ಕೋವಿಡ್ ಕೇರ್ ಸೆಂಟರ್ ಗಳ ಸ್ಥಗಿತಕ್ಕೆ ಜಿಲ್ಲಾಧಿಕಾರಿ ಸೂಚನೆ

ದಾವಣಗೆರೆ, ನ.04- ಕೋವಿಡ್ ಸೋಂಕಿಗೆ ಒಳಗಾದ ರೋಗಿಗಳಿಗೆ ವೈದ್ಯಕೀಯ ನೆರವು ನೀಡುವ ಸಲುವಾಗಿ ಜಿಲ್ಲೆಯಾದ್ಯಂತ ತೆರೆಯಲಾಗಿದ್ದ ಕೋವಿಡ್ ಕೇರ್‍ಸೆಂಟರ್‍ಗಳನ್ನು ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದ ಕಚೇರಿ ಸಭಾಂಗಣದಲ್ಲಿ ಬುಧುವಾರದಂದು ಏರ್ಪಡಿಸಿದ್ದ ಕೋವಿಡ್ ನಿರ್ವಹಣಾ ಸಮಿತಿ ಸಭೆಯಲ್ಲಿ ಮಾತಾನಾಡಿದ ಅವರು ಜಿಲ್ಲೆಯಲ್ಲಿ ಸದ್ಯ 616 ಸಕ್ರಿಯ ಕೊರೊನಾ ಪಾಸಿಟಿವ್ ಪ್ರಕರಣಗಳಿದ್ದು, ಅವುಗಳಲ್ಲಿ 131 ಜನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 417 ಜನ ಹೋಂ ಐಸೋಲೇಷನ್‍ನಲ್ಲಿ ಇದ್ದು ಸದ್ಯ ಯಾವುದೇ ಕೊರೊನಾ ಪೀಡಿತರು ಈ ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಇಲ್ಲದ ಕಾರಣ ಅವುಗಳನ್ನು ಸ್ಥಗಿತಗೊಳಿಸಬೇಕು. ಹಾಗೂ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿವಿಧ ಇಲಾಖಾ ಸಿಬ್ಬಂದಿಗಳನ್ನು ವಾಪಾಸ್ ಮಾತೃ ಇಲಾಖೆಗೆ ಕಳುಹಿಸಿಕೊಡುವಂತೆ ತಿಳಿಸಿದರು.
ಮುಂದಿನ ಚಳಿಗಾಲದ ದಿನಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುವ ಸುಳಿವಿದ್ದು ತಕ್ಷಣಕ್ಕೆ ಕೈಗೊಳ್ಳಬೇಕಾದ ಎಲ್ಲಾ ಸಿದ್ದತೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದೆ ಹಾಗಾಗಿ ಮತ್ತೆ ಅಗತ್ಯ ಬಿದ್ದರೆ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗುವುದೆಂದೆರು.
ಎಲ್ಲಾ ಆಸ್ಪತ್ರೆ, ನರ್ಸಿಂಗ್ ಹೋಂಗಳು ತಮ್ಮಲ್ಲಿಗೆ ಬರುವ ರೋಗಿಗಳಿಗೆ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ನಡೆಸಬೇಕು. ಒಂದು ವೇಳೆ ಟೆಸ್ಟ್ ಮಾಡಿಸಿಕೊಳ್ಳಲು ನಿರಾಕರಿಸಿದವರಿಗೆ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಇ-ಸಂಜೀವಿನಿಗೆ ಒತ್ತು :- ವಿವಿಧ ಖಾಯಿಲೆಗಳಿಂದ ಬಳಲುತ್ತಿರುವ ಇ-ಸಂಜೀವಿನಿ ಆ್ಯಪ್ ಬಳಸುವ ಮೂಲಕ ಮನೆಯಿಂದಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬಹುದು.
ಆಸ್ಪತ್ರೆಗೆ ತೆರಳಬೇಕಾದ ಪ್ರಕರಣ ಹೊರತುಪಡಿಸಿ ಸಣ್ಣ ಪುಟ್ಟ ಖಾಯಿಲೆಯವರು ವಿಡಿಯೋ ಕಾಲ್ ಮುಖಾಂತರ ಇ-ಪ್ರಿಸ್ಕ್ರಿಪ್ಶÀನ್ ಪಡೆಯಬಹುದು ಇದನ್ನೇ ಹೆಚ್ಚು ಹೆಚ್ಚು ಪ್ರಚುರಪಡಿಸಬೇಕು ಎಂದು ಆರೋಗ್ಯಾಧಿಕಾರಿಗಳು ಸೂಚನೆ ನೀಡಿದರು.
ಡಿಎಲ್‍ಓ ಡಾ.ಮುರುಳೀಧರ್ ಮಾತನಾಡಿ, ಈಗಾಗಲೇ ಇ-ಸಂಜೀವಿನಿಯಡಿ 282 ಜನ ಪ್ರಯೋಜನ ಪಡೆದಿದ್ದಾರೆ. 150 ಜನರ ಕನ್ಸಲ್ಟೇಷನ್ ಆಗಿದೆ.
ಒಂದು ವೇಳೆ ತಮ್ಮ ಬಳಿ ಆಂಡ್ರಾಯ್ಡ್ ಮೊಬೈಲ್ ಫೋನ್ ಇಲ್ಲದವರು ಸಮೀಪದ ಎ.ಎನ್.ಎಮ್ ರವರನ್ನು ಸಂಪರ್ಕಿಸಬಹುದು. ಅವರು ನೆರವು ನೀಡುತ್ತಾರೆ.
