ಕೋವಿಡ್; ಖಾಸಗಿ ಆಸ್ಪತ್ರೆ ಶೇ. 50 ಹಾಸಿಗೆ ಮೀಸಲು

ಬೆಂಗಳೂರು, ಏ. ೮- ಬೆಂಗಳೂರು ನಗರದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ಹೆಚ್ಚಿಸಿ, ಕೊರೊನಾ ತಡೆಗೆ ಮತ್ತಷ್ಟು ಬಿಗಿ ಕ್ರಮಗಳನ್ನು ಜಾರಿಗೊಳಿಸುವುದಾಗಿ ಹೇಳಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ಕೋವಿಡ್ ರೋಗಿಗಳಿಗೆ ಶೇ. ೫೦ ರಷ್ಟು ಹಾಸಿಗೆಗಳನ್ನು ಮೀಸಲಿಡುವಂತೆ ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗುವುದು ಎಂದಿದ್ದಾರೆ.
ಬೆಂಗಳೂರು ನಗರದಲ್ಲಿ ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು, ಬೆಂಗಳೂರು ನಗರ ಮತ್ತು ಗ್ರಾಮೀಣ ಜಿಲ್ಲೆಯ ಹಿರಿಯ ಅಧಿಕಾರಿಗಳ ಜತೆ ವಿಡಿಯೋ ಕಾನ್ಫುರೇನ್ಸ್ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕಳೆದ ಒಂದು ತಿಂಗಳಿನಿಂದ ಸೋಂಕಿತರು ಹೆಚ್ಚಾಗಿದ್ದಾರೆ. ಹೀಗಾಗಿ ಯಾವ ರೀತಿ ಬಿಗಿ ಕ್ರಮ ಕೈಗೊಳ್ಳಬೇಕು, ಪರೀಕ್ಷೆ, ಚಿಕಿತ್ಸೆ ಹೆಚ್ಚಳದ ಬಗ್ಗೆಯೂ ಚರ್ಚೆಗಳನ್ನು ಮಾಡಲಾಯಿತು ಎಂದರು
ಮನೆಯಲ್ಲಿಯೇ ಕ್ವಾರಂಟೈನ್ ಆಗುವವರ ಮೇಲೆ ನಿಗಾವಹಿಸಲು ಬಿಬಿಎಂಪಿ ವ್ಯಾಪ್ತಿಯಲ್ಲಿ ೮೫೦೦ ಭೂಹಂತದ ತಂಡಗಳನ್ನು ರಚಿಸಲಾಗುವುದು. ಇವರುಗಳು ಪ್ರತಿ ಮನೆಗೂ ತೆರಳಿ ಪ್ರತಿಯೊಬ್ಬರ ಬಗ್ಗೆಯೂ ನಿಗಾವಹಿಸಿ ರೋಗಿಯನ್ನು ಪರೀಕ್ಷಿಸುವರು ಎಂದರು.
ಕಳೆದ ಬಾರಿ ಈ ಕೆಲಸ ನೂರಕ್ಕೆ ನೂರರಷ್ಟು ಆಗಿರಲಿಲ್ಲ. ಈಬಾರಿ ಪರಿಣಾಮಕಾರಿಯಾಗಿ ಮಾಡುವುದಾಗಿ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಹೇಳಿದ್ದಾರೆ ಎಂದರು.
ಪ್ರತಿಯೊಂದು ವಾರ್ಡ್‌ಗೂ ಆಂಬ್ಯುಲೆನ್ಸ್‌ನ್ನು ನೀಯೋಜಿಸಲಾಗುವುದು. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ಶೇ. ೫೦ ರಷ್ಟು ಹಾಸಿಗೆಗಳನ್ನು ಮೀಸಲಿಡುವ ಬಗ್ಗೆ ಇಂದು ಖಾಸಗಿ ಆಸ್ಪತ್ರೆಗಳ ಮಾಲೀಕರ ಜತೆ ಚರ್ಚೆ ನಡೆಸಿ ಸೂಚನೆ ನೀಡುವುದಾಗಿ ಅವರು ಹೇಳಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಈಗಾಗಲೇ ಕೋವಿಡ್ ರೋಗಿಗಳಿಗೆ ಹಾಸಿಗೆಗಳನ್ನು ಮೀಸಲಿಡಲಾಗಿದೆ. ಬೆಂಗಳೂರು ನಗರದಲ್ಲಿ ನಿತ್ಯ ೫ ಸಾವಿರ ಪ್ರಕರಣಗಳು ವರದಿಯಾಗುತ್ತಿವೆ. ಹಾಗಾಗಿ ಹೆಚ್ಚಿನ ಹಾಸಿಗೆಗಳು ಅವಶ್ಯವಿದೆ ಎಂದು ಅವರು ಹೇಳಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರದಿಂದ ಬರುವ ರೋಗಿಗಳಿಗೆ ಎಷ್ಟು ಹಾಸಿಗೆ ಮೀಸಲಿಡಬೇಕು, ನೇರವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗುವವರಿಗೆ ಎಷ್ಟು ಹಾಸಿಗೆ ಮೀಸಲಿಡಬೇಕು ಎಂಬ ಬಗ್ಗೆ ಚರ್ಚೆ ನಡೆಸಿ ಎಲ್ಲವನ್ನು ನಿಗದಿ ಮಾಡುತ್ತೇವೆ ಎಂದು ಅವರು ಹೇಳಿದರು.
ಜನತೆ ಸಹ ಮದುವೆ ಸೇರಿದಂತೆ ಎಲ್ಲ ಸಮಾರಂಭಗಳಲ್ಲೂ ಮಾರ್ಗಸೂಚಿಗಳನ್ನು ಪಾಲಿಸಬೇಕು. ಇಲ್ಲವಾದಲ್ಲಿ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳುತ್ತಾರೆ. ಮಾರ್ಗಸೂಚಿಗಳನ್ನು ಪಾಲಿಸದ ಉದ್ಯಮಗಳ ಲೈಸೆನ್ಸ್‌ನ್ನು ರದ್ದು ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಬೆಂಗಳೂರಿನಲ್ಲಿ ಪ್ರತಿದಿನ ಕನಿಷ್ಠ ೧ ಲಕ್ಷ ಪರೀಕ್ಷೆ ಮಾಡುವಂತೆ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.
ಜನಸಂದಣಿ ಹೆಚ್ಚಿರುವ ಪಬ್, ಮಾಲ್, ಪಾರ್ಟಿ ಹಾಲ್, ಮಾರ್ಕೆಟ್‌ಗಳಲ್ಲಿ ತಪಾಸಣೆ ಹೆಚ್ಚು ಮಾಡಲಾಗುವುದು. ಜನತೆ ಬಿಬಿಎಂಪಿ ಅಧಿಕಾರಿಗಳು ತಪಾಸಣೆಗೆ ಬಂದಾಗ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಕೇಂದ್ರ ಸರ್ಕಾರ ಕೆಲಸ ಮಾಡುವ ಸ್ಥಳಗಳಲ್ಲೇ ಲಸಿಕೆ ನೀಡಲು ಒಪ್ಪಿಗೆ ನೀಡಿದೆ. ಅದರಂತೆ ರಾಜ್ಯದಲ್ಲೂ ತಂಡಗಳನ್ನು ರಚಿಸಿ ಕೆಲಸ ಮಾಡುವ ಸ್ಥಳಗಳಿಗೆ ತೆರಳಿ ಕೊರೊನಾ ಚುಚ್ಚುಮದ್ದು ನೀಡಲು ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದರು.