ಕೋವಿಡ್ ಕೇರ್ ಸೆಂಟರ್ ಆರಂಭಕ್ಕೆ ಆದಿವಾಸಿಗಳ ಆಕ್ಷೇಪ

ಮಡಿಕೇರಿ,ಏ.೩೦- ಜಿಲ್ಲೆಯ ಕುಶಾಲನಗರ ಸಮೀಪದ ಬಸವನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯುವ ಜಿಲ್ಲಾಡಳಿತದ ಕ್ರಮಕ್ಕೆ ಗ್ರಾಮದ ಆದಿವಾಸಿ ಸಮುದಾಯದವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸದಂತೆ ಪ್ರತಿಭಟನೆ ನಡೆಸಿದ್ದಾರೆ.
ಶಾಲೆಯಲ್ಲಿ ಸೆಂಟರ್ ಆರಂಭಿಸಿದರೆ, ಶಾಲೆಯ ಸುತ್ತಮುತ್ತ ವಾಸಿಸುತ್ತಿರುವ ಸುಮಾರು ೩೦೦ ಕ್ಕೂ ಹೆಚ್ಚು ಆದಿವಾಸಿಗಳಿಗೆ ಕೋವಿಡ್-೧೯ ಸೋಂಕು ಹರಡುವ ಆತಂಕವಿದ್ದು, ಈ ಕಾರಣದಿಂದ ಸೆಂಟರ್ ಆರಂಭಿಸದಂತೆ ನಿವಾಸಿಗಳು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಏರಿಕೆ: ರಾಜ್ಯದಲ್ಲಿ ಅತೀ ಹೆಚ್ಚು ಸೋಂಕು ಹರಡುತ್ತಿರುವ ೧೦ ಜಿಲ್ಲೆಗಳಲ್ಲಿ ಕೊಡಗು ಕೂಡ ಒಂದಾಗಿದೆ. ಪ್ರತಿನಿತ್ಯ ಜಿಲ್ಲೆಯಲ್ಲಿ ಸರಾಸರಿ ೫೦೦ ಕ್ಕಿಂತ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿವೆ.

ಈ ಕಾರಣದಿಂದ ಜಿಲ್ಲೆಯಲ್ಲಿ ಮೂರು ತಾಲೂಕುಗಳ ಸಮುದಾಯ ಆರೋಗ್ಯ ಕೇಂದ್ರಗಳನ್ನು ಕೋವಿಡ್ ಆಸ್ಪತ್ರೆಗಳನ್ನಾಗಿ ಪರಿವರ್ತಿಸಲಾಗಿದೆ. ಜೊತೆಗೆ ಪ್ರತಿ ತಾಲೂಕಿನಲ್ಲಿಯೂ ಕೋವಿಡ್ ಆಸ್ಪತ್ರೆಗಳ ಜೊತೆಗೆ ತಲಾ ಒಂದೊಂದು ಕೋವಿಡ್ ಕೇರ್ ಸೆಂಟರ್ ತೆರೆಯಲಾಗುತ್ತಿದೆ.