ಜಿಲ್ಲೆಯಲ್ಲಿ 260 ಎ.ಎನ್.ಎಮ್‍ಗಳು ಕಾರ್ಯನಿರ್ವಹಿಸುತ್ತಿದ್ದು ಅವರ ಮುಖಾಂತರ ಈ ಕಾರ್ಯಕ್ರಮದ ಪ್ರಚಾರಕ್ಕೆ ಒತ್ತುನೀಡಲಾಗುವುದು ಎಂದರು.
ಸಾಮಾಜಿಕ ಅಂತರ ಪಾಲಿಸದಿದ್ದರೆ ಕ್ರಮ: ಎಲ್ಲಾ ರೀತಿಯ ವ್ಯಾಪಾರ ವಹಿವಾಟು ನಡೆಸುವ ಸಂಸ್ಥೆಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬಹಳ ಮುಖ್ಯವಾಗಿದ್ದು, ಈ ಬಗ್ಗೆ ಸಾಕಷ್ಟು ಅರಿವು ಮೂಡಿಸಲಾಗಿದೆ ಮುಂದಿನ ದಿನಗಳಲ್ಲಿ ಹೆಚ್ಚು ಜನ ಜಂಗುಳಿ ನಡುವೆ ವ್ಯಾಪಾರ ನಡೆಸುವುದು ಕಂಡುಬಂದರೆ 2 ಬಾರಿ ನೋಟಿಸ್ ನೀಡಿ 3ನೇಬಾರಿ ಅಂಗಡಿಗಳನ್ನು ನಿರ್ದಾಕ್ಷಣ್ಯವಾಗಿ ಮುಚ್ಚಿಸಲಾಗುವುದು.
ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ಸಾಮಾಜಿಕ ಅಂತರ, ಮಾಸ್ಕ ಬಳಕೆ ಬಗ್ಗೆ ಪ್ರತಿನಿತ್ಯ ವರದಿ ನೀಡಬೇಕು. ಎಲ್ಲಿಯಾದರೂ ಅಂತರ ಕಾಯ್ದುಕೊಳ್ಳದ, ಮಾಸ್ಕ ಧರಿಸಿದ ಸನ್ನಿವೇಶ ಕಂಡುಬಂದರೆ ಅಧಿಕಾರಿಗಳನ್ನೇ ನೇರ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದರು.
ಆತ್ಮನಿರ್ಭರ ಯೋಜನೆ ಚುರುಕುಗೊಳಿಸಿ: ಪ್ರಧಾನಮಂತ್ರಿಯವರ ಮಹಾತ್ವಾಕಾಂಕ್ಷಿ ಯೋಜನೆಯಾದ ಆತ್ಮ ನಿರ್ಭರ ಯೋಜನೆಯಡಿ ಹೆಚ್ಚು ಹೆಚ್ಚು ಜನರಿಗೆ ಬ್ಯಾಂಕ್ ಮುಖಾಂತರ ಸಾಲಸೌಲಭ್ಯ ನೀಡಬೇಕು. ಬೀದಿಬದಿ ವ್ಯಾಪಾರಿಗಳ ಕಲ್ಯಾಣಕ್ಕಾಗಿ ಆರಂಭಿಸಿರುವ ಯೋಜನೆ ಜಿಲ್ಲೆಯಲ್ಲಿ ಹೆಚ್ಚು ಜನರನ್ನು ತಲುಪುತ್ತಿಲ್ಲ. ಅಧಿಕಾರಿಗಳು ಬ್ಯಾಂಕ್ ಮ್ಯಾನೇಜರ್‍ಗಳು ಸಹಕರಿಸುತ್ತಿಲ್ಲವೆಂದು ಕೆಲವು ಅಧಿಕಾರಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಬ್ಯಾಂಕ್ ಮ್ಯಾನೇಜರ್‍ಗಳಿಗೆ ಲೀಡ್ ಬ್ಯಾಂಕ್ ಮ್ಯಾನೇಜರ್ ರವರಿಂದ ಮಾಗದರ್ಶನ ಕೊಡಿಸಿ, ಒಂದು ವೇಳೆ ಯಾವುದೇ ಬ್ಯಾಂಕ್ ಮ್ಯಾನೇಜರ್ ಈ ವಿಚಾರದಲ್ಲಿ ಅಸಡ್ಡೆತನ ಪ್ರದರ್ಶಸಿದರೆ ಅಥವಾ ಸಾಲ ಮಂಜೂರಾತಿಗೆ ಅಸಹಕಾರ ತೋರಿದರೆ ಅವರ ವಿರುದ್ದ ಸರ್ಕಾರಕ್ಕೆ ನೇರವಾಗಿ ದೂರು ನೀಡಲಾಗುವುದೆಂದರು.
ಸಭೆಯಲ್ಲಿ ಎಡಿಸಿ ಪೂಜಾರ ವೀರಮಲ್ಲಪ್ಪ, ಉಪವಿಭಾಗಾಧಿಕಾರಿ ಮಮತ ಹೊಸಗೌಡರ್, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ, ಡಿಹೆಚ್‍ಓ ನಾಗರಾಜು, ಡಿಎಸ್‍ಓ ಡಾ.ರಾಘವನ್, ನಗರಾಭಿವೃದ್ದಿ ಕೋಶದ ಅಧಿಕಾರಿ ನಜ್ಮ ವಿವಿಧ ಸ್ಥಳೀಯ ಸಂಸ್ಥೆಯ ಮುಖ್ಯಾಧಿಕಾರಿಗಳು ಇದ್ದರು.