ಕೋವಿಡ್ ಕೇರ್ ಸೆಂಟರ್‌ಗಳ ಪ್ರಾರಂಭಕ್ಕೆ ಕ್ರಮ: ಜೆಸಿಎಂ

ತುಮಕೂರು, ಏ. ೨೩- ಕೋವಿಡ್ ಪ್ರಕರಣಗಳು ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ನಗರ ಸೇರಿದಂತೆ ಎಲ್ಲಾ ತಾಲೂಕುಗಳಲ್ಲಿ ಕನಿಷ್ಠ ೨೦೦ ಹಾಸಿಗೆವುಳ್ಳ ಕೋವಿಡ್ ಕೇರ್ ಸೆಂಟರ್‍ಗಳನ್ನು ಪ್ರಾರಂಭಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಅಧಿಕಾರಿಗಳು ಹಾಗೂ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್ ದೃಢಪಟ್ಟು ಹೋಂ ಐಸೋಲೇಷನಲ್ಲಿರುವ ಸೋಂಕಿತರು ಹೋಂ ಐಸೋಲೇಷನಲ್ಲಿರದೆ ಎಲ್ಲೆಂದರಲ್ಲಿ ಓಡಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಹಾಗಾಗಿ ಹೋಂ ಐಸೋಲೇಷನ್ ಬದಲಾಗಿ ಈ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‍ಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಕ್ಯಾತ್ಸಂದ್ರದ ಕೋವಿಡ್ ಕೇರ್ ಸೆಂಟರ್‌ನ್ನು ಕಳೆದ ಬಾರಿಯಂತೆಯೇ ಈ ಬಾರಿಯೂ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರತಿ ತಾಲ್ಲೂಕಿನಲ್ಲಿ ೨೦೦ ಹಾಸಿಗೆಗಳ ಕೋವಿಡ್ ಕೇರ್ ಸ್ಥಾಪಿಸಲು ಕಳೆದ ಬಾರಿ ಬಳಸಿಕೊಂಡಿದ್ದ ವಸತಿ ನಿಲಯಗಳನ್ನು ಬಳಸಿಕೊಳ್ಳಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಜಿಲ್ಲಾಡಳಿತದಿಂದ ಗುಣಮಟ್ಟದ ಆಹಾರ ಪೂರೈಕೆ ಮಾಡಲಾಗುವುದು ಎಂದರು.
ಕೋವಿಡ್ ಕಾರಣದಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಗೌರವಯುತವಾಗಿ ಮಾಡಬೇಕು. ಯಾವುದೇ ಕಾರಣಕ್ಕೂ ಮೃತದೇಹ ಅಂತ್ಯಸಂಸ್ಕಾರ ವಿಳಂಬವಾಗಬಾರದು. ಕೋವಿಡ್ ಮೃತದೇಹಗಳನ್ನು ಹೆಚ್ಚು ಸಮಯ ಆಸ್ಪತ್ರೆಯಲ್ಲಿ ಇಟ್ಟುಕೊಳ್ಳಬೇಡಿ. ಮೃತಪಟ್ಟ ತಕ್ಷಣವೇ ಅಂತ್ಯಸಂಸ್ಕಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಸೂಚಿಸಿದರು.
ನಗರದಲ್ಲಿರುವ ಚಿತಾಗಾರ ನಿರ್ವಹಣೆಯನ್ನು ಮಾಡಲು ಟಿಜಿಎಂಸಿ ಬ್ಯಾಂಕ್ ಮುಂದೆ ಬಂದಿದೆ. ಅವರಿಗೆ ಈಗಿರುವ ಒಂದು ಒಲೆ ಜತೆಗೆ ಇನ್ನು ಮೂರು ಒಲೆಗಳನ್ನು ನಿರ್ಮಿಸುವಂತೆ ಕೋರಿದ್ದು, ನಿರ್ವಹಣೆಯನ್ನು ಅವರಿಗೆ ವಹಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ ಅವರು, ಇನ್ನುಳಿದ ಸ್ಮಶಾನಗಳನ್ನು ಮಹಾನಗರ ಪಾಲಿಕೆ ನಿರ್ವಹಿಸಬೇಕು ಹಾಗೂ ಸ್ಮಶಾನ ಮತ್ತು ಚಿತಾಗಾರದಲ್ಲಿ ನಿರ್ವಹಿಸುವ ಸಿಬ್ಬಂದಿಗಳಿಗೆ ತಕ್ಷಣವೇ ವೇತನ ಪಾವತಿಸುವಂತೆ ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಅವರಿಗೆ ನಿರ್ದೇಶಿಸಿದರು.
ಜಿಲ್ಲೆಯಲ್ಲಿ ಆಮ್ಲಜನಕ ಮತ್ತು ರೆಮ್ಡಿಸಿವಿಯರ್ ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಬೇಡಿಕೆಗೆ ಅನ್ವಯ ಆಮ್ಲಜನಕ ಮತ್ತು ರೆಮ್ಡಿಸಿವಿಯರ್ ಪೂರೈಕೆ ಮಾಡಿಕೊಳ್ಳುವ ಬಗ್ಗೆ ಅಗತ್ಯ ಕ್ರಮ ವಹಿಸಬೇಕು. ಜಿಲ್ಲೆಗೆ ಪೂರೈಕೆಯಾಗುವ ರೆಮ್ಡಿಸಿವಿಯರ್ ಯಾವುದೇ ಕಾರಣಕ್ಕೂ ಕಾಳಸಂತೆ/ಅಕ್ರಮವಾಗಿ ಮಾರಾಟವಾಗದಂತೆ ಕ್ರಮ ವಹಿಸಬೇಕು ಎಂದು ಜಿಲ್ಲಾ ಔಷಧ ನಿಯಂತ್ರಕಿ ಮಮತಾ ಅವರಿಗೆ ಸೂಚನೆ ನೀಡಿದರು.
ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರ ಆರೋಗ್ಯದ ಬಗ್ಗೆ ಸೂಕ್ತವಾಗಿ ನಿಗಾವಣೆ ಮಾಡಿ ಮಾನವೀಯ ದೃಷ್ಠಿಯಿಂದ ಕೋವಿಡ್ ಸೋಂಕಿತರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಹಾಗೂ ಚಿಕಿತ್ಸೆಯಲ್ಲಿ ಯಾವುದೇ ರೀತಿಯ ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಸುರೇಶ್ ಬಾಬು ಅವರಿಗೆ ಸೂಚಿಸಿದರು.