ಕೋವಿಡ್ ಕೇರ್ ಸೆಂಟರ್‍ಗಳಿಗೆ ವೈದ್ಯರು ಭೇಟಿ ನೀಡಲಿ: ಕೋನರಡ್ಡಿ


ನವಲಗುಂದ,ಜೂ.1: ತಾಲ್ಲೂಕಿನಲ್ಲಿ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಿದ್ದು ಸ್ವಾಗತಾರ್ಹ. ಆದರೆ ಕೇರ್ ಸೆಂಟರ್‍ಗಳಲ್ಲಿ ಸೋಂಕಿತರನ್ನು ಹಾಕಿ ಮೆಡಿಕಲ್ ಕಿಟ್ ನೀಡಿ 14 ದಿವಸ ಅವರನ್ನು ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಬಿಟ್ಟರೇ ಸೋಂಕಿತರು ಅಧೈರ್ಯದಿಂದ ಆರೋಗ್ಯದಲ್ಲಿ ತೊಂದರೆಯುಂಟು ಮಾಡಿಕೊಳ್ಳುತ್ತಾರೆಂದು ಮಾಜಿ ಶಾಸಕ ಹಾಗೂ ಜೆ.ಡಿ.ಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎನ್.ಎಚ್.ಕೋನರಡ್ಡಿ ಪಟ್ಟಣದ ಜೆ.ಡಿ.ಎಸ್. ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಕೋವಿಡ್ ಕೇರ್ ಸೆಂಟರ್‍ನಲ್ಲಿರುವ ಸೋಂಕಿತರ ಯೋಗಕ್ಷೇಮಕ್ಕಾಗಿ ವೈದ್ಯರು ಬೇಟಿ ನೀಡಿ ಅವರ ಆರೋಗ್ಯ ಸುಧಾರಣೆ ಕುರಿತು ತಿಳಿಸಿದಾಗ ಆ ಸೋಂಕಿತನಿಗೆ ಸ್ವಲ್ಪ ದೈರ್ಯವಾದರು ಬರುತ್ತದೆ. ಮಹಾಮಾರಿಯ ಹೆದರಿಕೆಯಿಂದ ಅನೇಕರು ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಕೋವಿಡ್ ಕೇರ್ ಸೆಂಟರ್‍ನಲ್ಲಿರುವ ಸೋಂಕಿತರ ಯೋಗಕ್ಷೇಮವನ್ನು ದಿನಕ್ಕೆ ಒಂದು ಭಾರಿಯಾದರು ವೈದ್ಯರು ನೋಡಿದರೆ ಸಾಕು ಸೋಂಕಿತ ಚೇತರಿಸಿಕೊಳ್ಳುತ್ತಾನೆಂದು ಹೇಳಿದರು.
ದೇಶದಲ್ಲಿ ಕೋರೋನಾದಿಂದ ಸಾವು ನೋವುಗಳಿಂದ ತತ್ತರಿಸಿದ ಜನತೆಗೆ ಬಿ.ಜೆ.ಪಿ. ನರೇಂದ್ರ ಮೋದಿಯವರು ಪ್ರಧಾನಿಯಾಗಿ 7 ವರ್ಷ ಪೂರೈಸಿದ ಕಾರ್ಯಕ್ರಮದ ನಿಮಿತ್ಯ 1 ಲಕ್ಷ ಹಳ್ಳಿಗಳಲ್ಲಿ ಸೇವಾದಿನ ಹಮ್ಮಿಕೊಂಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋವಿಡ್ ನಿರ್ವಹಣೆಯಲ್ಲಿ ವಿಫಲವಾಗಿದ್ದು ಆ ದೇವರೇ ಸಾರ್ವಜನಿಕರನ್ನು ಕಾಪಾಡಬೇಕು ಎಂದು ಮಾಜಿ ಶಾಸಕ ಎನ್.ಹೆಚ್. ಕೋನರಡ್ಡಿ ಅವರು ಟೀಕಿಸಿದರು.
ಕಠಿಣ ಲಾಕಡೌನ್ ಘೋಷಣೆಯಾದ ನಂತರ ಕರೋನಾ ಪಾಸಿಟಿವ್ ಸಂಖ್ಯೆ ಕಡಿಮೆಯಾಗುತ್ತಿದ್ದು. ಇದಕ್ಕೆ ಸಾರ್ವಜನಿಕರ ಸ್ಪಂದನೆಯೇ ಕಾರಣ ಎಂದರು. ಸರ್ಕಾರ ವಿವಿಧ ಗ್ರಾಮಗಳಲ್ಲಿ ಪ್ರಾರಂಭಿಸಿದ ಕೋವಿಡ್ ಕೇರ ಸೆಂಟರ್‍ಗಳಿಗೆ ಕೇವಲ ಗ್ರಾಮ ಪಂಚಾಯತ್‍ಗೆ 50 ಸಾವಿರ ಅನುದಾನ ಬಿಡುಗಡೆ ಮಾಡುವ ಬದಲು 5 ಲಕ್ಷ ಪ್ರತಿ ಗ್ರಾಮ ಪಂಚಾಯತಗಳಿಗೆ ಸರ್ಕಾರ ಬಿಡುಗಡೆ ಮಾಡಲಿ. ಎಲ್ಲ ಗ್ರಾಮ ಪಂಚಾಯತ ಅಧ್ಯಕ್ಷರು, ಸದಸ್ಯರು ಅಧಿಕಾರಿಗಳು ಕೋರೋನಾ ಓಡಿಸಲು ಶ್ರಮಿಸುತ್ತಿರುವುದಕ್ಕೆ ಅಭಿನಂದಿಸಿದರು. ಜಿಲ್ಲಾಧಿಕಾರಿಗಳು ಮದುವೆಗೆ ಅನುಮತಿ ನೀಡುವುದಿಲ್ಲ ಎಂದು ಆದೇಶ ಮಾಡುವ ಮೊದಲೇ ಗ್ರಾಮಗಳಲ್ಲಿ ವಧು ವರರ ಹಿರಿಯರು ಬಂದು ಬಾಂಧವರು ಮದುವೆ ನಿಶ್ಚಯಿಸಿದ ನಂತರ ಮುಂದೂಡುವದು ಕಷ್ಟ. ಸರ್ಕಾರದ ಆದೇಶದ ಪ್ರಕಾರ ಕರಾರುಗಳನ್ನು ಹಾಕಿ ಮದುವೆ ನೆರವೇರಿಸಲು ಜಿಲ್ಲಾ ಹಾಗೂ ತಾಲ್ಲೂಕು ಆಡಳಿತ ಅನುಮತಿ ನೀಡಲು ನಿರ್ಧಾರ ಮಾಡಬೇಕೆಂದು ಕೋನರಡ್ಡಿ ಅವರು ಒತ್ತಾಯಿಸಿದರು.
