ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಿದ ಸಚಿವ ಲಿಂಬಾವಳಿ

ಕೆ.ಆರ್.ಪುರ,ಮೇ.೧೭- ಕೋವಿಡ್ -೧೯ ರ ಹರಡುವಿಕೆ ನಿಯಂತ್ರಣಕ್ಕೆ ಮಹದೇವಪುರ ಬಿಬಿಎಂಪಿ ವಲಯ ವ್ಯಾಪ್ತಿಯ ಮಹದೇವಪುರ ವಿಧಾನಸಭಾ ಕ್ಷೇತ್ರದ ೦೮ ವಾರ್ಡ್‌ಗಳಲ್ಲಿ ಕೋವಿಡ್ ಕೇರ್ ಸೆಂಟರ್ ಹಾಗೂ ಟ್ರೈಯಾಜ್ ಸೆಂಟರ್ ಗಳನ್ನು ಅರಣ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಅರವಿಂದ ಲಿಂಬಾವಳಿ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಮಹದೇವಪುರ ವಿಧಾನಸಭಾ ಕ್ಷೇತ್ರದ ಕಾಡುಗೋಡಿ, ಹಗದೂರು, ಹೂಡಿ, ಗರುಡಾಚಾರ್ ಪಾಳ್ಯ, ದೊಡ್ಡನೆಕ್ಕುಂದಿ, ಮಾರತ್‌ಹಳ್ಳಿ, ಬೆಳ್ಳಂದೂರು, ವಾರ್ಡ್‌ಗಳಲ್ಲಿ ವಾರ್ಡ್ ಮಟ್ಟದ ಡೆಟರ್ ಕಮಿಟಿಯನ್ನು ಪ್ರಾಂಭಿಸಿ ಗ್ರೂಪ್ ’ಎ’ ಮತ್ತು ’ಬಿ’ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ಈ ಡೆಟರ್ ಕಮಿಟಿಗೆ ನೇಮಿಸಲಾಗಿದೆ, ಎಲ್ಲಾ ಪಾಲಿಕೆ ಅಧಿಕಾರಿಗಳು ಇತರೆ ಸರ್ಕಾರಿ ಅಧಿಕಾರಿಗಳು, ೬೦ ಜನ ಸ್ವಯಂ ಸೇವಕರುಗಳು ಈ ಡೆಟರ್ ಕಮಿಟಿಯ ಸದಸ್ಯರುಗಳಾಗಿರುತ್ತಾರೆ, ವಾರ್ಡ್ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಎಲ್ಲಾ ವೈದ್ಯರ ಸೇವೆಯನ್ನು ಸಹ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದರು.
ವಾರ್ಡ್ ಗಳಲ್ಲಿರುವ ಪಾಲಿಕೆ ಕಚೇರಿಗಳನ್ನು ವಾರ್ ರೂಮ್ ಗಳಾಗಿ ಕೆಲಸ ನಿರ್ವಹಿಸಲಿದ್ದು, ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಪ್ರತಿನಿತ್ಯ ೩ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ವೈದ್ಯರನ್ನೂ , ಪ್ಯಾರಾ ಮೆಡಿಕಲ್ ಸಿಬ್ಬಂದಿಗಳನ್ನು ನೇಮಿಸಲಾಗಿದೆ, ಕ್ಷೇತ್ರದ ಪ್ರತಿಯೊಂದು ಕೋವಿಡ್ ಕೇರ್ ಸೆಂಟರ್ ಮತ್ತು ಟ್ರೈಯಾಜ್ ಸೆಂಟರ್‌ಗಳಲ್ಲಿ ಸೋಂಕಿತರಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ಚಿಕಿತ್ಸೆ ಹಾಗೂ ವೈದ್ಯಕೀಯ ಸೌಲಭ್ಯ ಒದಗಿಸಲು ಬದ್ದರಾಗಿದ್ದೇವೆ ಎಂದರು.
ಕೋವಿಡ್ ಕೇರ್ ಸೆಂಟರ್ ಮತ್ತು ಟ್ರೈಯಾಜ್ ಸೆಂಟರ್‌ಗಳ ಮೇಲುಸ್ತುವಾರಿ ಅಧಿಕಾರಿಯನ್ನಾಗಿ ಕೆ.ಚಂದ್ರಶೇಖರ್ ಅವರನ್ನು ನೇಮಿಸಲಾಗಿದೆ.
ಪ್ರತಿಯೊಂದು ಕೋವಿಡ್ ಕೇರ್ ಸೆಂಟರ್‌ನಲ್ಲಿ ಕೋವಿಡ್ ಸೋಂಕಿತರಿಗೆ ಅವಶ್ಯಕವಿರುವ ಪಲ್ಸ್ ಆಕ್ಸಿಮೀಟರ್, ಗ್ರೂಕೊಮೀಟರ್, ಥರ್ಮಾಮೀಟರ್ , ಪಿಪಿಇ ಕಿಟ್‌ಗಳು, ಗ್ಲೌಸ್, ಸ್ಯಾನಿಟೈಜರ್, ಮಾಸ್ಕ್, ಮೆಡಿಕಲ್ ಕಿಟ್, ಆಕ್ಸಿಜನ್ ಕಾನ್ಸಟ್ರೈಟರ್, ಆಕ್ಸಿಜನ್ ಮಾಸ್ಕ್ ಹಾಗೂ ಅವಶ್ಯಕ ಸಿಬ್ಬಂದಿಯನ್ನು ಒದಗಿಸಲಾಗಿದ್ದು ಕ್ಷೇತ್ರದ ಜನತೆ ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಹದೇವಪುರ ವಲಯದ ಜಂಟಿ ಆಯುಕ್ತ ವೆಂಕಟಾ ಚಲಪತಿ, ಡಿಹೆಚ್‌ಒ ಸುರೇಂದ್ರ, ತಹಶಿಲ್ದಾರ್ ಅಜಿತ್ ರೈ, ಮುಖಂಡರಾದ ಮನೋಹರ್ ರೆಡ್ಡಿ, ಜಯಚಂದ್ರ ರೆಡ್ಡಿ, ರಾಜಾ ರೆಡ್ಡಿ, ಎಲ್.ರಾಜೇಶ್, ಬೆಳಂದೂರು ಸುರೇಶ್, ಶ್ರೀಧರ್ ರೆಡ್ಡಿ ಸೇರಿದಂತೆ ಹಲವಾರು ಮುಖಂಡರು, ಅಧಿಕಾರಿಗಳು ಹಾಜರಿದ್ದರು.