ಕೋವಿಡ್ ಕುರಿತು ಅಲಕ್ಷ್ಯ ಬೇಡ: ಗುಣಮುಖ ವೈದ್ಯೆ ಡಾ. ಸಂಧ್ಯಾರಾಣಿ ಸಲಹೆ

ಕಲಬುರಗಿ,ಮೇ.1: ಕೋವಿಡ್ ಸೋಂಕಿಗೆ ಹೆದರುವುದು ಅಥವಾ ಅಲಕ್ಷ್ಯ ಮಾಡುವುದನ್ನು ಮಾಡದೇ ಎಚ್ಚರಿಕೆಯಿಂದ ಚಿಕಿತ್ಸೆ ಪಡೆದರೆ ಖಂಡಿತ ರೋಗದಿಂದ ಗುಣಮುಖರಾಗಬಹುದು ಎಂದು ಕೋವಿಡ್ ವಿರುದ್ಧ ಹೋರಾಡಿ ಗೆದ್ದು ಬಂದ ವೈದ್ಯಾಧಿಕಾರಿ ಡಾ. ಸಂಧ್ಯಾರಾಣಿ ಅವರು ಸಲಹೆ ಮಾಡಿದರು.
ಈ ಕುರಿತು ಸುದ್ದಿ ಸಂಸ್ಥೆಯೊಂದಕ್ಕೆ ಮಾತನಾಡಿರುವ ಅವರು, ಮೊದಲು ನಾವು ಪಾಸಿಟಿವ್ ಮನೋಭಾವ ಹೊಂದಿರಬೇಕು. ಅಲಕ್ಷ್ಯ ಮಾಡದೇ ಎಚ್ಚರ ವಹಿಸಬೇಕು. ಮನೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯುವವರು ಹೋಮ್ ಐಸೋಲೇಷನ್ ಕುರಿತು ತಿಳಿದುಕೊಂಡಿರಬೇಕು. ಬಿಪಿ, ಶುಗರ್ ಇರುವವರಿಗೆ ಸೋಂಕು ತಗುಲಿದಾಗ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುವುದು ಉತ್ತಮ ಎಂದರು.
ಮನೆಯಲ್ಲಿಯೇ ಚಿಕಿತ್ಸೆ ಪಡೆಯುವವರು ವೈದ್ಯರೊಂದಿಗೆ ಸಂಪರ್ಕದಲ್ಲಿರಬೇಕು. ನಿತ್ಯ ಟೆಂಪರೇಚರ್, ಪಲ್ಸ್ ಆಕ್ಸಿಮೀಟರ್‍ದಿಂದ ಸ್ಯಾಚುರೇಶನ್ ಲೇವಲ್ ಚೆಕ್ ಮಾಡುತ್ತಿರಬೇಕು. ಒಳ್ಳೆಯ ಪೌಷ್ಠಿಕಾಂಶಯುಕ್ತ ಆಹಾರ ಸೇವನೆ ಮಾಡಬೇಕು. ಹೆಚ್ಚೆಚ್ಚು ನೀರು ಸೇವಿಸಬೇಕು. ಬಿಸಿ ನೀರು ಸೇವನೆ ಅತ್ಯುತ್ತಮ, ಕಷಾಯಿ ಕುಡಿಯಬೇಕು. ನಿಯಮಿತವಾಗಿ ವ್ಯಾಯಾಮ ಮಾಡಬೇಕು ಎಂದು ಅವರು ಹೇಳಿದರು.