ಕೋವಿಡ್ ಕಫ್ರ್ಯೂ: ಮಿತ್ರ ಮಂಡಳಿಯಿಂದ ಬಡವರಿಗೆ ಉಚಿತ ಊಟ ವಿತರಣೆ

ಕಲಬುರಗಿ.ಮೇ.15:ಕೈಯಿಂದ ಎಸೆದ ಕಲ್ಲು ನೂರಡಿ ಹೋಗಿ ಬೀಳುತ್ತದೆ. ಬಂದೂಕಿನಿಂದ ಹೊಡೆದ ಗುಂಡು ಸಾವಿರ ಅಡಿ ಹೋಗಿ ಬೀಳುತ್ತದೆ. ಆದಾಗ್ಯೂ, ಹಸಿದ ಹೊಟ್ಟೆಗೆ ಕೊಟ್ಟ ಊಟ ಸ್ವರ್ಗದ ಬಾಗಿಲಿಗೆ ಹೋಗಿ ಮುಟ್ಟುತ್ತದೆ ಎಂದು ಗ್ರಾಮೀಣ ಪೋಲಿಸ್ ಠಾಣೆಯ ಅಧಿಕಾರಿ ಭಾಷು ಚವ್ಹಾಣ್ ಅವರು ಹೇಳಿದರು.
ನಗರದ ಹುಮ್ನಾಬಾದ್ ರಸ್ತೆಯ ಬೇಲೂರ್ ಕ್ರಾಸ್‍ನಲ್ಲಿ ಶನಿವಾರ 9 ಸ್ಟಾತರ್ ಮಿತ್ರ ಮಂಡಳಿ ವತಿಯಿಂದ ಬಡವರಿಗೆ ಉಚಿತ ಊಟ ವಿತರಿಸಿ ಮಾತನಾಡಿದ ಅವರು, ಲಾಕ್‍ಡೌನ್ ಸಂದರ್ಭದಲ್ಲಿ ಬಡವರಿಗೆ, ನಿರ್ಗತಿಕರಿಗೆ, ಕಾರ್ಮಿಕರಿಗೆ ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಉಚಿತವಾಗಿ ಅನ್ನದಾಸೋಹ ಮಾಡುವುದರೊಂದಿಗೆ ಸರ್ಕಾರ ಮಾಡುವ ಕೆಲಸ ಮಿತ್ರ ಮಂಡಳಿ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ಸಂತೋಷ ವ್ಯಕ್ತಪಡಿಸಿದರು.
ಇಂತಹ ಸಂಕಷ್ಟದ ಸಂದರ್ಭದಲ್ಲಿ ಎಲ್ಲ ಕಾರ್ಯಗಳು ಸರ್ಕಾರದಿಂದಲೇ ಆಗಬೇಕು ಎಂದು ಜನರು ನಿರೀಕ್ಷೆ ಮಾಡದೇ ಸಾರ್ವಜನಿಕರು, ಸಂಘ, ಸಂಸ್ಥೆಗಳು ಇಂತಹ ಕಾರ್ಯಕ್ಕೆ ಮುಂದೆ ಬರಬೇಕು ಎಂದು ಅವರು ಮನವಿ ಮಾಡಿದರು.
ಕೊರೋನಾ ಸೋಂಕು ಹರಡದಂತೆ ಸಾರ್ವಜನಿಕರು ಕಟ್ಟುನಿಟ್ಟಾಗಿ ಮಾಸ್ಕ್ ಧರಿಸುವುದು, ಸ್ಯಾನಿಟೈಜರ್ ಬಳಸುವುದು ಹಾಗೂ ದೈಹಿಕ ಅಂತರ ಕಾಪಾಡುವುದು ನಿಮ್ಮೆಲ್ಲರ ಕರ್ತವ್ಯವಾಗಿದೆ. ಸೋಂಕು ಹರಡದಂತೆ ಮುಂಜಾಗ್ರತೆ ವಹಿಸಿ ಸರ್ಕಾರದ ನಿಯಮ ಪಾಲಿಸುವುದರೊಂದಿಗೆ ನಮಗೆ ಸಹಕಾರ ನೀಡಬೇಕು ಎಂದು ಅವರು ಸಲಹೆ ಮಾಡಿದರು.
ಸಂಘಟನೆಯ ಮುಖ್ಯಸ್ಥ ಬಸವರಾಜ್ ಮಚೆಟ್ಟಿ, ಚಂದ್ರಕಾಂತ್ ಬಿರಾದಾರ್, ಮನೋಹರ್ ಗುತ್ತೇದಾರ್, ಲಕ್ಷ್ಮಫುತ್ರ ಬಿರಾದಾರ್, ಶರಣಬಸಪ್ಪ ಪಾಟೀಲ್ ಉದನೂರ್, ಉಮೇಶ್ ದೇಗಾಂವ್, ವಿಜಯಕುಮಾರ್ ಕಾಳೆ, ಚಂದ್ರಕಾಂತ್ ಮುತ್ತಗಿ, ರವಿ ಮೂಲಗೆ ಮುಂತಾದವರು ಉಪಸ್ಥಿತರಿದ್ದರು.