ಕೋವಿಡ್ ಕಡೆಗಣಿಸಿ ಬಣ್ಣದಾಟ

ಬೀದರ:ಮಾ.30: ಒಂದೆಡೆ ಪ್ರಖರ ಬಿಸಿಲು, ಇನ್ನೊಂದೆಡೆ ಬಸವಕಲ್ಯಾಣ ಉಪ ಚುನಾವಣೆಯ ಕಾವು, ಎಲ್ಲಕ್ಕಿಂತ ಮಿಗಿಲಾಗಿ
ಕೋವಿಡ್‌-19 ಸೋಂಕಿನ ಭಯ. ಇವೆಲ್ಲವುಗಳ ನಡುವೆಯೇ ಯುವಕರು ಹಾಗೂ ಮಕ್ಕಳು ನಗರದಲ್ಲಿ ಸೋಮವಾರ ಹೋಳಿ ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಕೋವಿಡ್ ನಿಯಮ ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದ್ದರಿಂದ ನಗರ ಪ್ರದೇಶದಲ್ಲಿ ಹೆಚ್ಚು ಜನ ಗುಂಪಾಗಿ ಸೇರಿ ಬಣ್ಣದಾಟದಲ್ಲಿ ತೊಡಗದಂತೆ ಪೊಲೀಸರು ನಿಗಾ ವಹಿಸಿದ್ದರು. ಹೀಗಾಗಿ ಡಿಜೆ ಅಳವಡಿಸಿ ಮಧ್ಯಾಹ್ನದ ವರೆಗೂ ಸಂಗೀತ ನೃತ್ಯಕ್ಕೆ ಹೆಜ್ಜೆ ಹಾಕುತ್ತಿದ್ದವರಿಗೆ ಈ ಬಾರಿ ನಿರಾಶೆ ಉಂಟಾಯಿತು.

ಕೆಲವು ಬಡಾವಣೆಗಳಲ್ಲಿ ಪಾಲಕರೇ ಮನೆಯಂಗಳಲ್ಲಿ ಬಣ್ಣ ತುಂಬಿದ ನೀರಿನ ಬಕೆಟ್‌ಗಳನ್ನು ಇಟ್ಟು ಸೌಂಡ್‌ ಬಾಕ್ಸ್‌ ಅಳವಡಿಸಿ ಮಕ್ಕಳ ಸಂಭ್ರಮ ಇಮ್ಮಡಿಗೊಳ್ಳುವಂತೆ ಮಾಡಿದರು.
ನಗರದ ಓಣಿಗಳಲ್ಲಿ ಮಕ್ಕಳು ಅಲ್ಲಲ್ಲಿ ಗುಂಪು ಗುಂಪಾಗಿ ಸೇರಿ ಪರಸ್ಪರ ಬಣ್ಣ ಎರಚಿದರು.

ಮಕ್ಕಳು ಮನೆಯಂಗಳದಲ್ಲೇ ನಿಂತು ದಾರಿಯಲ್ಲಿ ಹೋಗುತ್ತಿದ್ದವರಿಗೆ ಪಿಚಕಾರಿಗಳ ಮೂಲಕ ಬಣ್ಣ ಚಿಮ್ಮಿಸಿದರು. ಬಣ್ಣದ ಪುಡಿಯನ್ನು ಗಾಳಿಯಲ್ಲಿ ತೂರಿ ಹ್ಯಾಪಿ ಹೋಲಿ ಎಂದು ಅಬ್ಬರಿಸಿದರು. ತಮ್ಮ ಗೆಳೆಯರ ತಂಡ ಮನೆಗಳ ಎದುರಿಗೆ ಬಂದಾಗ ಸಾಮೂಹಿಕವಾಗಿ ಬೊಬ್ಬೆ ಹಾಕಿ ಕುಣಿದಾಡಿದರು.

ಕಾಮದಹನ

ಭಾನುವಾರ ರಾತ್ರಿ ಓಲ್ಡ್‌ಸಿಟಿಯ ಕ್ರಾಂತಿ ಗಣೇಶ ಮಂದಿರದ ಆವರಣದಲ್ಲಿ ಮೊದಲು ಕಾಮದಹನ ಮಾಡಲಾಯಿತು. ನಂತರ ಉಳಿದೆಡೆ ಕಾಮದಹನ ಕಾರ್ಯಕ್ರಮ ನಡೆದವು.

ಲಾಡಗೇರಿ, ನಾವದಗೇರಿ, ಶಿವನಗರ, ಪ್ರತಾಪನಗರ, ಜ್ಯೋತಿ ಕಾಲೊನಿ, ಮೈಲೂರ ಕ್ರಾಸ್, ಗುಂಪಾ, ಮೋಹನ್‌ ಮಾರ್ಕೆಟ್‌ನಲ್ಲಿ ಕುಳ್ಳು, ಕಟ್ಟಿಗೆ ಸೇರಿಸಿ ಅದಕ್ಕೆ ಕಾಮಣ್ಣನ ಮುಖವಾಡ ಇಟ್ಟು ಕಾಮದಹನ ಮಾಡಲಾಯಿತು.

ಮಹಿಳೆಯರು ಕಾಮಣ್ಣನಿಗೆ ಪೂಜೆ ಸಲ್ಲಿಸಿ ಆರತಿ ಬೆಳಗಿ ಹೋಳಿಗೆ ನೈವೇದ್ಯ ಮಾಡಿದರು. ಗ್ರಾಮೀಣ ಪ್ರದೇಶದಲ್ಲಿ ಯುವಕರು ಬೆಂಕಿಯಲ್ಲಿ ಕಡಲೆ, ಶೇಂಗಾ ಹಾಗೂ ಕೊಬ್ಬರಿಯನ್ನು ಸುಟ್ಟು ತಿಂದರು.