ಕೋವಿಡ್ ಕೇಂದ್ರಗಳಿಗೆ ಮೂಲಭೂತ ಸೌಕರ್ಯ ವ್ಯವಸ್ಥೆ

ಹನೂರು: ತಾಲ್ಲೂಕು ವ್ಯಾಪ್ತಿಯ ಗ್ರಾಮಗಳಲ್ಲಿ ಕೊರೊನಾ ಸೋಂಕು ಉಲ್ಭಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಸೂಚನೆ ಮೇರೆಗೆ ಏಕಲವ್ಯ ಹಾಗೂ ಮೊರಾರ್ಜಿ ವಸತಿ ಶಾಲೆಗಳಲ್ಲಿ ಕೋವಿಡ್ ಸೆಂಟರ್ ತೆರೆಯುವ ದಿಸೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ವ್ಯವಸ್ಥೆಯನ್ನು ಕೈಗೊಳ್ಳಲಾಗುತ್ತಿದೆ ಎಂದು ತಾಲ್ಲೂಕು ದಂಡಾಧಿಕಾರಿ ಜಿ.ಹೆಚ್.ನಾಗರಾಜು ಇಂದಿಲ್ಲಿ ತಿಳಿಸಿದರು.
ಹನೂರು ಸಮೀಪದ ಏಕಲವ್ಯ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಕೋವಿಡ್ ಸೋಂಕಿತರ ಅನುಕೂಲಕ್ಕಾಗಿ ನೆಲಹಾಸು, ಹೊದಿಕೆ ಹಾಗೂ ಇನ್ನಿತರೆ ಗೃಹ ಬಳಕೆಯ ವಸ್ತುಗಳ ಸೌಕರ್ಯ ಕಲ್ಪಿಸುವ ವ್ಯವಸ್ಥೆಯನ್ನು ಕೈಗೊಂಡ ವೇಳೆ ಅವರು ಸುದ್ದಿಗಾರರೊಡನೆ ಮಾತನಾಡಿದರು.
ಗ್ರಾಮೀಣ ಭಾಗಗಳಲ್ಲಿ ಕೊರೊನಾ ಸೋಂಕು ತೀವ್ರವಾಗಿ ಹರಡಿದರೆ ಮುಂಜಾಗ್ರತ ಕ್ರಮವಾಗಿ ಇಲ್ಲಿ ಹೋಂ ಐಸೋಲೆಷನ್ ಹಾಗೂ ಚಿಕಿತ್ಸೆ ನೀಡುವ ಸಂಬಂಧ ಮುಂದಿನ ದಿನಗಳಲ್ಲಿ ಕ್ರಮ ವಹಿಸಲಾಗುವುದು. ಸದ್ಯಕ್ಕೆ ಕೋವಿಡ್ ಸೆಂಟರ್‍ಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳ ಕೊರತೆ ಇದೆ. ಮುಂದೆ ಹಿರಿಯ ಅಧಿಕಾರಿಗಳ ಸಲಹೆ ಮತ್ತು ಸೂಚನೆ ಮೇರೆಗೆ ವೈದ್ಯಕೀಯ ಸೌಲಭ್ಯವನ್ನು ಒದಗಿಸುವ ದಿಸೆಯಲ್ಲಿ ಕ್ರಮ ವಹಿಸಲಾಗುವುದು ಎಂದರು.
ಶಾಸಕ ಆರ್.ನರೇಂದ್ರ ಅವರ ಸಲಹೆಯನ್ನು ಚಾಚು ತಪ್ಪದೇ ಪಾಲಿಸಲಾಗುವುದು: ನೆನ್ನೆ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಶಾಸಕ ಆರ್.ನರೇಂದ್ರ ಅವರು, ಸೋಂಕಿತರು ಮನೆಯಿಂದ ಓಡಾಡುತ್ತಿದ್ದಾರೆ ಅಂತವರನ್ನು ನಿಯಂತ್ರಿಸುವ ಸಂಬಂಧ ಸೋಂಕಿತರ ಮನೆ ಸುತ್ತಮುತ್ತಾ ಟೇಪ್ ಅಳವಡಿಸಿ, ಸೂಚನ ಫಲಕಗಳನ್ನು ಅಳವಡಿಸುವ ವ್ಯವಸ್ಥೆಯನ್ನು ಕೈಗೊಳ್ಳುವುದರ ಜೊತೆಗೆ ಅಗತ್ಯತೆ ಮೇರೆಗೆ ಸೋಂಕಿತರನ್ನು ಕೋವಿಡ್ ಸೆಂಟರ್‍ಗಳಲ್ಲಿ ಇರಿಸುವ ವ್ಯವಸ್ಥೆಯನ್ನು ಮಾಡಬೇಕೆಂದು ಸಲಹೆ ನೀಡಿದ್ದಾರೆ ಈ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ವೈದ್ಯಾಧಿಕಾರಿ ಡಾ.ಪ್ರಕಾಶ್, ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳು ಇದ್ದರು.