ಕೋವಿಡ್ ಗೆ ಕೋಟಿ ನಿರ್ಮಾಪಕ ರಾಮು ಬಲಿ

ಬೆಂಗಳೂರು, ಏ.26-ಕನ್ನಡ ಚಿತ್ರರಂಗದ ಹಿರಿಯ ವಿತರಕ, ನಿರ್ಮಾಪಕ‌ , ಕೋಟಿ ನಿರ್ಮಾಪಕ ಎಂದೇ ಖ್ಯಾತಿ ಪಡೆದಿದ್ದ ರಾಮು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.

ರಾಮು ಅವರಿಗೆ 52 ವರ್ಷ ವಯಸ್ಸಾಗಿತ್ತು. ಕಳೆದ ವಾರದಿಂದ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ನಟಿ ಮಾಲಾಶ್ರೀ ಹಾಗು ಇಬ್ಬರು ಮಕ್ಕಳು ಹಾಗು ಬಂಧು ಮಿತ್ರರನ್ನು ಅಗಲಿದ್ದಾರೆ.

ಲಾಕಪ್ ಡೆತ್, ಎ.ಕೆ 47 ,ಸಿಬಿಐ ದುರ್ಗ ,ಸರ್ಕಲ್ ಇನ್ಸ್ ಪೆಕ್ಟರ್, ಸೇರಿದಂತೆ ಅನೇಕ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. ಆಗಿನ ಕಾಲಕ್ಕೆ ಕೋಟಿ ರೂಪಾಯಿ ಬಂಡವಾಳ ಚಿತ್ರ ನಿರ್ಮಾಣ ಮಾಡಿದ ಮೊದಲ ನಿರ್ಮಾಪಕ ಎನ್ನುವ ಹೆಗ್ಗಳಿಕೆ ಅವರದು.

ಇತ್ತೀಚಿಗೆ ಅರ್ಜುನಗೌಡ ಚಿತ್ರ ನಿರ್ಮಾಣ ಮಾಡಿದ್ದರು ಅದು ಬಿಡುಗಡೆಯಾಗುವ ಮುನ್ನವೇ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಹಲವು ಯಶಸ್ವಿ ಚಿತ್ರಗಳನ್ನು ನಿರ್ಮಾಣ ಮಾಡಿದ್ದ ರಾಮು ಅವರು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದು ಚಿತ್ರರಂಗದ ಗಣ್ಯರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಚಿತ್ರರಂಗ ತೀವ್ರ ಶೋಕ

ಕನ್ನಡ ಚಿತ್ರಗಳನ್ನು ಪರಭಾಷೆ ಚಿತ್ರರಂಗದ ಮಟ್ಟಿಗೆ ನಿರ್ಮಾಣ ಮಾಡಿದ್ದ ಹೆಗ್ಗಳಿಕೆ ಹೊಂದಿದ್ದ ರಾಮು ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಚಿತ್ರರಂಗದಲ್ಲಿ ನಿರ್ಮಾಪಕರಾಗಿ ವಿತರಕರಾಗಿ ಹೆಸರು ಮಾಡಿದ್ದ ರಾಮು ಅವರು ನಿಧನರಾಗಿರುವುದು ಚಿತ್ರರಂಗಕ್ಕೆ ನುಂಗಲಾರದ ತುತ್ತಾಗಿದೆ.

ಕನ್ನಡ ಚಿತ್ರರಂಗದಲ್ಲಿ ಹಿರಿಯ ನಿರ್ಮಾಪಕ ಒಬ್ಬರಾಗಿದ್ದ ರಾಮ್ ಅವರ ನಿಧನದಿಂದ ಚಿತ್ರರಂಗ ತಬ್ಬಿಬ್ಬಾಗಿದೆ. ಈಗಾಗಲೇ ಕೊರೋನ ಸೋಂಕಿನಿಂದ ಹಲವು ನಿರ್ಮಾಪಕರು ಕಲಾವಿದರು ಮೃತಪಟ್ಟಿದ್ದು ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ

ಸಂತಾಪ

ನಂಬಲು ಆಗುತ್ತಿಲ್ಲ

ಹಿರಿಯ ನಿರ್ಮಾಪಕ ರಾಮು ಅವರು ಕೊರೋನಾ ಸೋಂಕಿನಿಂದ ನಿಧನರಾಗಿರುವುದು ನಂಬಲು ಆಗುತ್ತಿಲ್ಲ. ಕೋವಿಡ್ ಸೋಂಕನ್ನು ಯಾರು ಲಘುವಾಗಿ ಪರಿಗಣಿಸಬೇಡಿ ಎಂದು ಹಿರಿಯ ನಟ ದೇವರಾಜ್ ಮನವಿ ಮಾಡಿದ್ದಾರೆ

ಹೆಚ್ ಡಿಕೆ ಸಂತಾಪ:

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಕೂಡ ರಾಮು ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದ್ದಾರೆ

ನಟರಾದ ಪುನೀತ್ ರಾಜಕುಮಾರ್, ಗಣೇಶ್ ಸೇರಿದಂತೆ ಚಿತ್ರರಂಗದ ಅನೇಕ ನಿರ್ಮಾಪಕರು ನಿರ್ದೇಶಕರು ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ

ಸಂತಾಪ:

ಕನ್ನಡ ಚಿತ್ರರಂಗದ ಕೋಟಿ ನಿರ್ಮಾಪಕ ಎಂದೇ ಖ್ಯಾತರಾಗಿದ್ದ ರಾಮು ಅವರ ನಿಧನಕ್ಕೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕನ್ನಡ ಚಲನಚಿತ್ರರಂಗದಲ್ಲಿ 30ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಾಣ ಮಾಡಿದ್ದ ರಾಮು ಅವರು, ಚಿತ್ರಗಳಿಗೆ ಕೋಟಿಗಟ್ಟಲೆ ಬಂಡವಾಳ ಹೂಡುವ ಮೂಲಕ ಕೋಟಿ ನಿರ್ಮಾಪಕ ಎಂಬ ಖ್ಯಾತಿ ಪಡೆದಿದ್ದರು.

ರಾಮು ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ, ಅವರ ಅಗಲಿಕೆಯ ನೋವವನ್ನು ಭರಿಸುವ ಶಕ್ತಿಯನ್ನು ಅವರ ಕುಟುಬ ವರ್ಗದವರಿಗೆ ಆ ಭಗವಂತನು ಕರುಣಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಅವರು ತಮ್ಮ ಸಂತಾಪದಲ್ಲಿ ಪುರಾಣಿಕ್ ತಿಳಿಸಿದ್ದಾರೆ.