕ್ಷಣಗಳು ಕಂಡು ಬಂದ ತಕ್ಷಣವೇ ಟೆಸ್ಟ್ ಮಾಡಿಸಿ ಸಕಾಲದಲ್ಲಿ ಚಿಕಿತ್ಸೆ ನೀಡುವುದರಿಂದ ಆಕ್ಸಿಜನ್ ಕೊಡುವ ಹಂತಕ್ಕೆ ರೋಗಿ ತಲುಪುವುದಿಲ್ಲ, ಕೋವಿಡ್ ಕೇರ್ ಸೆಂಟರ್ ಅಥವಾ ಪ್ರತ್ಯೇಕ ವ್ಯವಸ್ಥೆ ಇದ್ದರೆ ಮನೆಯಲ್ಲಿ ಚಿಕಿತ್ಸೆ ಪಡೆದು ಆರೋಗ್ಯವಾಗಿರಬಹುದಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ತಾಲ್ಲೂಕು ಆರೋಗ್ಯಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ವಹಿಸಬೇಕಾಗಿದೆ ಎಂದರು.
 ಕೋವಿಡ್, ಲಸಿಕೆ ಮುಕ್ತ ಗ್ರಾಮ ಫಲಕ;
ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ತೀವ್ರ ನಿಗಾವಹಿಸಬೇಕಾಗಿದ್ದು ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಮೇಲೆ ಒಬ್ಬಬ್ಬ ನೋಡಲ್ ಅಧಿಕಾರಿಯನ್ನು ನೇಮಕ ಮಾಡಿ ಎಲ್ಲಾ ಗ್ರಾಮಗಳಲ್ಲಿ ಕೋವಿಡ್ ಲಕ್ಷಣಗಳಿರುವವರನ್ನು ಟೆಸ್ಟ್ ಮಾಡಿಸಿ ಈ ಗ್ರಾಮಗಳನ್ನು ಕೋವಿಡ್ ಮುಕ್ತ ಎಂಬ ಬೋರ್ಡ್ ಹಾಕುವ ಮಟ್ಟಕ್ಕೆ ಕೆಲಸ ಮಾಡಬೇಕಾಗಿದೆ. ಅದೇ ರೀತಿ ಕೋವಿಡ್‍ಗೆ ಲಸಿಕೆಯನ್ನು ಹಾಕಲಾಗುತ್ತಿದ್ದು ಗ್ರಾಮಗಳಲ್ಲಿ ಎಲ್ಲರಿಗೂ ಲಸಿಕೆಯನ್ನು ಹಾಕಿಸುವ ಮೂಲಕ ಲಸಿಕೆ ಮುಕ್ತಗ್ರಾಮ ಎಂದು ಫಲಕವನ್ನು ಹಾಕುವ ನಿಟ್ಟಿನಲ್ಲಿ ಕೆಲಸ ಮಾಡುವ ಮೂಲಕ ಬೇರೆಯವರಿಗೆ ಮಾದರಿಯಾಗುವ ನಿಟ್ಟಿನಲ್ಲಿ ಇಲ್ಲಿನ ಅಧಿಕಾರಿಗಳು ಕೆಲಸ ಮಾಡುವಂತಾಗಬೇಕೆಂದರು.
 ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‍ಗೆ ಸರ್ಕಾರಿ ಕೋಟಾವನ್ನು ನಿಗಧಿ ಮಾಡಲಾಗಿದ್ದು ಇದರ ನಿರ್ವಹಣೆಗಾಗಿ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಬಸವೇಶ್ವರ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜು, ಚಿತ್ರದುರ್ಗ, ಆಸ್ಪತ್ರೆಯ ಮುಖ್ಯಸ್ಥರು ಹಾಲಸ್ವಾಮಿ-08194-227642, ಆರೋಗ್ಯ ನಿರೀಕ್ಷಕರಾದ ಸಿರೀಶ್-7760379565, ಶಿವಕುಮಾರ-9739866918 ಹಾಗೂ ಆರೋಗ್ಯ ಮಿತ್ರ ಕುಮಾರ್-7259003379 ಅವರನ್ನು ನಿಯೋಜಿಸಲಾಗಿದೆ.  ಬಸಪ್ಪ ಆಸ್ಪತ್ರೆ, ಚಿತ್ರದುರ್ಗ, ಮುಖ್ಯಸ್ಥರು ಡಾ.ರಂಗಾರೆಡ್ಡಿ-948011525214, ಆರೋಗ್ಯ ನಿರೀಕ್ಷಕ ರುದ್ರಮುನಿ-9901936473, ಆರೋಗ್ಯ ಮಿತ್ರ ಕುಮಾರ್-7259003379 ಅವರನ್ನು ನಿಯೋಜಿಸಲಾಗಿದೆ. ಚಿತ್ರದುರ್ಗ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ, ತುರುವನೂರು ರಸ್ತೆ, ಚಿತ್ರದುರ್ಗ, ಮುಖ್ಯಸ್ಥರು ಡಾ.ರಾಜೇಶ್-9886577884, ಆರೋಗ್ಯ ನಿರೀಕ್ಷಕ ರುದ್ರಮುನಿ-9901936473, ಆರೋಗ್ಯ ಮಿತ್ರ ಕುಮಾರ್-7259003379 ಅವರನ್ನು ನಿಯೋಜಿಸಲಾಗಿದೆ. ನಿವ್ ಲೈಪ್ ಆಸ್ಪತ್ರೆ, ಚಳ್ಳಕೆರೆ ರಸ್ತೆ ಚಿತ್ರದುರ್ಗ, ಮುಖ್ಯಸ್ಥರು ಡಾ.ತೇಜಸ್-9167153866, ಆರೋಗ್ಯ  ನಿರೀಕ್ಷಕ ಕಿರಣ ಯು-9740211793, ಆರೋಗ್ಯ ಮಿತ್ರ ಕುಮಾರ್-7259003379 ಅವರನ್ನು ನಿಯೋಜಿಸಲಾಗಿದೆ. ಸಾಯಿ ನಾರಾಯಣ ಆಸ್ಪತ್ರೆ, ಚಳ್ಳಕೆರೆ ರಸ್ತೆ3, ಚಿತ್ರದುರ್ಗ, ಮುಖ್ಯಸ್ಥರು ಡಾ.ರಮೇಶ್-9739295374, , ಆರೋಗ್ಯ  ನಿರೀಕ್ಷಕ ಕಿರಣ ಯು-9740211793,   ಆರೋಗ್ಯ ಮಿತ್ರ ಸಯ್ಯದ್ ಸಾದತ್ 9663398421 ಅವರನ್ನು ನಿಯೋಜಿಸಲಾಗಿದೆ. ವಾಯುಪುತ್ರ ಆಸ್ಪತ್ರೆ, ಹಳೇ ವೈಶಾಲಿ ನರ್ಸೀಂಗ್ ಹೋಂ, ಸ್ಟೇಡಿಯಂ ರಸ್ತೆ, ಚಿತ್ರದುರ್ಗ, ಮುಖ್ಯಸ್ಥರು ಡಾ.ಜಗದೀಶ್-9916380039, ಆರೋಗ್ಯ  ನಿರೀಕ್ಷಕ ಕಿರಣ ಯು-9740211793,   ಆರೋಗ್ಯ ಮಿತ್ರ ಸಯ್ಯದ್ ಸಾದತ್ 9663398421 ಅವರನ್ನು ನಿಯೋಜಿಸಲಾಗಿದೆ. ಕೃಷ್ಣ ಆಸ್ಪತ್ರೆ, ಲಕ್ಷ್ಮೀಬಜಾರ್, ಚಿತ್ರದುರ್ಗ, ಡಾ.ಲಲಿತ್-9823946426, ಹಿರಿಯ ಆರೋಗ್ಯ ನಿರೀಕ್ಷಕ ರುದ್ರಮುನಿ 9902169075, ಆರೋಗ್ಯ ಮಿತ್ರ ಸಯ್ಯದ್ ಸಾದತ್ 9663398421 ಅವರನ್ನು ನಿಯೋಜಿಸಲಾಗಿದೆ.
 ಸಭೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ; ಕೆ.ನಂದಿನಿದೇವಿ, ಜಿಲ್ಲಾ ರಕ್ಷಣಾಧಿಕಾರಿ ಜಿ.ರಾಧಿಕಾ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ; ಪಾಲಾಕ್ಷ, ಜಿಲ್ಲಾ ಸರ್ಜನ್ ಡಾ; ಬಸವರಾಜಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ; ರಂಗನಾಥ್, ಜಿಲ್ಲಾ ಬಿ.ಸಿ.ಎಂ ಅಧಿಕಾರಿ ಅವೀನ್ ಉಪಸ್ಥಿತರಿದ್ದರು.