ಕೋವಿಡ್ ಕಫ್ರ್ಯೂ ನಿಯಮ ಯಶಸ್ವಿಗೊಳಿಸಿ ಸೋಂಕು ತಡೆಗಟ್ಟಿ: ಜಿ.ಪಂ ಸಿಇಓ ಗೋವಿಂದರೆಡ್ಡಿ

ವಿಜಯಪುರ, ಏ.22-ಇಂದಿನಿಂದ ರಾತ್ರಿ 9:00 ಗಂಟೆಯಿಂದ ಕಫ್ರ್ಯೂ ನಿಯಮ ಜಾರಿಯಾಗುತ್ತಿದ್ದು, ಎಲ್ಲಾ ತಹಶೀಲ್ದಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕಫ್ರ್ಯೂ ಯಶಸ್ವಿಗೊಳಿಸುವ ಮೂಲಕ ಕೋವಿಡ್-19 ನಿಯಂತ್ರಣ ಮಾಡಲು ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದರೆಡ್ಡಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಛೇರಿಯ ವಿಡಿಯೋ ಕಾನ್ಪರೆನ್ಸ್ ಹಾಲ್‍ನಲ್ಲಿ ಇಂದು ನಡೆದ ಕೋವಿಡ್-19 ರ ಕುರಿತು ಸರ್ಕಾರದ ಆದೇಶದಲ್ಲಿನ ಮಾರ್ಗಸೂಚಿ ಅನುಷ್ಠಾನ ಕುರಿತು ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು.
ಅದರಂತೆ ಬಾರ್‍ಗಳು ವಾರದ ಐದು ದಿನ ಮಾತ್ರ ತೆರೆಯಲಾಗುತ್ತದೆ. ಶನಿವಾರ ಮತ್ತು ಭಾನುವಾರ ಬಂದ್ ಆಗುವಂತೆ ನೋಡಿಕೊಳ್ಳಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ದೇವಾಲಯಗಳಿಗೆ ಸಾರ್ವಜನಿಕರಿಗೆ ಅವಕಾಶವಿಲ್ಲವೆಂದು ಸೂಚನಾಫಲಕ ಹಾಕಬೇಕು. ಕಲ್ಯಾಣ ಮಂಟಪದಲ್ಲಿ 50 ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ ಎಂದು ನೋಟಿಸ್ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ತಿಳಿಸಿದರು.
ಮದುವೆಗಳಿಗೆ ಅನುಮತಿ ಪಡೆಯುವುದು ಅವಕಾಶವಿದ್ದು 50 ಜನರಿಗೆ ಮಾತ್ರ ಪಾಸ್ ನೀಡಲಾಗುತ್ತದೆ. ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸಿದರೆ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಅವರು ಹೇಳಿದರು.
ನೈಟ್ ಕಫ್ರ್ಯೂ ರಾತ್ರಿ 9:00 ರಿಂದ 6:00 ಗಂಟೆಯವರೆಗಿದ್ದು, ವೀಕೆಂಡ್ ಕಫ್ರ್ಯೂ ಪ್ರತಿ ಶುಕ್ರವಾರ ರಾತ್ರಿ 9:00 ರಿಂದ ಸೋಮವಾರ ಬೆಳಿಗ್ಗೆ 6:00 ಗಂಟೆಯವರೆಗೆ ಇದ್ದು ಸಾರ್ವಜನಿಕರಿಗೆ ನಿಯಮಗಳ ಬಗ್ಗೆ ತಿಳುವಳಿಕೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಕೋಚಿಂಗ್ ಸೆಂಟರ್‍ಗಳಿಗೆ ನೋಟಿಸ್ ನೀಡಿ ಹಾಗೂ ವಸತಿ ನಿಲಯಗಳಿಗೆ, ಶಾಲಾ-ಕಾಲೇಜುಗಳನ್ನು ಮುಚ್ಚುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ತಿಳಿಸಿದರು.
ವಿಡಿಯೋ ಸಂವಾದದಲ್ಲಿ ಮಹಾನಗರ ಪಾಲಿಕೆ ಆಯುಕ್ತರು ಹರ್ಷಾ ಶೆಟ್ಟಿ ಅಪರ ಜಿಲ್ಲಾಧಿಕಾರಿ ರಮೇಶ್ ಕಳಸದ ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿ ರಾಮ್ ಅರಿಸಿದ್ದಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.