ಕೋವಿಡ್ ಕೇರ್ ಕೇಂದ್ರಗಳಿಗೆ ಅಧಿಕಾರಿಗಳ ಭೇಟಿ


ಬ್ಯಾಡಗಿ, ಏ29: ಕೋವಿಡ್ ಎರಡನೇ ಹಂತದ ಅಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ತಾಲೂಕಾ ಆಡಳಿತದ ವತಿಯಿಂದ ಪಟ್ಟಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯ ಹಾಗೂ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಗಳಲ್ಲಿ ತೆರೆಯಲಾಗಿರುವ 100 ಹಾಸಿಗೆಯುಳ್ಳ “ಕೋವಿಡ್ ಕೇರ್” ಕೇಂದ್ರಗಳಿಗೆ ಹಾವೇರಿಯ ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ ಅವರು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
“ಕೋವಿಡ್ ಕೇರ್” ಕೇಂದ್ರಗಳ ಪರಿಶೀಲನೆಯ ನಂತರ ಮಾತನಾಡಿದ ಅವರು, ತಾಲೂಕಿನ ಕೋವಿಡ್ ಸೊಂಕಿತರಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಪಟ್ಟಣದಲ್ಲಿ ತೆರೆದಿರುವ ಎರಡು ಕೇಂದ್ರಗಳಲ್ಲಿ 100 ಹಾಸಿಗೆಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಕೇಂದ್ರಗಳಲ್ಲಿ ಕೋವಿಡ್ ಸೋಂಕಿತರಿಗೆ ವಸತಿ, ಸೂಕ್ತ ಊಟದ ವ್ಯವಸ್ಥೆ ಹಾಗೂ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆಯನ್ನು ಯಾವುದೇ ಕಾರಣಕ್ಕೂ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಕೈಗೊಳ್ಳಬೇಕು ಎಂದು ತಹಶೀಲ್ದಾರ ರವಿಕುಮಾರ ಕೊರವರ, ಪುರಸಭಾ ಮುಖ್ಯಾಧಿಕಾರಿ ವಿ.ಎಂ.ಪೂಜಾರ ಮತ್ತು ತಾಲೂಕಾ ಆರೋಗ್ಯಾಧಿಕಾರಿ ಸುಹೀಲ್ ಹರವಿ ಅವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತಾಪಂ ಕಾರ್ಯ ನಿರ್ವಹಣಾಧಿಕಾರಿ ಎ.ಟಿ.ಜಯಕುಮಾರ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎನ್.ತಿಮ್ಮಾರೆಡ್ಡಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಟಿ.ಲಮಾಣಿ, ಹಿಂದುಳಿದ ವರ್ಗಗಳ ಇಲಾಖಾಧಿಕಾರಿ ಸಿ.ಬಿ.ಪ್ರಸಾದಿಮಠ, ತಾಲೂಕಾ ಆರೋಗ್ಯ ಕೇಂದ್ರದ ವ್ಯವಸ್ಥಾಪಕ ಸದಾನಂದ ಚಿಕ್ಕಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.