ತಾಲೂಕಾ ಆಸ್ಪತ್ರೆಯಲ್ಲಿ ಹೆಚ್ಚಿನ ರೋಗಿಗಳು ಇರುವುದರಿಂದ ಸೋಂಕಿತರು ಹಾಗೂ ರೋಗಿಗಳಿಗೆ ಬಿಸಿನೀರಿನ ಅವಶ್ಯಕತೆ ಇದೆ ಎಂಬುದು ಸಾರ್ವಜನಿಕರ ದೂರ ಬಂದಿರುವುದರಿಂದ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವುದಾಗಿ ಹೇಳಿದರು.
ರೈತರ ಕೃಷಿಗೆ ಬೀಜ, ಗೊಬ್ಬರ ಸಮಯಕ್ಕೆ ಸರಿಯಾಗಿ ವಿತರಣೆಯಾಗಲಿ.
ಮುಂಗಾರು ಆಗಮನಕ್ಕೆ ದಿನಗಣನೆ ಪ್ರಾರಂಭವಾದ ನಂತರ ರೈತರ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಜಮೀನು ಉಳುಮೆ ಮಾಡಿ ಹದ ಮಾಡಿದ ರೈತರು ಒಳ್ಳೆಯ ಬಿತ್ತನೆ ಬೀಜ ಸರಿಯಾಗಿ ವಿತರಣೆ ಮಾಡಲಿ. ಗ್ರಾಮೀಣದಲ್ಲಿ ಕೊರೋನಾ ಹಾವಳಿ ಈಗ ಹೆಚ್ಚಾಗಿದೆ. ಹತ್ತಾರು ಗ್ರಾಮಗಳ ರೈತರು ದಿನ ನಿತ್ಯ ಬೀಜ ಗೊಬ್ಬರಕ್ಕಾಗಿ ಮಾರಾಟ ಕೇಂದ್ರಗಳಲ್ಲಿ ಗುಂಪು ಸೇರಿ ಸಾಮಾಜಿಕ ಅಂತರವಿಲ್ಲದೇ ಕೋರೋನಾ ಹರಡುವ ಸಾಧ್ಯತೆ ಇದೆ. ರೈತರು ಹಾಗೂ ಅಧಿಕಾರಿಗಳು ಇದರ ಬಗ್ಗೆ ಕಾಳಜಿ ವಹಿಸಬೇಕೆಂದು ಹೇಳಿದರು. ಸಾರ್ವಜನಿಕರು ಮಹಾಮಾರಿಯನ್ನು ಎದುರಿಸಲು ಸ್ವಯಂ ಜವಾಬ್ದಾರಿಯನ್ನು ವಹಿಸಿದಾಗ ಮಾತ್ರ ಇದರಿಂದ ಬಚಾವಾಗಲು ಸಾದ್ಯ.
ಇದೇ ಸಮಯದಲ್ಲಿ ಕೋರೋನಾದಿಂದ ಕಠಿಣ ಲಾಕಡೌನದಿಂದ ಪಟ್ಟಣದ ಪತ್ರಕರ್ತರು ಸಹ ತೊಂದರೆ ಅನುಭವಿಸುತ್ತಿದ್ದಾರೆ. ಅವರಿಗೂ ಸ್ವಲ್ಪ ಅನುಕೂಲವಾಗಬೇಕೆಂದು ಪತ್ರಕರ್ತರ ಸದಸ್ಯರಿಗೂ ಕಿರಾಣಿ ಸಾಮಗ್ರಿಗಳ ಕಿಟ್ ಹಾಗೂ ಮಾಸ್ಕಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರುಗಳಾದ ಜೀವನ ಪವಾರ, ಪ್ರಕಾಶ ಶಿಗ್ಲಿ, ಮಹಾಂತೇಶ ಭೋವಿ, ಮೊದೀನಸಾಬ ಶಿರೂರ, ಸುರೇಶ ಮೇಟಿ, ಬಾಬಾಜಾನ ಮಕಾನದಾರ, ಹುಸೇನಬಿ ಧಾರವಾಡ ಇತರರು ಇದ್ದರು.