ಕೋವಿಡ್ ಕೇರ್ ಸೆಂಟರ್‌ನಲ್ಲಿರುವ ಸೋಂಕಿತರಿಗೆ ಆಯುಷ್ ಕಿಟ್ ವಿತರಣೆ

ಕಲಬುರಗಿ,ಮೇ.26:ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರೀಕ್ ನಂತರ ಬಾಲಕಿ ವಸತಿ ನಿಲಯದಲ್ಲಿನ ಕೋವಿಡ್ ಕೇರ್ ಸೆಂಟರ್‌ದಲ್ಲಿರುವ ಸೋಂಕಿತರಿಗೆ ಆಯುಷ್ ಇಲಾಖೆಯಿಂದ ಬುಧವಾರ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುಷ್ ಕಿಟ್ ವಿತರಣೆ ಮಾಡಲಾಯಿತು.

ಸಂಸದ ಡಾ. ಉಮೇಶ ಜಾಧವ ಅವರು ಸೋಂಕಿತರಿಗೆ
ಆಯುಷ್ ಕಿಟ್ ವಿತರಿಸಿ ಮಾತನಾಡಿದ ಅವರು, ಕೋವಿಡ್-19 ಮೊದಲ ಅಲೆಯ ವೇಳೆಯೂ ಆಯುಷ್ ಇಲಾಖೆಯು ಸಾರ್ವಜನಿಕರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಂಬಂಧ ತುಂಬಾ ಶ್ರಮಿಸಿದೆ ಎಂದ ಅವರು ಕೋವಿಡ್-19 ಕುರಿತು ಸಾರ್ವಜನಿಕರಲ್ಲಿ ಇನ್ನು ಹೆಚ್ಚಿನ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ. ಗಿರಿಜಾ ಎಸ್.ಯು ಮಾತನಾಡಿ ರೋಗ ಲಕ್ಷಣ ಇಲ್ಲದವರು ಹಾಗೂ ಜ್ವರ, ತಲೆ ನೋವು, ಮೈಕೈನೋವು, ದೌರ್ಬಲ್ಯ, ನೆಗಡಿ, ಕೆಮ್ಮು ಮುಂತಾದ ಮಿತ ರೋಗ ಲಕ್ಷಣಗಳಿರುವ ಸೋಂಕಿತರು ಆಯುಷ್ ಔಷಧಿಗಳಾದ ಶಂಶಮನವಟಿ, ಚವನ್‌ಪ್ರಾಶ್, ಅಶ್ವಗಂಧ ಚೂರ್ಣ, ಆಯುಷ್-64 ಮಾತ್ರೆ ಮತ್ತು ಯುನಾನಿ ಔಷಧಿಯಾದ ಶರಬತ್-ಇ-ಉನ್ನಾಬ್ ತೆಗೆದುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ಬಿ.ಜಿ ಪಾಟೀಲ್, ಮಾಜಿ ಶಾಸಕ‌ ವಿಶ್ವನಾಥ ಪಾಟಿಲ ಹೆಬ್ಬಾಳ, ಜಿಲ್ಲಾ ಪಂಚಾಯತಿಯ ಮಾಜಿ ಸದಸ್ಯ ಶಿವರಾಜ ಪಾಟೀಲ್ ರದ್ದೆವಾಡಗಿ, ಸ್ತ್ರೀ ರೋಗ ತಜ್ಞೆ ಡಾ. ಜ್ಯೋತಿ, ಮಕ್ಕಳ ತಜ್ಞ ಡಾ. ಮಂಜುನಾಥ ಹಾಗೂ ವೈದ್ಯಾಧಿಕಾರಿ ಡಾ. ಚಿದಾನಂದ ಮೂರ್ತಿ ಉಪಸ್ಥಿತರಿದ್ದರು.